ಅಂತರಾಷ್ಟ್ರೀಯ

ಮುಂಬೈ ದಾಳಿ ರೂವಾರಿ ಹಫೀಜ್ ಸಯೀದ್ ಬಂಧನ ಅವಧಿ ವಿಸ್ತರಣೆ ಕೋರಿದ ಪಾಕ್

Pinterest LinkedIn Tumblr


ಲಾಹೋರ್: ಸಾರ್ವಜನಿಕ ರಕ್ಷಣೆ ಕಾಯ್ದೆಯಡಿ ಮುಂಬೈ ದಾಳಿಯ ರೂವಾರಿ, ಉಗ್ರ ಹಫೀಜ್ ಸಯೀದ್ ನ ಗೃಹ ಬಂಧನ ಅವಧಿಯನ್ನು ವಿಸ್ತರಿಸುವಂತೆ ಪಾಕಿಸ್ತಾನದ ಪಂಜಾಬ್ ಸರ್ಕಾರ ಮಂಗಳವಾರ ಕೋರ್ಟ್ ಗೆ ಮನವಿ ಮಾಡಿದೆ.
ಎರಡು ದಿನಗಳ ಹಿಂದೆಷ್ಟೇ ಹಫೀಜ್‌ ಸಯೀದ್‌ ವಿರುದ್ಧದ ಭಯೋತ್ಪಾದನೆ ಸಂಬಂಧಿತದ ಆರೋಪಗಳನ್ನು ಹಿಂಪಡೆದಿದ್ದ ಪಾಕಿಸ್ತಾನ ಇಂದು ಗೃಹ ಬಂಧನ ಅವಧಿಯನ್ನು ವಿಸ್ತರಿಸುವಂತೆ ಮನವಿ ಮಾಡಿದೆ.
ಕಳೆದ ಜನವರಿ 31ರಿಂದ ಗೃಹ ಬಂಧನದಲ್ಲಿರುವ ಜಮಾತ್-ಉದ್-ದವಾ(ಜೆಯುಡಿ) ಮುಖ್ಯಸ್ಥ ಸಯೀದ್ ನನ್ನು ಭಾರಿ ಭದ್ರತೆಯೊಂದಿಗೆ ಇಂದು ಪ್ರಾಂತೀಯ ನ್ಯಾಯಾಂಗ ವಿಮರ್ಶೆ ಮಂಡಳಿ ಮುಂದೆ ಹಾಜರುಪಡಿಸಲಾಯಿತು. ಈ ವೇಳೆ ಸಯೀದ್ ಮತ್ತು ಅವರ ನಾಲ್ವರು ಸಹಚರರಾದ ಅಬ್ದುಲ್ಲಾ ಉಬೈದ್, ಮಲಿಕ್ ಜಾಫರ್ ಇಕ್ಬಾಲ್, ಅಬ್ದುಲ್ ರೆಹಮಾನ್ ಅಬಿದ್ ಮತ್ತು ಖಝಿ ಕಾಶಿಫ್ ಹುಸೇನ್ ಅವರ ಗೃಹ ಬಂಧನವನ್ನು ವಿಸ್ತರಿಸುವಂತೆ ಪಂಜಾಬ್ ಗೃಹ ಇಲಾಖೆಯ ಅಧಿಕಾರಿಗಳು ಮನವಿ ಮಾಡಿದರು.
ಹಫೀಜ್ ಸಯೀದ್ ಬಂಧನ ಅವಧಿ ಅಕ್ಟೋಬರ್ 24ಕ್ಕೆ ಅಂತ್ಯಗೊಳ್ಳಲಿದ್ದು, ಸರ್ಕಾರ ವಿವಿಧ ಆರೋಪಗಳಡಿ ಸಯೀದ್ ನನ್ನು ಮತ್ತೆ ಮೂರು ತಿಂಗಳು ಜೈಲಿನಲ್ಲಿಡಲು ಅವಕಾಶವಿದೆ. ಆದರೆ ನ್ಯಾಯಾಂಗ ವಿಮರ್ಶೆ ಮಂಡಳಿ ಒಪ್ಪಿಗೆ ಪಡೆದು ಬಂಧನ ಅವಧಿಯನ್ನು ವಿಸ್ತರಿಸುವ ಸಾಧ್ಯತೆ ಇದೆ.

Comments are closed.