ಅಂತರಾಷ್ಟ್ರೀಯ

ಯಾವುದೇ ಕ್ಷಣದಲ್ಲಿ ಅಣು ಸಮರ ಸ್ಫೋಟ: ಉ.ಕೊರಿಯ ಎಚ್ಚರಿಕೆ

Pinterest LinkedIn Tumblr


ವಿಶ್ವಸಂಸ್ಥೆ : ”ಕೊರಿಯ ಪರ್ಯಾಯ ದ್ವೀಪದಲ್ಲಿನ ಪರಿಸ್ಥಿತಿ ಅತ್ಯಂತ ಅಪಾಯಕಾರಿ ಮತ್ತು ಅತಿರೇಕದ ಮಟ್ಟಕ್ಕೆ ತಲುಪಿರುವುದರಿಂದ ಯಾವುದೇ ಕ್ಷಣದಲ್ಲಿ ಪರಮಾಣು ಯುದ್ಧ ಸಂಭವಿಸಬಹುದು” ಎಂದು ಉತ್ತರ ಕೊರಿಯ ಎಚ್ಚರಿಕೆ ನೀಡಿದೆ.

ವಿಶ್ವಸಂಸ್ಥೆಯ ಮಹಾಧಿವೇಶನದ ನಿಶ್ಶಸ್ತ್ರೀಕರಣ ಸಮಿತಿಗೆ ವಿಶ್ವಸಂಸ್ಥೆಯಲ್ಲಿನ ಉತ್ತರ ಕೊರಿಯದ ಉಪ ರಾಯಭಾರಿಯಾಗಿರುವ ಕಿಮ್‌ ಇನ್‌ ರಯಾಂಗ್‌ ಅವರು “ಪಾಂಗ್ಯಾಂಗ್‌ಗೆ ರಕ್ಷಣಾ ಅಣ್ವಸ್ತ್ರಗಳನ್ನು ಹೊಂದುವ ಹಕ್ಕಿದೆ” ಎಂದು ಹೇಳಿರುವುದಾಗಿ ಮಾಧ್ಯಮ ವರದಿಗಳು ತಿಳಿಸಿವೆ.

1970ರ ಬಳಿಕ ದಲ್ಲಿ ಉತ್ತರ ಕೊರಿಯವು ಅಮೆರಿಕದಿಂದ ಈ ರೀತಿಯ ಅತಿರೇಕದ ಮತ್ತು ನೇರ ಅಣು ಬೆದರಿಕೆಗೆ ಗುರಿಯಾಗಿರುವ ವಿಶ್ವದ ಏಕೈಕ ರಾಷ್ಟ್ರವಾಗಿದೆ ಎಂದು ಕಿಮ್‌ ಹೇಳಿರುವುದಾಗಿ ವರದಿಯಾಗಿದೆ.

ಮೊದಲ ಅಣು ಬಾಂಬ್‌ ಹಾಕಲಾಗುವ ತನಕವೂ ಉತ್ತರ ಕೊರಿಯದೊಂದಿಗಿನ ಉದ್ವಿಗ್ನ ಸಂಬಂಧಗಳನ್ನು ತಿಳಿಗೊಳಿಸುವ ತನ್ನ ರಾಜತಾಂತ್ರಿಕ ಪ್ರಯತ್ನಗಳೆಲ್ಲವೂ ಜಾರಿಯಲ್ಲಿರುವುದು ಎಂದು ಮೊನ್ನೆ ಭಾನುವಾರವಷ್ಟೇ ಅಮೆರಿಕದ ವಿದೇಶ ಸಚಿವ ರೆಕ್ಸ್‌ ಟಿಲರ್‌ಸನ್‌ ಹೇಳಿದ್ದರು.

ಅಮೆರಿಕ ಮತ್ತು ಉತ್ತರ ಕೊರಿಯ ನಡುವಿನ ಬಿಕ್ಕಟ್ಟನ್ನು ರಾಜತಾಂತ್ರಿಕ ಮಾರ್ಗೋಪಾಯಗಳ ಮೂಲಕ ತಿಳಿಗೊಳಿಸುವ ಎಲ್ಲ ಯತ್ನಗಳನ್ನು ಮಾಡುವಂತೆ ತನಗೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಕೇಳಿಕೊಂಡಿದ್ದಾರೆ ಎಂದು ಟಿಲರ್‌ಸನ್‌ ಹೇಳಿದ್ದರು.

ಸಮರ ದಾಹಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತು ಆತನ ಗ್ಯಾಂಗ್‌ಸ್ಟರ್‌ ರೀತಿಯ ಪಾರಮ್ಯ ಮತ್ತು ಆಕ್ರಮಣಕಾರಿತ್ವದ ವಿರುದ್ಧ ರಾಷ್ಟ್ರವ್ಯಾಪಿ ಹೋರಾಟಕ್ಕೆ ಸಜ್ಜಾಗಿರುವಂತೆ ಉತ್ತರ ಕೊರಿಯ ಈಚೆಗಷ್ಟೇ ತನ್ನ ಪೌರರನ್ನು ಕೇಳಿಕೊಂಡಿತ್ತು.

-ಉದಯವಾಣಿ

Comments are closed.