ಅಂತರಾಷ್ಟ್ರೀಯ

ಗೃಹಬಂಧನದಲ್ಲಿ ಹಫೀಜ್ ಸಯ್ಯೀದ್ …ಹೆಸರು ಬದಲಿಸಿಕೊಂಡ “ಜೆಯುಡಿ”

Pinterest LinkedIn Tumblr

ಇಸ್ಲಾಮಾಬಾದ್: ಭಾರತ ಮತ್ತು ಅಮೆರಿಕದ ಸತತ ಒತ್ತಡಕ್ಕೆ ಮಣಿದ ಪಾಕಿಸ್ತಾನ ಸರ್ಕಾರ ಜಮಾದ್ ಉದ್ ದವಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯ್ಯೀದ್ ಗೆ ಗೃಹ ಬಂಧನ ವಿಧಿಸುತ್ತಿದ್ದಂತೆಯೇ ಸಂಘಟನೆ ತನ್ನ ಹೆಸರು ಬದಲಿಸಿಕೊಂಡು ಉಗ್ರ ಚಟುವಟಿಕೆಯಲ್ಲಿ ತೊಡಗಲು ಮುಂದಾಗಿದೆ.

ಮೂಲಗಳ ಪ್ರಕಾರ ಜಮಾತ್ ಉದ್ ದವಾ ಸಂಘಟನೆಯ ಹೆಸರನ್ನು ಇದೀಗ ತೆಹ್ರೀಕ್ ಆಜಾದಿ ಜಮ್ಮು ಮತ್ತು ಕಾಶ್ಮೀರ (TAJK) ಎಂದು ಮರು ನಾಮಕರಣ ಮಾಡಲಾಗಿದೆ. ಒಂದು ವೇಳೆ ಜಮಾತ್ ಉದ್ ದವಾ ಮೇಲೆ ಪಾಕಿಸ್ತಾನ ಸರ್ಕಾರ ನಿಷೇಧ ಹೇರಿದರೆ ಈ ಹೆಸರಿನ ಮೂಲಕ ಉಗ್ರ ಚಟುವಟಿಕೆ ಮುಂದುವರೆಸಲು ಉಗ್ರ ಸಂಘಟನೆ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ. ತೆಹ್ರೀಕ್ ಆಜಾದಿ ಜಮ್ಮು ಮತ್ತು ಕಾಶ್ಮೀರ ಎಂದರೆ ಪ್ರತ್ಯೇಕ ಸ್ವತಂತ್ರ ಕಾಶ್ಮೀರ ಎಂದು ಅರ್ಥ.

ಇನ್ನು ಜಮಾತ್ ಉದ್ ದವಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯ್ಯೀದ್ ಗೆ ಪಾಕಿಸ್ತಾನ ಸರ್ಕಾರದ ಯೋಜನೆಗಳು ಮೊದಲೇ ತಿಳಿದ ಹಿನ್ನಲೆಯಲ್ಲೇ ಆತ ಸಂಘಟನೆಯ ಹೆಸರು ಬದಲಾಯಿಸಿದ್ದಾನೆ ಎಂದು ಹೇಳಲಾಗುತ್ತಿದೆ. ಇದು ಮಾತ್ರವಲ್ಲದೇ ಮುಂಜಾಗ್ರತಾ ಕ್ರಮವಾಗಿ ಜಮಾತ್ ಉದ್ ದವಾ ಸಂಘಟನೆಯ ಸಿಬ್ಬಂದಿ ಮತ್ತೊಂದು ಹೆಸರನ್ನು ನೋಂದಣಿ ಮಾಡಿಸಿದ್ದಾರೆ ಎಂದೂ ಹೇಳಲಾಗುತ್ತಿದೆ. ಫೆಬ್ರವರಿ 5 ಅನ್ನು ಪಾಕಿಸ್ತಾನದಲ್ಲಿ ಕಾಶ್ಮೀರ ದಿನವನ್ನಾಗಿ ಮೂಲಭೂತ ಸಂಘಟನೆಗಳು ಆಚರಿಸುತ್ತಿದ್ದು, ಅಂದೇ ನೂತನ ಹೆಸರಿನ ಉಗ್ರ ಸಂಘಟನೆಯ ಕಾರ್ಯಗಳನ್ನು ಆರಂಭಿಸಲು ವೇದಿಕೆ ಸಜ್ಜುಗೊಳಿಸಲಾಗುತ್ತಿದೆ. ಟಿಎಜೆಕೆ ಹೆಸರಿನ ಬ್ಯಾನರ್ ಗಳು, ಪೋಸ್ಟರ್ ಗಳು ಮತ್ತು ಹಫೀಜ್ ಸಯ್ಯೀದ್ ಭಾವಚಿತ್ರಗಳನ್ನು ಈಗಾಗಲೇ ಪಾಕಿಸ್ತಾನ ಮತ್ತು ಪಿಒಕೆಯಲ್ಲಿ ಹಾಕಲಾಗಿದ್ದು. ನಾಳಿನ ಕಾರ್ಯಕ್ರಮಕ್ಕೆ ವ್ಯಾಪಕ ಪ್ರಚಾರ ನೀಡಲಾಗುತ್ತಿದೆ.

ಇದೇ ವೇಳೆ ಲಾಹೋರ್ ನಲ್ಲಿ ದೊಡ್ಡ ಪ್ರಮಾಣದ ಕಾಶ್ಮೀರ ಕಾನ್ಫರೆನ್ಸ್ ನಡೆಸಲು ಕೂಡ ನಿರ್ಧರಿಸಲಾಗಿದ್ದು, ಜಮಾತ್ ಉದ್ ದವಾ ಸಂಘಟನೆಯ ಕಚೇರಿಗಳ ಬೋರ್ಡ್ ಗಳನ್ನು ಟಿಎಜೆಕೆ ಬದಲಾಯಿಸಲಾಗಿದೆ. ಅಂತೆಯೇ ಜಮಾತ್ ಉದ್ ದವಾ ಸಂಘಟನೆ ಹೆಸರಲ್ಲಿದ್ದ ಆ್ಯಂಬುಲೆನ್ಸ್ ಗಳು, ದೇಣಿಗೆ ಕೇಂದ್ರಗಳ ಹೆಸರುಗಳನ್ನು ಕೂಡ ಬದಲಿಸಲಾಗುತ್ತಿದೆ. ಒಂದೆಡೆ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯ್ಯೀದ್ ಗೃಹ ಬಂಧನದಲ್ಲಿದ್ದರೂ ಸಂಘಟನೆಯ ಕಾರ್ಯಕರ್ತರು ಮಾತ್ರ ಕಾರ್ಯ ಪ್ರವೃತ್ತರಾಗಿದ್ದು, ವಿವಿಧ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಈ ಹಿಂದೆ 1997ರ ಭಯೋತ್ದಾದಕ ನಿಗ್ರಹ ಕಾಯ್ದೆಯಡಿಯಲ್ಲಿ ಹಫೀಜ್ ಸಯ್ಯೀದ್ ನನ್ನು ಸೋಮವಾರ ಗೃಹಬಂಧನದಲ್ಲಿರಿಸಲಾಗಿತ್ತು. ಹಫೀಜ್ ಜೊತೆ ಜೊತೆಗೇ ಆತನ ಆಪ್ತರಾದ ಅಬ್ದುಲ್ಲಾ ಉಬೇದ್, ಜಾಫರ್ ಇಕ್ಬಾಲ್, ಅಬ್ರುರ್ ರೆಹಮಾನ್ ಅಬಿದ್, ಖಾಜಿ ಕಾಶಿಫ್ ನಯಾಜ್ ಎಂಬುವವರನ್ನು ಲಾಹೋರ್ ನಲ್ಲಿ ಗೃಹ ಬಂಧನದಲ್ಲಿರಿಸಲಾಗಿತ್ತು. ಅಲ್ಲದೆ ಹಫೀಜ್ ಸಯ್ಯೀದ್ ಮುಂದಾಳತ್ವದ ಜಮಾತ್ ಉದ್ ದವಾ ಹಾಗೂ ಫಲಾ ಇ ಇನ್ಸಾನಿಯತ್ ಫೌಂಡೇಷನ್ ಸಂಸ್ಥೆಗಳನ್ನು ವೀಕ್ಷಣೆಯಲ್ಲಿಡಲಾಗಿದೆ.

Comments are closed.