ಅಂತರಾಷ್ಟ್ರೀಯ

ಅಮೆರಿಕನ್ನರನ್ನು ಹೊರಗೋಡಿಸಲು ಇರಾನ್ ನಿರ್ಧಾರ

Pinterest LinkedIn Tumblr


ತೆಹ್ರಾನ್(ಜ.29): ಅಮೆರಿಕಾದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿನ್ನೆಯಷ್ಟೇ 7 ಮುಸ್ಲಿಮ್ ದೇಶಗಳ ನಾಗರಿಕರಿಗೆ ಅಮೆರಿಕಾ ಪ್ರವೇಶನ್ನು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ. ಇವರ ಈ ನಿರ್ಧಾರಕ್ಕೆ ಜಗತ್ತಿನಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಈಗ ಈ ಎಲ್ಲಾ ಬೆಳವಣಿಗೆಗಳ ನಡುವೆ ಅಮೆರಿಕಾದ ಈ ನಿರ್ಧಾರಕ್ಕೆ ಇರಾನ್ ತಕ್ಕ ಪ್ರತ್ಯುತ್ತರ ನೀಡಿದ್ದು, ಇರಾನ್’ನಲ್ಲಿರುವ ಅಮೆರಿಕನ್ನರನ್ನು ಹೊರಗೋಡಿಸುವ ನಿರ್ಧಾರ ಕೈಗೊಂಡಿದೆ.
ಶನಿವಾರದಂದು ಈ ವಿಚಾರವಾಗಿ ಹೇಳಿಕೆ ನೀಡಿರುವ ಇರಾನ್’ನ ವಿದೇಶಾಂಗ ಇಲಾಖೆ ಟ್ರಂಪ್’ರವರ ನಿರ್ಧಾರವನ್ನು ಅವಮಾನಕರ ಎಂದು ಬಣ್ಣಿಸಿದೆ. ಅಲ್ಲದೆ ಇರಾನ್ ನಾಗರಿಕರ ವಿರುದ್ಧ ಅಮೆರಿಕಾ ಜಾರಿಗೊಳಿಸಿದ ಆದೇಶಕ್ಕೆ ಉತ್ತರವೆಂಬಂತೆ ಇರಾನ್’ನಲ್ಲಿರುವ ಅಮೆರಿಕನ್ನರನ್ನು ದೇಶದಿಂದ ಹೊರಗೋಡಿಸಲು ‘ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್’ ನಿರ್ಧರಿಸಿದೆ.
‘ಅಮೆರಿಕಾದಲ್ಲಿರುವ ಇರಾನ್ ನಾಗರಿಕರ ಮೇಲೆ ಹೇರಿರುವ ಈ ಆದೇಶವನ್ನು ಎಲ್ಲಿಯವರೆಗೆ ಹಿಂಪಡೆಯುವುದಿಲ್ಲವೋ, ಅಲ್ಲಿಯವರೆಗೆ ಇರಾನ್ ಕೂಡಾ ಅಮೆರಿಕನ್ನರನ್ನು ತನ್ನ ದೇಶದೊಳಗೆ ಪ್ರವೇಶಿಸಲು ಬಿಡುವುದಿಲ್ಲ. ಅಲ್ಲದೆ ಈಗಾಗಲೇ ಅಮೆರಿಕಾದಲ್ಲಿ ಸಿಲುಕಿಕೊಂಡಿರುವ ತನ್ನ ನಾಗರಿಕರಿಗೆ ಸಹಾಯ ಮಾಡಲು ರಾಯಭಾರಿ ಕಚೇರಿಗೆ ಆದೇಶ ನೀಡಿದ್ದೇವೆ’ ಎಂದು ತಿಳಿಸಿದೆ.
ಟ್ರಂಪ್ ಸಹಿ ಹಾಕಿದ ಆದೇಶದನ್ವಯ ಇರಾನ್, ಇರಾಕ್, ಲಿಬಿಯಾ, ಸೊಮಾಲಿಯಾ, ಸೂಡಾನ್, ಸೀರಿಯಾ ಹಾಗೂ ಯಮನ್’ನ ನಾಗರಿಕರಿಗೆ ಅಮೆರಿಕಾ ಪ್ರವೇಶವನ್ನು ನಿರ್ಭಂದಿಸಲಾಗಿದೆ. ಈ ದೇಶಗಳಲ್ಲಿ ಮುಸ್ಲಿಂ ಪ್ರಾಬಲ್ಯ ಹೆಚ್ಚಿದ್ದು ಅಮೆರಿಕಾವನ್ನು ಉಗ್ರರಿಂದ ರಕ್ಷಿಸಲು ಇಂತಹ ಆದೇಶ ಜಾರಿಗೊಳಿಸಿರುವುದಾಗಿ ಟ್ರಂಪ್ ಸಮರ್ಥನೆ ನೀಡಿದ್ದರು.

Comments are closed.