ಅಂತರಾಷ್ಟ್ರೀಯ

ಒಸಾಮಾ ಬಿನ್ ಲಾಡೆನ್’ನ್ನು ಹತ್ಯೆಗೈಯ್ಯುವ ತಂತ್ರ ರೂಪಿಸಿದ್ದು ಇವರೇ…!

Pinterest LinkedIn Tumblr

ನ್ಯೂಯಾರ್ಕ್: ಬರಾಕ್ ಒಬಾಮಾ ಅಮೆರಿಕಾದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ 8 ವರ್ಷದ ಪಯಣದಲ್ಲಿ ಎಲ್ಲಾ ಹಂತದಲ್ಲೂ ತನಗೆ ಸಾಥ್ ನೀಡಿದ ಉಪ ಅಧ್ಯಕ್ಷ ಜೋ ಬಿಡನ್’ಗೆ(74) ಅಮೆರಿಕಾದ ಅತ್ಯುನ್ನತ ಪ್ರಶಸ್ತಿ ಎನಿಸಿರುವ ‘ಪ್ರೆಸಿಡೆಂಟ್ ಮೆಡಲ್ ಆಫ್ ಫ್ರೀಡಂ’ ನೀಡಿ ಗೌರವಿಸಲಾಗಿದೆ. ವೇಳೆ ಮಾತನಾಡಿದ ಅಧ್ಯಕ್ಷ ಬರಾಕ್ ಒಬಾಮಾ ಕೆಲವೊಂದು ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ.

ಬರಾಕ್ ಒಬಾಮಾರ ಈ ನಿರ್ಧಾರ ಎಲ್ಲರಿಗೂ ಅಚ್ಚರಿ ಮೂಡಿಸಿತ್ತು. ಸನ್ಮಾನ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿದ ಬಿಡೆನ್ ಭಾವುಕರಾದರು. ಅಲ್ಲದೇ ಬರಾಕ್ ಒಬಾಮಾ ಇವರಿಗೆ ಗೌರವ ನೀಡುವುದರೊಂದಿಗೆ ‘ ಜೋ ಬಿಡೆನ್ ಅಮೆರಿಕಾದ ಈವರೆಗಿನ ಉತ್ತಮ ಅತ್ಯುತ್ತಮ ಉಪಾಧ್ಯಕ್ಷ. ಅಮೆರಿಕಾದ ಇತಿಹಾಸದ ಸಿಂಹ’ ಎಂದು ಘೋಷಿಸಿದ್ದಾರೆ. ಅಲ್ಲದೇ ಒಸಾಮಾ ಬಿನ್ ಲಾಡೆನ್’ನ್ನು ಹತ್ಯೆಗೈಯ್ಯುವ ತಂತ್ರವೂ ಇವರೇ ರೂಪಿಸಿದ್ದರು ಎಂಬ ವಿಚಾರವನ್ನು ಬಯಲು ಮಾಡಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಬರಾಕ್ ಒಬಾಮಾ ‘ಅಧ್ಯಕ್ಷನಾಗಿ ಕೊನೆಯ ಬಾರಿ ವ್ಯಕ್ತಿಯೊಬ್ಬನಿಗೆ ದೇಶದ ಅತ್ಯುನ್ನತ ಸಿವಿಲಿಯನ್ ಗೌರವ ನಾನಿಂದು ನೀಡುತ್ತಿದ್ದೇನೆ. ಇವರು ಓರ್ವ ಅಸಾಮಾನ್ಯ ವ್ಯಕ್ತಿಯಾಗಿದ್ದು ಇವರ ವೃತ್ತಿ ಬದುಕು ಕೂಡಾ ಅದ್ಭುತವಾಗಿತ್ತು’ ಎಂದಿದ್ದಾರೆ.

‘ಡೆಲಾವೆಯರ್’ನ ಜನರು ಜೋ ಬಿಡೆನ್’ರವರು 29 ವರ್ಷದವರಾಗಿದ್ದ ಸಂದರ್ಭದಲ್ಲಿ ಸೆನೆಟ್’ನಲ್ಲಿ ಆಯ್ಕೆ ಮಾಡಿದ್ದರು. ಕಳೆದ ಎಂಟುವರೆ ವರ್ಷಗಳ ಹಿಂದೆ ಅವರನ್ನು ನಾನು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಿಕೊಂಡೆ. ಈ ಪಯಣದಲ್ಲಿ ಒಂದು ಕ್ಷಣವೂ ಅವರು ಕೈಗೊಂಡ ನಿರ್ಧಾರದ ಮೇಲೆ ನನಗೆ ಸಂದೇಹ ಮೂಡಿಲ್ಲ. ಅವರು ಕೇವಲ ನಾನು ಮಾಡಿದ ಉತ್ತಮ ಆಯ್ಕೆಯಾಗಿರಲಿಲ್ಲ, ಬದಲಾಗಿ ಇಡೀ ಅಮೆರಿಕಾದ ಜನತೆ ಮಾಡಿದ ಓರ್ವ ಅದ್ಭುತ ಹಾಗೂ ಅತ್ಯುತ್ತಮ ಆಯ್ಕೆಯಾಗಿದ್ದರು’ ಎಂದಿದ್ದಾರೆ.

ಇದೇ ಸಂದರ್ಭದಲ್ಲಿ ಮಾತನಾಡಿದ ಜೋ ಬಿಡೆನ್ ‘ನಾನು ಸಲ್ಲಿಸಿದ ಸೇವೆಯನ್ನು ಗಮನಿಸಿದರೆ, ಈ ಗೌರವ ಬಹಳ ಹೆಚ್ಚಾಯ್ತು. ಮಿಸ್ಟರ್ ಪ್ರೆಸಿಡೆಂಟ್, ನಾನು ನಿಮಗೆ, ನಿಮ್ಮ ಗೆಳೆತನ ಹಾಗೂ ನಿಮ್ಮ ಕುಟುಂಬಕ್ಕೆ ಋಣಿಯಾಗಿದ್ದೇನೆ’ ಎಂದು ಭಾವುಕರಾಗಿ ನುಡಿದಿದ್ದಾರೆ.

Comments are closed.