ವಾಷಿಂಗ್ಟನ್: ಜಾಗತಿಕ ತಾಪಮಾನ ನಿಯಂತ್ರಣಕ್ಕೆ ವಿಶ್ವಸಂಸ್ಥೆ ಹಲವು ಕ್ರಮಗಳನ್ನು ಕೈಗೊಂಡು ಹೆಚ್ಚಾಗುತ್ತಿರುವ ಜಾಗತಿಕ ತಾಪಮಾನ ನಿಯಂತ್ರಣಕ್ಕೆ ಯತ್ನ ನಡೆಸುತ್ತಿರುವ ಬೆನ್ನಲ್ಲೇ ಅಂಟಾರ್ಕ್’ಟಿಕದಲ್ಲಿ ಆತಂಕಕಾರಿ ಬೆಳವಣಿಗೆಯೊಂದು ನಡೆದಿದೆ.
ಜಾಗತಿಕ ತಾಪಮಾನದಿಂದಾಗಿ ಮಂಜುಗಡ್ಡೆಗಳು ಕರಗಿ ಸಮುದ್ರ ಮಟ್ಟ ಏರುತ್ತಿರುವ ಆತಂಕ ಪರಿಸ್ಥಿತಿಯಲ್ಲೇ ವಿಶ್ವದ ಬೃಹತ್ ಮಂಜುಗಡ್ಡೆ ಪ್ರದೇಶಗಳಲ್ಲಿ ಒಂದಾದ ಅಂಟಾರ್ಕ್’ಟಿಕದಲ್ಲಿ ಬೃಹತ್ ಮಂಜುಗೆಡ್ಡೆ ಪ್ರದೇಶದಲ್ಲಿ ಬಿರುಕು ಬೀಳುವ ಮೂಲಕ ಭಾರಿ ಆತಂಕ ಸೃಷ್ಟಿ ಮಾಡಿದೆ. ಅಂಟಾರ್ಕ್’ಟಿಕದಲ್ಲಿರುವ ಲಾರ್ಸೆನ್ ಸಿ ಪ್ರದೇಶದ ಸುಮಾರು 5 ಸಾವಿರ ಚದರ ಕಿ.ಮೀ. ವಿಸ್ತಾರದ ಬೃಹತ್ ಮಂಜುಗಡ್ಡೆ ಹೋಳಾಗುವ ಸ್ಥಿತಿ ತಲುಪಿದೆ. ಈ ಮಂಜುಗಡ್ಡೆ ಸಮುದ್ರ ಸೇರಿದಲ್ಲಿ ಜಾಗತಿಕ ಸಮುದ್ರದ ನೀರಿನ ಮಟ್ಟ 4 ಇಂಚು ಏರಲಿದೆ ಎಂದು ವಿಜ್ಞಾನಿಗಳು ಆಂತಕ ವ್ಯಕ್ತಪಡಿಸಿದ್ದಾರೆ.
ಅಂಟಾರ್ಕ್’ಟಿಕ್ನ ಲಾರ್ಸೆನ್ ಸಿ ಮಂಜುಗಡ್ಡೆಯಲ್ಲಿ 2016ರ ಆರಂಭದಲ್ಲಿ 110 ಕಿ.ಮೀ. ಉದ್ದ, 299 ಅಡಿ ಅಗಲ ಹಾಗೂ 500 ಮೀಟರ್ ಆಳದ ಬಿರುಕು ಪತ್ತೆಯಾಗಿತ್ತು. ಕಳೆದ ಡಿಸೆಂಬರ್ನಲ್ಲಿ ಈ ಬಿರುಕು ಮತ್ತೆ 18 ಕಿ.ಮೀ. ವಿಸ್ತರಿಸಿತ್ತು. ಈಗ ಮತ್ತೆ ಈ ಬಿರುಕು ವಿಸ್ತರಿಸಿದ್ದು, ಕೇವಲ 20 ಕಿ.ಮೀ ವರೆಗಿನ ಮಂಜುಗೆಡ್ಡೆಯ ಆಸರೆಯೊಂದಿಗೆ ಅಂಟಿಕೊಂಡಿದೆ. ಹೀಗಾಗಿ ಇದು ಯಾವುದೇ ಸಂದರ್ಭದಲ್ಲಿ ಲಾರ್ಸೆನ್ ಸಿ ಪ್ರದೇಶದಿಂದ ಬೇರ್ಪಟ್ಟು ಹೋಳಾಗಿ ಸಮುದ್ರ ಸೇರುವ ಅಪಾಯವಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇತ್ತೀಚೆಗೆ ನಾಸಾ ಬಿಡುಗಡೆ ಮಾಡಿದ್ದ ಚಿತ್ರಗಳು ಈ ವಿಚಾರವನ್ನು ಸ್ಪಷ್ಟಪಡಿಸಿದ್ದು, ಪ್ರಸ್ತುತ ಹೋಳಾಗಲಿರುವ ಮಂಜುಗೆಡ್ಡೆಯಿಂದಾಗಿ ಲಾರ್ಸೆನ್ ಸಿ ಮಂಜುಗೆಡ್ಡೆಯ ಶೇ.9ರಿಂದ 12 ಭಾಗ ನಾಶವಾಗುವ ಸಾಧ್ಯತೆ ಇದೆ. ಹೋಳಾದ ಚೂರು ಅಮೆರಿಕದ ಡೆಲವಾರೆ ನದಿಗಿಂತಲೂ ದೊಡ್ಡದಾಗಿರಲಿದ್ದು, ಮಿಡಾಸ್ ಪ್ರಾಜೆಕ್ಟ್ನ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ಮಿಡಾಸ್ ಪ್ರಾಜೆಕ್ಟ್ನ ಸಂಶೋಧಕರು ಕಳೆದ ಮೂರು ವರ್ಷಗಳಿಂದ ಈ ಮಂಜುಗಡ್ಡೆಯ ಸ್ಥಿತಿಗತಿ ಅಧ್ಯಯನ ನಡೆಸುತ್ತಿದ್ದಾರೆ. ಇದು ಜಗತ್ತಿನ 10ನೇ ಅತಿ ದೊಡ್ಡ ಮಂಜುಗಡ್ಡೆಯಾಗಿದೆ.
ಲೆರ್ಸೆನ್ ಸಿ ಮಂಜುಗಡ್ಡೆಯ ಹೋಳು 5 ಸಾವಿರ ಚದರ ಕಿ.ಮೀ. ವಿಸ್ತಾರವಿದ್ದು ಅದು ಕರಗಿ ಸಮುದ್ರ ಸೇರಿದಲ್ಲಿ ಜಾಗತಿಕ ಸಮುದ್ರದ ನೀರಿನ ಮಟ್ಟ 10 ಸೆಂಟಿಮೀಟರ್ ಅಂದರೆ 4 ಇಂಚು ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಮಂಜುಗಡ್ಡೆ ಹೋಳಾಗುವುದರಿಂದ ಅಂಟಾರ್ಕ್’ಟಿಕದ ಪ್ರದೇಶದಲ್ಲಿ ಗಮನಾರ್ಹ ವ್ಯತ್ಯಾಸ ಕಂಡುಬರಲಿದೆ. ಈ ಬೆಳವಣಿಗೆಯ ನಂತರ ಉಳಿದ ಮಂಜುಗಡ್ಡೆ ದುರ್ಬಲವಾಗುತ್ತದೆ. ಮುಂದಿನ ಕೆಲ ವರ್ಷಗಳಲ್ಲಿ ಅದು ಕೂಡ ಲಾರ್ಸೆನ್ ಬಿ ಮಂಜುಗಡ್ಡೆಯ ಮಾದರಿಯಲ್ಲಿ ಹಲವು ಚೂರುಗಳಾಗಿ ಛಿದ್ರವಾಗುವ ಸಾಧ್ಯತೆಯಿದೆ ಎನ್ನಲಾಗಿದೆ.
Comments are closed.