ಅಂತರಾಷ್ಟ್ರೀಯ

ಫ್ಲೋರಿಡಾ ವಿಮಾನ ನಿಲ್ದಾಣದಲ್ಲಿ ಗುಂಡಿನ ದಾಳಿ: 5 ಸಾವು, 8 ಮಂದಿಗೆ ಗಾಯ

Pinterest LinkedIn Tumblr

ವಾಷಿಂಗ್ಟನ್: ಅಮೆರಿಕದ ಫ್ಲೋರಿಡಾ ಏರ್‍ಪೋರ್ಟ್‍ನಲ್ಲಿ ಶುಕ್ರವಾರದಂದು ದುಷ್ಕರ್ಮಿಯೊಬ್ಬ ಗುಂಡಿನ ದಾಳಿ ನಡೆಸಿದ್ದು, ಐವರು ಸಾವನ್ನಪಿದ್ದಾರೆ.

ಫ್ಲೋರಿಡಾದ ಫೋರ್ಟ್ ಲಾಡೆರ್‍ಡೇಲ್ ಅಂತರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಪ್ರಯಾಣಿಕರು ಲಗೇಜ್‍ಗಳನ್ನು ತೆಗೆದುಕೊಳ್ಳುವ ಸ್ಥಳದಲ್ಲಿ ದುಷ್ಕರ್ಮಿ ಅದಾಗಲೇ ತಪಾಸಣೆಯಾಗಿದ್ದ ತನ್ನ ಬ್ಯಾಗ್‍ನಿಂದ ಗನ್ ತೆಗೆದು ಮನಸೋ ಇಚ್ಛೆ ಶೂಟ್ ಮಾಡಿದ್ದಾನೆ. ಘಟನೆಯಲ್ಲಿ 5 ಮಂದಿ ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ರೆ, 8ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ.

ಗುಂಡಿನ ದಾಳಿ ನಡೆಸಿದ ಪಾತಕಿಯನ್ನು 26 ವರ್ಷದ ಎಸ್ಟಾಬೆನ್ ಸ್ಯಾಂಟಿಯಾಗೋ ಎಂದು ಗುರುತಿಸಲಾಗಿದ್ದು, ಪೊಲೀಸರು ಈತನನ್ನು ವಶಕ್ಕೆ ಪಡೆದಿದ್ದಾರೆ. ಸ್ಯಾಂಟಿಯಾಗೋ ಬಳಿ ಅಮೆರಿಕ ಮಿಲಿಟರಿಯ ಐಡೆಂಟಿಟಿ ಕಾರ್ಡ್ ಇತ್ತು ಎಂದು ಅಧಿಕಾರಿಗಳು ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ. ಈತ 2007 ರಿಂದ 2016ರವರೆಗೆ ಪೂರ್ಟೊ ರಿಕೋ ನ್ಯಾಷನಲ್ ಗಾರ್ಡ್ ಮತ್ತು ಅಲಾಸ್ಕಾ ಗಾರ್ಡ್ ಆಗಿ ಕೆಲಸ ನಿರ್ವಹಿಸಿದ್ದ ಎಂದು ವರದಿಯಾಗಿದೆ. ದಾಳಿ ಹಿಂದಿನ ಉದ್ದೇಶವೇನೆಂಬುದು ಸದ್ಯಕ್ಕೆ ತಿಳಿದುಬಂದಿಲ್ಲ.

ಗುಂಡಿನ ದಾಳಿ ನಡೆಸುತ್ತಿರುವ ವಿಚಾರ ತಿಳಿಯುತ್ತಿದ್ದಂತೆ ತಕ್ಷಣ ವಿಮಾನ ನಿಲ್ದಾಣದಲ್ಲಿನ ಎಲ್ಲಾ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಿ ಪ್ರಯಾಣಿಕರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅಲ್ಲಿನ ಅಧಿಕಾರಿಗಳು ಹೇಳಿಕೊಂಡಿದ್ದಾರೆ.

ಬಂಧಿತ ವ್ಯಕ್ತಿ ಇರಾಕ್ ಭದ್ರತಾ ಪಡೆಯೊಂದಿಗೆ ಕೆಲಸ ಮಾಡುತ್ತಿದ್ದ. ಆದರೆ, ಕೆಲಸದಲ್ಲಿ ಅತೃಪ್ತಿ ಕಂಡು ಬಂದ ಹಿನ್ನಲೆಯಲ್ಲಿ ಈತನನ್ನು ಅಲ್ಲಿನ ಅಧಿಕಾರಿಗಳು ಹುದ್ದೆಯಿಂದ ಕಿತ್ತುಹಾಕಿದ್ದರು. ಗುಂಡಿನ ದಾಳಿ ನಡೆಸಿದ ಬಳಿಕ ಸ್ಥಳದಲ್ಲಿದ್ದ ಭದ್ರತಾಧಿಕಾಗಳು ಈತನನ್ನು ಬಂಧನಕ್ಕೊಳಪಡಿಸಿದ್ದಾರೆ. ದಾಳಿಗೆ ಪ್ರಮುಖ ಕಾರಣಗಳು ತಿಳಿದುಬಂದಿಲ್ಲ. ಪ್ರಸ್ತುತ ಪೊಲೀಸರು ತನಿಖೆ ನಡೆಸುತ್ತಿದ್ದು, ತನಿಖೆ ಬಳಿಕವಷ್ಟೇ ಸತ್ಯಾಂಶ ಹೊರಬರಬೇಕಿದೆ.

ಇಸ್ಟಬನ್ ಸ್ಯಾಂಟಿಗೊ ಸಹೋದರ ಆತನ ಬಗ್ಗೆ ಹೇಳಿಕೊಂಡಿದ್ದು, ನನ್ನ ತಮ್ಮ ಮಾನಸಿಕ ರೋಗದಿಂದ ಬಳಲುತ್ತಿದ್ದು, ಮಾನಸಿಕ ರೋಗ ತಜ್ಞರ ಬಳಿ ಕೆಲ ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಎಂದು ಹೇಳಿದ್ದಾರೆ.

Comments are closed.