ಅಂತರಾಷ್ಟ್ರೀಯ

ಸಾವು ಖಚಿತ ಎಂದು ಗೊತ್ತಾದಾಗ ಈ ವೈದ್ಯ ಮಾಡಿದ್ದೇನು?

Pinterest LinkedIn Tumblr

doctorವಾಷಿಂಗ್ಟನ್: ಭಾರತೀಯ ಮೂಲದ ಅಮೆರಿಕನ್ ಪ್ರಜೆ ಪೌಲ್ ಕಲಾನಿಥಿಗೆ 36ರ ಹರೆಯ. ನ್ಯೂರೋಸರ್ಜನ್ ಆಗಿ ತರಬೇತಿ ಮುಗಿಸುತ್ತಿದ್ದ ಹೊತ್ತು. ಆಗ ಅವರಿಗೆ ಶ್ವಾಸಕೋಶದ ಕ್ಯಾನ್ಸರ್, ಅದೂ ನಾಲ್ಕನೇ ಹಂತ ತಲುಪಿದೆ ಎಂಬುದು ಗೊತ್ತಾಯಿತು. ಶಸ್ತ್ರ ಚಿಕಿತ್ಸೆ ಸಾಧ್ಯವಿರಲಿಲ್ಲ. ಕಲಾನಿಥಿಯ ಸಾವು ಖಚಿತವಾಗಿತ್ತು.

ಆಗ ಪೌಲ್ ಕಲಾನಿಥಿ ಏನು ಮಾಡಿದರು? ‘ವೆನ್ ಬ್ರೆಥ್ ಬಿಕಮ್್ಸ ಏರ್’ (ಉಸಿರು ಗಾಳಿಯಾದಾಗ) ಪುಸ್ತಕ ‘ಪೌಲ್ ಏನು ಮಾಡಿದರು‘ ಎಂಬುದನ್ನು ಬಿಚ್ಚಿಟ್ಟಿದೆ. ಸಾವು ಖಚಿತ ಎಂಬುದು ಗೊತ್ತಾದ ಬಳಿಕ ಅಂತಿಮ ಉಸಿರು ಇರುವವರೆಗೆ ಲವಲವಿಕೆಯಿಂದ ಬದುಕಿದ್ದು ಹೇಗೆ ಎಂಬುದನ್ನು ಸಾರಿರುವ ಸ್ವತಃ ಪೌಲ್ ಬರೆದ ಈ ಪುಸ್ತಕ 2015ರ ಮಾರ್ಚ್ ತಿಂಗಳಲ್ಲಿ ಅವರು ನಿಧನರಾದ 10 ತಿಂಗಳ ಬಳಿಕ ಇದೀಗ ಮಾರುಕಟ್ಟೆಗೆ ಬಂದಿದ್ದು, ನ್ಯೂಯಾರ್ಕ್ ಟೈಮ್ಸ್ನ ವರ್ಷದ ಬೆಸ್ಟ್ ಸೆಲ್ಲರ್ ಪಟ್ಟಿಗೆ ಸೇರ್ಪಡೆಯಾಗಿದೆ.

ತನ್ನ ವೈದ್ಯೆ ಪತ್ನಿ ಲೂಸಿ ಜೊತೆಗೆ ಕುಳಿತು ತನ್ನದೇ ಸಿಟಿ ಸ್ಕ್ಯಾನ್ ಪರೀಕ್ಷಿಸುವಲ್ಲಿಂದ ಪೌಲ್ ಕಲಾನಿಥಿ ಅವರ ನೆನಪು ಈ ಪುಸ್ತಕದಲ್ಲಿ ಬಿಚ್ಚಿಕೊಂಡಿದೆ. ‘ನಾನು ನನ್ನ ಹಿರಿಯರಿಂದ ಅಪಾರ ಗೌರವ ಗಳಿಸಿಕೊಂಡಿದ್ದೆ. ಪ್ರತಿಷ್ಠಿತ ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ಪಡೆದಿದ್ದೆ. ಹಲವಾರು ಪ್ರತಿಷ್ಠಿತ ವಿಶ್ವವಿದ್ಯಾಲಯಗಳಿಂದ ಉದ್ಯೋಗಾವಕಾಶಗಳು ಕೈಬೀಸಿ ಕರೆಯುತ್ತಿದ್ದವು. ನಾನು ಬೆಟ್ಟದ ತುದಿಗೆ ತಲುಪಿದ್ದೆ. ಭರವಸೆಯ ಭೂಮಿಯನ್ನು ನಾನು ಅಲ್ಲಿಂದ ನೋಡುತ್ತಿದ್ದೆ. ಅಷ್ಟರಲ್ಲಿ ಕಾಡಿದ ಅಸ್ವಸ್ಥತೆಯ ಕಾರಣಕ್ಕಾಗಿ ವೈದ್ಯಕೀಯ ತಪಾಸಣೆ ಶುರುವಾಯಿತು. ಕೆಲವೇ ಕ್ಷಣಗಳ ಒಳಗಾಗಿ ಭವಿಷ್ಯ ಕರಗಿತು. ಜೀವಗಳನ್ನು ರಕ್ಷಿಸುವ ವೈದ್ಯನಾಗಿದ್ದವ, ಸಾವನ್ನು ಎದುರು ನೋಡುವ ರೋಗಿಯಾಗಿ ಬಿಟ್ಟೆ’ ಎಂದು ಪೌಲ್ ಬರೆದಿದ್ದಾರೆ.

‘ವೈದ್ಯನಾಗಿ ಕ್ಯಾನ್ಸರ್ ನಾನು ಗೆಲ್ಲಲು ಹೋಗುತ್ತಿರುವ ಸಮರ ಎಂದು ಘೊಷಿಸಬಾರದು ಎಂಬುದು ನನಗೆ ಗೊತ್ತಿತ್ತು. ಈಗ ನಾನೇ ಏಕೆ (ನಾನೇ ಏಕಾಗಬಾರದು?) ಎಂಬ ಪ್ರಶ್ನೆ ನನ್ನ ಮುಂದಿದೆ’ ಎಂದು ಅವರು ಬರೆದಿದ್ದಾರೆ.

ಸಾವಿನ 10 ತಿಂಗಳ ಬಳಿಕ ಮಾರುಕಟ್ಟೆಗೆ ಬಂದ ಅವರ ಪುಸ್ತಕ ಅವರನ್ನು ಸಾವನ್ನು ಎದುರಿಸಲು ಸಜ್ಜಾದದ್ದು ಹೇಗೆ?, ಸಂಪೂರ್ಣ ಲವಲವಿಕೆಯಿಂದ ಇರಲು ಅದು ಕಲಿಸಿಕೊಟ್ಟದ್ದು ಹೇಗೆ? ಮಗಳು ಬೆಳೆಯುವುದನ್ನು ನೋಡಲು ಸಾಧ್ಯವಿಲ್ಲ ಎಂಬುದು ಗೊತ್ತಿದ್ದರೂ ಆಕೆಯನ್ನು ಪಡೆಯುವ ನಿರ್ಧಾರ ಕೈಗೊಂಡದ್ದು ಹೇಗೆ? ಅಪ್ಪ ‘ನೀನು ಸಾವನ್ನು ಗೆಲ್ಲುತ್ತೀ’ ಎಂದು ಹೇಳಿದಾಗ ಎದುರಿಸಿದ ಪರಿಸ್ಥಿತಿ ಎಂತಹುದು ಇತ್ಯಾದಿ ಸಂದರ್ಭಗಳನ್ನು ‘ವೆನ್ ದ ಬ್ರೆತ್ ಬಿಕಮ್್ಸ ಏರ್’ ವಿವರಿಸಿದೆ.

Comments are closed.