ಲಂಡನ್: ೫ ಪೌಂಡ್ ನೋಟಿನಲ್ಲಿ ಪ್ರಾಣಿಯ ಕೊಬ್ಬಿದೆ ಎಂಬ ವಿಷಯ ಬೆಳಕಿಗೆ ಬಂದಿರುವ ಹಿನ್ನಲೆಯಲ್ಲಿ ಬ್ರಿಟನ್ನಿನ ಹಲವು ಹಿಂದೂ ದೇವಾಲಯಗಳನ್ನು ಅದನ್ನು ನಿಷೇಧಿಸಿವೆ.
೫ ಪೌಂಡ್ ನೋಟುಗಳನ್ನು ಕನಿಷ್ಠ ಮೂರೂ ದೇವಾಲಯಗಳಲ್ಲಿ ಒಪ್ಪಿಕೊಳ್ಳುತ್ತಿಲ್ಲ ಎಂದು ಹಿಂದೂ ದೇವಾಲಯಗಳ ರಾಷ್ಟ್ರೀಯ ಸಮಿತಿಯ ವಕ್ತಾರ ಸತೀಶ್ ಶರ್ಮ ಬಿಬಿಸಿಗೆ ಹೇಳಿರುವುದಾಗಿ ದಿ ಇಂಡಿಪೆಂಡೆಂಟ್ ಪತ್ರಿಕೆ ವರದಿ ಮಾಡಿದೆ.
“ಧಾರ್ಮಿಕ ನಿಯಮಗಳ ಒಂದು ಸ್ಥಿತಿಯನ್ನು ಅನುಸರಿಸಿವುದು ದೇವಾಲಯಗಳ ಜವಾಬ್ದಾರಿ ಎಂದು ನಾನು ನಂಬುತ್ತೇನೆ. ೫ ಪೌಂಡ್ ನೋಟನ್ನು ನಿಷೇಧಿಸಿರುವ ಯಾವುದೇ ದೇವಾಲಯದ ನಡೆ ಅಸಮಸಂಜಸವೇನಲ್ಲ” ಎಂದು ಸತೀಶ್ ಹೇಳಿದ್ದಾರೆ.
ಹೆರ್ಟ್ಫೋರ್ಡ್ಶಿರೆ ನಲ್ಲಿರುವ ಹರಿಕೃಷ್ಣ ದೇವಾಲಯ ಭಕ್ತಿವೇದಾಂತ ಮ್ಯಾನರ್ ಫೇಸ್ಬುಕ್ ನಲ್ಲಿ ಫೋಟೋವೊಂದನ್ನು ಪ್ರಕಟಿಸಿದ್ದು, “೫ ಪೌಂಡ್ ನೋಟುಗಳಲ್ಲಿ ಪ್ರಾಣಿಯ ಕೊಬ್ಬು ಇರುವುದರಿಂದ ಅದನ್ನ ಇನ್ನು ಮುಂದೆ ಒಪ್ಪಿಕೊಳ್ಳಲಾಗುವುದಿಲ್ಲ” ಎಂದಿದೆ.
ಕಳೆದ ವಾರದ ವರದಿಗಳ ಪ್ರಕಾರ ಈ ನೋಟುಗಳಲ್ಲಿ ಮೇಣದಂತಹ ವಸ್ತು ಇದ್ದು, ಅದು ದನದ ಅಥವಾ ಮಟನ್ ಮಾಂಸದ ಕೊಬ್ಬಿನಿಂದ ತಯಾರಾಗುವಂತದ್ದು ಎಂಬ ವಿಷಯ ಬಹಿರಂಗವಾಗಿತ್ತು. ಹಿಂದುಗಳಿಗೆ ಹಸು ಪವಿತ್ರ ಎಂದು ಪರಿಗಣಿಸಲಾಗುತ್ತದೆ.
ಈ ನೋಟನ್ನು ಬದಲಾಯಿಸಲು ಲೇಯ್ಸ್ಟರ್ ನ ಶ್ರೀ ಸನಾತನ ದೇವಾಲಯ ಕೂಡ ಅಭಿಯಾನ ಪ್ರಾರಂಭಿಸಿದೆ ಎಂದು ದಿ ಇಂಡಿಪೆಂಡೆಂಟ್ ವರದಿ ಮಾಡಿದೆ. “೫ ಪೌಂಡ್ ನೋಟಿನಲ್ಲಿ ಪ್ರಾಣಿಯ ಕೊಬ್ಬು ಇದೆ ಎಂದು ತಿಳಿದು ನಮಗೆ ಬಹಳ ನಿರಾಸೆಯಾಗಿದೆ” ಎಂದು ದೇವಾಲಯದ ಅಂತರ್ಜಾಲ ತಾಣ ತಿಳಿಸಿದೆ.
ಬ್ಯಾಂಕ್ ನೋಟುಗಳಲ್ಲಿರುವ ಈ ಮೇಣದ ವಸ್ತುವನ್ನು ತೆಗೆದುಹಾಕುವಂತೆ ನಡೆಸಿರುವ ಅಭಿಯಾನಕ್ಕೆ ೧,೨೦,೦೦೦ ಕ್ಕೂ ಹೆಚ್ಚು ಜನ ಸಹಿ ಹಾಕಿದ್ದಾರೆ.