ಬೀಜಿಂಗ್: ಅತ್ಯಾಚಾರ ಮತ್ತು ಕೊಲೆ ಪ್ರಕರಣ ಸಂಬಂಧ 21 ವರ್ಷಗಳ ಹಿಂದೆ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಆರೋಪಿ ನಿರಪರಾಧಿ ಎಂದು ಚೀನಾ ಸುಪ್ರೀಂ ಕೋರ್ಟ್ ಶುಕ್ರವಾರ ಆದೇಶ ಹೊರಡಿಸಿದೆ.
21 ವರ್ಷಗಳ ಹಿಂದೆ ಮಹಿಳೆಯೊಬ್ಬಳ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಸಂಬಂಧ ಬಂಧಿತನಾಗಿದ್ದ ನೀ ಶುಬಿನ್ ಎಂಬ 20 ವರ್ಷದ ಯುವಕನನ್ನು ಸ್ಥಳೀಯ ಕೋರ್ಟ್ ಅಪರಾಧಿ ಎಂದು ಘೋಷಣೆ ಮಾಡಿ ಗಲ್ಲು ಶಿಕ್ಷೆ ವಿಧಿಸಿತ್ತು. ಅದರಂತೆ ನೀ ಶುಬಿನ್ ಗೆ ಗಲ್ಲು ಶಿಕ್ಷೆಕೂಡ ಪ್ರಧಾನವಾಗಿತ್ತು. ಆದರೆ 21 ವರ್ಷಗಳ ಬಳಿಕ ನಿಜವಾದ ಕೊಲೆ ಅಪರಾಧಿ ತನ್ನ ಅಪರಾಧವನ್ನು ಒಪ್ಪಿಕೊಂಡ ಹಿನ್ನಲೆಯಲ್ಲಿ ಚೀನಾದ ಸುಪ್ರೀಂ ಪೀಪಲ್ಸ್ ಕೋರ್ಟ್ ನ್ಯಾಯಾಲಯ ನೀ ಶುಬಿನ್ ನನ್ನು ನಿರಪರಾಧಿ ಎಂದು ಘೋಷಣೆ ಮಾಡಿದೆ.
ಅಂತೆಯೇ ಅಂದಿನ ವಿಚಾರಣೆ ಹಾಗೂ ಕೋರ್ಟ್ ನ ಆದೇಶದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂ ಪೀಪಲ್ಸ್ ಕೋರ್ಟ್, ಪ್ರಕರಣ ಸಂಬಂಧ ಈ ಹಿಂದೆ ನೀಡಲಾಗಿದ್ದ ಸಾಕ್ಷ್ಯಾಧಾರಗಳು ಅಸ್ಪಷ್ಟವಾಗಿವೆ. ಘಟನಾ ಸ್ಥಳದಲ್ಲಿ ವಿಧಿವಿಜ್ಞಾನ ತಜ್ಞರು ಸಂಗ್ರಹಿಸಿರುವ ಜೈವಿಕ ಸಾಕ್ಷ್ಯಗಳ ಮಾದರಿಗಳಲ್ಲಿ ನೀ ಶುಬಿನ್ ಪಾತ್ರದ ಕುರಿತು ಅಸ್ಪಷ್ಟ ಮಾಹಿತಿ ಇದೆ. ಹೀಗಿದ್ದೂ ಕೇವಲ ಆರೋಪಿಯ ತಪ್ಪೊಪ್ಪಿಗೆ ಹೇಳಿಕೆಯೊಂದನ್ನೇ ಪರಿಗಣಿಸಿ ಶಿಕ್ಷೆ ನೀಡಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ನ್ಯಾಯಾಲಯ ಪ್ರಶ್ನಿಸಿದೆ. ಹೀಗಾಗಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ನೀ ಶುಬಿನ್ ನಿರಪರಾಧಿ ಎಂದು ನ್ಯಾಯಾಲಯ ಘೋಷಣೆ ಮಾಡಿದೆ.
ಏನಿದು ಪ್ರಕರಣ?
ಪೊಲೀಸ್ ಮೂಲಗಳ ಪ್ರಕಾರ 1995ರಲ್ಲಿ ಚೀನಾದ ಶಿಜಿಯಾಜುವಾಂಗ್ ನಗರದ ಹೊರವಲಯದಲ್ಲಿರುವ ಜೋಳದ ಹೊಲದಲ್ಲಿ ಮಹಿಳೆಯೋರ್ವಳ ಶವಪತ್ತೆಯಾಗಿತ್ತು. ಮಹಿಳೆಯನ್ನು ಅತ್ಯಾಚಾರ ಮಾಡಿ ಭೀಕರವಾಗಿ ಕೊಲೆಗೈಯ್ಯಲಾಗಿತ್ತು. ಈ ಸುದ್ದಿ ಚೀನಾ ಮಾಧ್ಯಮಗಳಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾಗಿತ್ತು. ಪ್ರಕರಣ ಸಂಬಂಧ ಅಂದು ಪೊಲೀಸರು ನೀ ಶುಬಿನ್ ಎಂಬ 20 ವರ್ಷದ ಯುವಕನನ್ನು ಬಂಧಿಸಿದ್ದರು. ಅಂತೆಯೇ ಆತನ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ ಮಾಡಿ ನ್ಯಾಯಾಲಯಕ್ಕೆ ನೀಡಿದ್ದರು. ವಿಚಾರಣೆ ವೇಳೆ ಪೊಲೀಸರಿಗೆ ನೀ ಶುಬಿನ್ ತಾನು ಯಾವುದೇ ತಪ್ಪು ಮಾಡಿಲ್ಲ, ತಾನು ನಿರಪರಾಧಿ ಎಂದು ಹೇಳಿದರೂ ಕೇಳದ ಪೊಲಿಸರು ಸತ್ಯಾಂಶ ತಿಳಿಯಲು ಆತನಿಗೆ ಮನಸೋ ಇಚ್ಛೆ ಥಳಿಸಿದ್ದರು. ಪೊಲೀಸರ ಏಟಿಗೆ ತಡೆಯಲಾಗದೇ ಆತ ಅಂದು ತಾನೇ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದ. ನ್ಯಾಯಾಲಯದಲ್ಲಿ ವಿಚಾರಣೆ ನಡೆದಾಗ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರ ವರದಿ ಸೇರಿದಂತೆ ಶೇ.99.99 ಸಾಕ್ಷ್ಯಾಧಾರಗಳು ಆತ ಅಪರಾಧಿ ಎಂಬುದನ್ನು ಸಾಬೀತು ಪಡಿಸುವಲ್ಲಿ ವಿಫಲವಾಗಿದ್ದರೂ, ಆತನ ತಪ್ಪೊಪ್ಪಿಗೆ ಹೇಳಿಕೆಯಾಧಾರದ ಮೇಲೆ ಸ್ಥಳೀಯ ನ್ಯಾಯಾಲಯ ಆತನಿಗೆ ಗಲ್ಲು ಶಿಕ್ಷೆ ವಿಧಿಸಿತ್ತು. ಬಳಿಕ ನೀ ಶುಬಿನ್ ಗೆ ಗಲ್ಲು ಶಿಕ್ಷೆ ಪ್ರಧಾನ ಕೂಡ ಆಯಿತು.
ಆದರೆ ತಮ್ಮ ಪುತ್ರ ಯಾವುದೇ ತಪ್ಪು ಮಾಡಿಲ್ಲ ಎಂದು ವಾದಿಸಿದ ಆತನ ಪೋಷಕರು ಹಾಗೂ ಸಂಬಂಧಿಕರು ನ್ಯಾಯಕ್ಕೆ ಆಗ್ರಹಿಸಿ ಸತತ ಪ್ರಚಾರ ಹಾಗೂ ಅಭಿಯಾನ ನಡೆಸಿದ್ದರು. 2005ರಲ್ಲಿ ಅದೇ ಪ್ರಕರಣದ ಕೊಲೆ ಆರೋಪಿಯ ಬಂಧನವಾಗಿತ್ತಾದರೂ ಈ ಪ್ರಕರಣದ ವಿಚಾರಣೆ ಆರಂಭವಾಗಿದ್ದು ಮಾತ್ರ 2014ರಲ್ಲಿ. ಇದೀಗ 2 ವರ್ಷಗಳ ವಿಚಾರಣೆ ಬಳಿಕ ನ್ಯಾಯಾಲಯ ತನ್ನ ತೀರ್ಪು ನೀಡಿದ್ದು ಗಲ್ಲು ಶಿಕ್ಷೆಗೆ ಗುರಿಯಾದ ನೀ ಶುಬಿನ್ ನಿರಪರಾಧಿ ಎಂದು ಹೇಳಿದೆ.
ನೀ ಶುಬಿನ್ ಪರ ಅಭಿಯಾನ ನಡೆಸಿದ ಆತನ ತಾಯಿ ಝಾಂಗ್ ಹೌಂಜಿ ಅವರು ತಮ್ಮ ಹೋರಾಟಕ್ಕೆ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ. ಒಟ್ಟಾರೆ ತನ್ನದಲ್ಲದ ತಪ್ಪಿಗೆ ಶಿಕ್ಷೆಗೆ ಗುರಿಯಾದ ನೀ ಶುಬಿನ್ ಸತತ 21 ವರ್ಷಗಳ ಬಳಿಕ ನಿರಪರಾಧಿಯಾಗಿದ್ದಾನೆ!