ರಾಷ್ಟ್ರೀಯ

ನಗದು ಬಿಕ್ಕಟ್ಟು, ಡಿ.30ರ ನಂತರ ಸಹಜ ಸ್ಥಿತಿಗೆ: ಜೇಟ್ಲಿ

Pinterest LinkedIn Tumblr

jetlyನವದೆಹಲಿ: 500 ಹಾಗೂ 1000 ರುಪಾಯಿ ನೋಟ್ ನಿಷೇಧದಿಂದ ಉಂಟಾಗಿರುವ ನಗದು ಸಮಸ್ಯೆ ಇನ್ನೂ ಕೆಲವು ದಿನ ಮುಂದುವರೆಯಲಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಶುಕ್ರವಾರ ಹೇಳಿದ್ದಾರೆ.
ಜೇಟ್ಲಿಯ ಪ್ರಕಾರ, ಡಿಸೆಂಬರ್ 30ರ ನಂತರವೇ ನಗದು ಬಿಕ್ಕಟ್ಟು ಸಹಜ ಸ್ಥಿತಿಗೆ ಬರಲಿದೆ ಮತ್ತು ನೋಟ್ ನಿಷೇಧ ಮುಂದಿನ ತ್ರೈಮಾಸಿಕದಲ್ಲಿ ಆರ್ಥಿಕ ಬೆಳವಣಿಗೆಗೆ ಅಡ್ಡಿಯಾಗುವ ಸಾಧ್ಯತೆಯೂ ಇದೆ ಎಂದು ಹೇಳಿದ್ದಾರೆ.
ಆದಾಗ್ಯೂ, ಒಂದು ಬಾರಿ ನಗದು ಬಿಕ್ಕಟ್ಟು ಪರಿಹಾರವಾದರೆ ನೋಟ್ ನಿಷೇಧದಿಂದ ಮತ್ತು ಜಿಎಸ್ ಟಿ ಜಾರಿಯಿಂದ ಭಾರಿ ಪ್ರಮಾಣದಲ್ಲಿ ಲಾಭವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ನಗರದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಜೇಟ್ಲಿ, ಈಗ ಉಂಟಾಗಿರುವ ನಗದು ಬಿಕ್ಕಟ್ಟು ಕೇವಲ ತಾತ್ಕಾಲಿಕ. ಇದರಿಂದ ಒಂದು ಅಥವಾ ಎರಡು ತ್ರೈಮಾಸಿಕದ ಮೇಲೆ ಪರಿಣಾಮವಾಗಬಹುದು. ಆದರೆ ಮುಂದಿನ 12-15 ತ್ರೈಮಾಸಿಕಕ್ಕೆ ಲಾಭವಾಗಲಿದೆ ಎಂದರು.
ಇದೇ ವೇಳೆ ಮುಂದಿನ ವರ್ಷದ ಸೆಪ್ಟೆಂಬರ್ 16ಕ್ಕೂ ಮುನ್ನವೇ ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ) ಕಾಯ್ದೆಯನ್ನು ಸಂವಿಧಾನದ ಪ್ರಕಾರ ಕಡ್ಡಾಯವಾಗಿ ಜಾರಿಗೊಳಿಸಲಾಗುವುದು. ತೆರಿಗೆ ಸಂಗ್ರಹಿಸದೇ ದೇಶ ನಡೆಸುವುದು ಅಸಾಧ್ಯ ಎಂದು ಹಣಕಾಸು ಸಚಿವರು ಹೇಳಿದ್ದಾರೆ.

Comments are closed.