ವಾಷಿಂಗ್ಟನ್: ಭಾರತೀಯ ಮೂಲದ ಕಮಲಾ ಹ್ಯಾರಿಸ್ ಅವರಿಗೆ ಅಮೆರಿಕದ ಅಧ್ಯಕ್ಷೆಯಾಗುವ ಸಾಮರ್ಥ್ಯವಿದೆ ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ.
ಕಮಲಾ ಹ್ಯಾರಿಸ್ ಅಮೆರಿಕಾದ ಕ್ಯಾಲಿಫೋರ್ನಿಯಾ ಸೆನೆಟ್ಗೆ ಆಯ್ಕೆಯಾಗುವ ಮೂಲಕ ಏಷ್ಯಾದಿಂದ ಆಯ್ಕೆಯಾದ ಮೊದಲ ಸೆನೆಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಅಧ್ಯಕ್ಷರಾಗಿ ಆಯ್ಕೆಯಾಗಿರುವ ಟ್ರಂಪ್ ಅವರು ಹೊಂದಿರುವ ವಲಸಿಗ ವಿರೋಧಿ ಧೋರಣೆಯ ವಿರುದ್ಧ ರಾಷ್ಠ್ರವ್ಯಾಪಿ ಪ್ರಚಾರಾಂದೋಲನ ನಡೆಸುವುದರ ಮೂಲಕವೂ ಕಮಲಾ ಸುದ್ದಿಯಾಗಿದ್ದಾರೆ.
‘ಈ ಆಂದೋಲನವು ಕಮಲಾ ಅವರನ್ನು ಪುನಶ್ಚೇತನಗೊಳಿಸಲಿದೆ. ಮಹಿಳೆಯರಿಗೆ ಇದುವರೆಗೂ ಸಾಧ್ಯವಾಗಿರದ ಅಮೆರಿಕ ಅಧ್ಯಕ್ಷರಾಗುವ ಕನಸನ್ನು ನನಸಾಗಿಸುವ ಸಾಮರ್ಥ್ಯ ಅವರಿಗಿದೆ’ ಎಂದು ಮಾಧ್ಯಮಗಳು ವರದಿ ಮಾಡಿವೆ.
‘ಕಮಲಾ ಅವರು ಈಗಾಗಲೆ ಕ್ಯಾಲಿಫೋರ್ನಿಯಾ ಅಟಾರ್ನಿ ಜನರಲ್ ಆಗಿ ಉತ್ತಮ ಹೆಸರು ಮಾಡಿರುವ ಅವರು, ಪ್ರಜಾಪ್ರಭುತ್ವ ನಿಲುವುಗಳಿಂದಾಗಿ ಜನಪ್ರಿಯರಾಗಿದ್ದಾರೆ. ಸೆನೆಟರ್ ಆಗಿ ಆಯ್ಕೆಯಾಗುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. 2020ರ ಅಧ್ಯಕ್ಷೀಯ ಚುನಾವಣೆಯತ್ತ ಗಮನಹರಿಸಲಿ’ ಎಂದು ಮಾಧ್ಯಮಗಳು ಸುದ್ದಿ ಮಾಡಿವೆ.
‘ಅಧ್ಯಕ್ಷ ಹುದ್ದೆಗಿರುವ ಅಡೆತಡೆಗಳನ್ನು ದಾಟಲು ನಮ್ಮಿಂದ ಸಾಧ್ಯವಾಗಿಲ್ಲ. ಆದರೆ ಮುಂದಿನ ದಿನಗಳಲ್ಲಿ ಬೇರೊಬ್ಬರಿಂದ ಅದು ಸಾಧ್ಯವಾಗಲಿದೆ’ ಎಂದು ಹಿಲರಿ ಕ್ಲಿಂಟನ್ ತಿಳಿಸಿದ್ದಾರೆ.