ಅಂತರಾಷ್ಟ್ರೀಯ

ನ್ಯಾಷನಲ್ ಜಿಯೊಗ್ರಾಫಿಕ್ ಖ್ಯಾತಿಯ ‘ಅಫ್ಘಾನ್ ಚೆಲುವೆ’ ಶರಬತ್ ಬೀಬಿ ಬಂಧನ

Pinterest LinkedIn Tumblr

afghan-girlಸ್ಲಾಮಾಬಾದ್: ನ್ಯಾಷನಲ್ ಜಿಯೊಗ್ರಾಫಿಕ್ ಮ್ಯಾಗಜಿನ್ ಮುಖಪುಟದಲ್ಲಿ ಫೋಟೊ ಪ್ರಕಟವಾಗುವ ಮೂಲಕ ವಿಶ್ವದ ಗಮನ ಸೆಳೆದಿದ್ದ ‘ಅಫ್ಘಾನ್ ಗರ್ಲ್’ ಶರಬತ್ ಬೀಬಿ ಅವರನ್ನು ಭ್ರಷ್ಟಾಚಾರದ ಆರೋಪದಲ್ಲಿ ಪಾಕಿಸ್ತಾನದಲ್ಲಿ ಬಂಧಿಸಲಾಗಿದೆ.

ಕಂಪ್ಯೂಟರೀಕೃತ ರಾಷ್ಟ್ರೀಯ ಗುರುತಿನ ಚೀಟಿ (ಸಿಎನ್‍ಐಸಿ) ನಕಲು ಮಾಡಿರುವ ಪ್ರಕರಣದಲ್ಲಿ ಬುಧವಾರ ಪೇಶಾವರದಲ್ಲಿ ಬೀಬಿ ಅವರನ್ನು ಫೆಡರಲ್ ತನಿಖಾ ಸಂಸ್ಥೆ (ಎಫ್ ಐಎ) ಅಧಿಕಾರಿಗಳು ಬಂಧಿಸಿದ್ದಾರೆ.

ಬೀಬಿ ಅವರು ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಪೌರತ್ವವನ್ನು ಹೊಂದಿದ್ದು, ಅವರ ಕೈಯಿಂದ ನಕಲಿ ಗುರುತಿನ ಚೀಟಿಯನ್ನು ಅಧಿಕಾರಿಗಳು ವಶ ಪಡಿಸಿಕೊಂಡಿದ್ದಾರೆ.

ಬೀಬಿ ಅವರಿಗೆ ನಕಲಿ ಗುರುತಿನ ಚೀಟಿ ನೀಡಿದ ಅಧಿಕಾರಿ ಈಗ ತೆರಿಗೆ ಇಲಾಖೆಯಲ್ಲಿ ಡೆಪ್ಯುಟಿ ಕಮಿಷನರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನಕಲಿ ಗುರುತಿನ ಚೀಟಿ ಪ್ರಕರಣದಲ್ಲಿ ಸಿಕ್ಕಿಹಾಕಿಕೊಳ್ಳದಂತೆ ಮುಂಗಡ ಜಾಮೀನು ಪಡೆದಿದ್ದಾರೆ ಎಂದು ಎಫ್‍ಐಎ ಅಧಿಕಾರಿಗಳು ಹೇಳಿದ್ದಾರೆ.
ಕಳೆದ ವರ್ಷ ರಾಷ್ಟ್ರೀಯ ಅಂಕಿ ಅಂಶ ಮತ್ತು ನೋಂದಣಿ ಪ್ರಾಧಿಕಾರವು ಶರಬತಿ ಬೀಬಿ ಮತ್ತು ಇಬ್ಬರು ಪುರುಷರಿಗೆ ಸಿಎನ್‍ಐಸಿ ಗುರುತಿನ ಚೀಟಿ ನೀಡಿತ್ತು. ಈ ಇಬ್ಬರು ಪುರುಷರು ಶರಬತಿ ಬೀಬಿ ಅವರ ಮಕ್ಕಳು ಎಂದು ಹೇಳಲಾಗುತ್ತಿದೆ.

ಆದರೆ ಬೀಬಿ ನೀಡಿದ ಮಾಹಿತಿಯಲ್ಲಿ ಈ ಪುರುಷರು ಯಾರೆಂಬುದು ಬೀಬಿಯವರ ಬಂಧುಗಳಿಗೂ ಗೊತ್ತಿಲ್ಲ, ಈ ಬಗ್ಗೆ ತನಿಖೆ ನಡೆಸಿದಾಗ ವಿದೇಶಿ ವ್ಯಕ್ತಿಗಳಿಗೆ ಸಿಎನ್ಐಸಿ ಗುರುತಿನ ಚೀಟಿ ನೀಡಿರುವುದು ಬೆಳಕಿಗೆ ಬಂದಿದೆ ಎಂದು ಪಾಕಿಸ್ತಾನದ ಪತ್ರಿಕೆ ವರದಿ ಮಾಡಿದೆ.

ನ್ಯಾಷನಲ್ ಜಿಯೋಗ್ರಾಫಿಕ್ ಫೋಟೋಗ್ರಾಫರ್ ಸ್ಟೀವ್ ಮೆಕ್ ಕರಿ 1984ರಲ್ಲಿ ಪೇಶಾವರ ಸಮೀಪದ ನಿರಾಶ್ರಿತರ ಶಿಬಿರದಲ್ಲಿ 1984ರಲ್ಲಿ ಬೀಬಿಯ ಫೋಟೋ ಸೆರೆ ಹಿಡಿದಿದ್ದರು. ಈ ಫೋಟೋ ನ್ಯಾಷನಲ್ ಜಿಯೋಗ್ರಾಫಿಕ್ ನಿಯತಕಾಲಿಕದ 1985ರ ಜೂನ್ ಸಂಚಿಕೆಯಲ್ಲಿ ಮುಖಪುಟ ಚಿತ್ರವಾಗಿ ಪ್ರಕಟಗೊಂಡ ಬಳಿಕ ಈಕೆ ‘ಅಫ್ಘಾನ್ ಗರ್ಲ್’ ಎಂಬುದಾಗಿ ವಿಶ್ವಾದ್ಯಂತ ಖ್ಯಾತಿ ಪಡೆದಿದ್ದಳು. ಆಗ ಆಕೆಗೆ 12 ವರ್ಷ ವಯಸ್ಸಾಗಿತ್ತು.
ನ್ಯಾಷನಲ್ ಜಿಯೊಗ್ರಾಫಿಕ್ ಆಕೆಯ ಬಗ್ಗೆ ಸಾಕ್ಷ್ಯಚಿತ್ರವನ್ನೂ ಮಾಡಿದ್ದು ಈಕೆಯನ್ನು ‘ಮೊನಾಲಿಸಾ ಆಫ್ ಅಫ್ಘಾನ್ ವಾರ್’ ಎಂದು ಬಣ್ಣಿಸಿತ್ತು.

Comments are closed.