ಚೀನಾದ ಗುಯ್ಛನ ವನ್ಪು ಗ್ರಾಮದ ಓವು ಟಾನ್ಗಮಿಂಗ್ ಕುಟುಂಬದ ಜೀವನ ಇತರೆಲ್ಲರಂತೆಯೇ ಸಾಮಾನ್ಯವಾಗಿ ನಡೆಯುತ್ತಿತ್ತು. ಆದರೆ ಒಂದು ದಿನ 37 ವರ್ಷದ ಓವು ಟಾನ್ಗಮಿಂಗ್ ಎರಡು ಅಂತಸ್ತಿನ ಕಟ್ಟಡದಲ್ಲಿ ಕಟ್ಟಡ ಕಾರ್ಮಿಕ ಕೆಲಸ ಮಾಡುತ್ತಿದ್ದಾಗ ಜಾರಿ ಕೆಳಗೆ ಬಿದ್ದು ಲಕ್ವ ಹೊಡೆದು ಮೇಲೇಳದ ಸ್ಥಿತಿಗೆ ಬಂದರು. 2013ರಲ್ಲಿ ವೈದ್ಯಕೀಯ ಬಿಲ್ಲುಗಳ ನಡುವೆ ಮುಳುಗಿ ಹೋದ ಓವು ಇನ್ನು ಚೇತರಿಸಿಕೊಳ್ಳುವುದಿಲ್ಲ ಎಂದು ತಿಳಿದಾಗ ಪತ್ನಿ ಆತನನ್ನು ಮತ್ತು ಮಗನನ್ನೂ ಬಿಟ್ಟು ಮನೆ ತೊರೆದಿದ್ದಳು.
ತಾಯಿ ಮನೆ ತೊರೆದ ಮೇಲೆ ಈವರೆಗೆ ಓವುನ ಮಗ ಓಯು ಯಾಂಗ್ಲಿನ್ ತನ್ನ ತಂದೆಯನ್ನು ನೋಡಿಕೊಳ್ಳಲು ತನ್ನಿಂದಾದ ಪ್ರಯತ್ನ ಮಾಡಿದ್ದಾನೆ. ಪ್ರತೀ ದಿನ ಶಾಲೆಗೂ ಹೋಗುವ ಓಯು, ತನ್ನ ತಂದೆಯ ಸೇವೆ ಮಾಡುವುದು ಮರೆಯುವುದಿಲ್ಲ. “ನನ್ನ ತಂದೆಯಿಲ್ಲದೆ ನನಗೆ ಬದುಕಲು ಸಾಧ್ಯವಿಲ್ಲ” ಎನ್ನುತ್ತಾನೆ ಓಯು.
ಬೆಳಗ್ಗೆ 6 ಗಂಟೆಗೆ ಏಳುವ ಓಯು ಯಾಂಗ್ಲಿನ್ ನಿತ್ಯವೂ ತಂದೆಗಾಗಿ ಉಪಾಹಾರ ಸಿದ್ಧ ಮಾಡುತ್ತಾನೆ. ನಂತರ ಶಾಲೆಗೆ ಹೋಗುತ್ತಾನೆ. ತಂದೆಗೆ ಊಟ ಕೊಡಲು ಮಧ್ಯಾಹ್ನ ಮತ್ತೆ ಮನೆಗೆ ಬರುತ್ತಾನೆ. ತಾಯಿ ಬಿಟ್ಟು ಹೋದರೂ ಈ 7 ವರ್ಷದ ಬಾಲಕ ಮಾಡುತ್ತಿರುವ ಸೇವೆ ಅಪರೂಪ.
ಓಯು ಸ್ವತಃ ಅಂಗಡಿಗೆ ಹೋಗಿ ಸಾಮಾನು ತರುವುದು ಮತ್ತು ಆಹಾರ ತಯಾರಿಸುವುದನ್ನು ತಂದೆಯ ಉಪಚಾರಕ್ಕೆಂದೇ ಕಲಿತಿದ್ದಾನೆ. ಓಯುನ ನೆರೆಯವರು ಇದನ್ನು ಗಮನಿಸಿದ್ದಾರೆ. ಮಗನ ಪ್ರೇಮವನ್ನು ಕಂಡು ಅವರೆಲ್ಲರೂ ಆಗಾಗ ಧನ ಸಹಾಯ ಮಾಡುತ್ತಿರುತ್ತಾರೆ. ಮನೆಯ ಖರ್ಚಿಗೆ ಹಣ ಹೊಂದಿಸಲು ಓಯುಗೆ ಕಷ್ಟವಾದರೂ ತಂದೆಗಾಗಿ ಎಲ್ಲವನ್ನೂ ಮಾಡಲು ಸಿದ್ಧನಿದ್ದಾನೆ.
ಅಪರಿಮಿತ ಪ್ರೇಮದ ಬಗ್ಗೆ ನಾವು ಯಾವಾಗಲೂ ಕೇಳುತ್ತೇವೆ. ಆದರೆ ಅದನ್ನು ವಾಸ್ತವದಲ್ಲಿ ಅಳವಡಿಸುವುದು ಕಷ್ಟ. ಓಯು ಮತ್ತು ಆತನ ತಂದೆ ಪ್ರೇಮದ ಉದಾಹರಣೆ ಬೇಷರತ್ ಪ್ರೇಮ ಎನ್ನುವುದು ಕಲ್ಪನೆ ಮಾತ್ರ ಎನ್ನುವ ಜನರ ಮನೋಭಾವವನ್ನು ಭಾಗಶಃ ಬದಲಿಸಲಿದೆ. ಕೆಲವೊಮ್ಮೆ ಬೇಷರತ್ ಪ್ರೇಮವನ್ನು ಅರಿತುಕೊಳ್ಳಲು ಕಷ್ಟವಾದರೂ ಅಸ್ತಿತ್ವದಲ್ಲಿರುವುದು ಸುಳ್ಳಲ್ಲ. ಅದನ್ನು ತೋರಿಸಿದ ಓಯುಗೆ ನಾವು ಧನ್ಯವಾದ ಹೇಳಲೇಬೇಕು.