ಅಂತರಾಷ್ಟ್ರೀಯ

ಜಾಗತಿಕ ತಾಪಮಾನ ನಿಯಂತ್ರಿಸಲು ಎಚ್ಎಫ್‌ಸಿ ಪ್ರಮಾಣ ಇಳಿಸಲು ಒಪ್ಪಂದ

Pinterest LinkedIn Tumblr

globeಕಿಗಾಲಿ: ಇಂಗಾಲದ ಡೈಆಕ್ಸೈಡ್‌ಗಿಂತಲೂ ಜಾಗತಿಕ ತಾಪಮಾನ ಹೆಚ್ಚಳದಲ್ಲಿ ಸಾವಿರ ಪಟ್ಟು ಅಧಿಕ ಪ್ರಭಾವ ಬೀರುವ ಹೈಡ್ರೋಫ್ಲೂರೋಕಾರ್ಬನ್‌ (ಎಚ್‌ಎಫ್‌ಸಿ) ನಿಯಂತ್ರಿಸಲು ರುವಾಂಡಾದ ಕಿಗಾಲಿಯಲ್ಲಿ ಶನಿವಾರ ಅಧಿಕೃತ ಒಪ್ಪಂದಕ್ಕೆ ಬರಲಾಗಿದೆ.

ಜಾಗತಿಕ ತಾಪಮಾನ ಹೆಚ್ಚಳಕ್ಕೆ ಕಾರಣವಾಗುವ ಪ್ರಭಾವಯುತ ಹಸಿರುಮನೆ ಅನಿಲ ಉತ್ಪಾದನೆ ನಿಯಂತ್ರಣ ಹಾಗೂ 2050ರ ವೇಳೆಗೆ 0.5 ಸೆಲ್ಸಿಯಸ್‌ ಉಷ್ಣಾಂಶ ಏರಿಕೆಯನ್ನು ನಿಯಂತ್ರಿಸುವ ಒಪ್ಪಂದಕ್ಕೆ 200 ರಾಷ್ಟ್ರಗಳು ಒಮ್ಮತ ಸೂಚಿಸಿವೆ.

ಗೃಹ ಮತ್ತು ಕಾರುಗಳ ಹವಾನಿಯಂತ್ರಕಗಳಲ್ಲಿ ಶೈತ್ಯಕಾರಿಯಾಗಿ ಹೈಡ್ರೋಫ್ಲೂರೋಕಾರ್ಬನ್‌ (ಎಚ್‌ಎಫ್‌ಸಿ) ಅನಿಲ ಹೆಚ್ಚು ಬಳಕೆಯಾಗುತ್ತಿದೆ. ಜಾಗತಿಕ ತಾಪಮಾನ ಹೆಚ್ಚಳದಲ್ಲಿ ಇದರ ಪ್ರಭಾವ ಅಧಿಕವಾಗಿದ್ದು, 2045ರ ವೇಳೆಗೆ ಶೇ.85ರಷ್ಟು ಎಚ್‌ಎಫ್‌ಸಿ ಬಳಕೆ ತಗ್ಗಿಸುವ ನಿಟ್ಟಿನಲ್ಲಿ ಭಾರತ, ಚೀನಾ, ಅಮೆರಿಕ ಹಾಗೂ ಯುರೋಪ್‌ ಶುಕ್ರವಾರ ಸಮ್ಮತಿಸಿದ್ದವು.

ಅತಿ ಹೆಚ್ಚು ಎಚ್‌ಎಫ್‌ಸಿ ಉತ್ಪಾದಕ ರಾಷ್ಟ್ರವಾಗಿರುವ ಚೀನಾ 2045ರಲ್ಲಿ ಶೇ.80 ಬಳಕೆ ಕಡಿಮೆ ಮಾಡುವ ಗುರಿ ಹೊಂದಿದೆ.

ಕ್ಲೋರೋ–ಡೈಫ್ಲೂರೋ–ಮಿಥೇನ್‌ (ಎಚ್‌ಸಿಎಫ್‌ಸಿ–22)ನ ಉಪ ಉತ್ಪನ್ನವಾಗಿರುವ ಟ್ರೈಫ್ಲೂರೋ–ಮಿಥೇನ್‌(ಎಚ್‌ಎಫ್‌ಸಿ–23) ಶಕ್ತಿಯುವ ಹಸಿರುಮನೆ ಅನಿಲವಾಗಿದ್ದು, ಭಾರತ ಇದರ ನಿಯಂತ್ರಣಕ್ಕೆ ಈಗಾಗಲೇ ಕಾರ್ಯತಂತ್ರ ಪ್ರಕಟಿಸಿದೆ. ಎಚ್‌ಸಿಎಫ್‌ಸಿ–22 ದೇಶದಲ್ಲಿ ಶೈತ್ಯಕಾರಿಯಾಗಿ ಹೆಚ್ಚು ಬಳಕೆಯಲ್ಲಿದೆ.

Comments are closed.