ಅಂತರಾಷ್ಟ್ರೀಯ

ಸದ್ದಿಲ್ಲದೆ ಯುದ್ಧ ಸಿದ್ಧತೆಗಳನ್ನು ಆರಂಭಿಸಿದ ರಷ್ಯಾ ; 3ನೇ ವಿಶ್ವಯುದ್ಧಕ್ಕೆ ಕಾರಣವಾಗುತ್ತಾ ?

Pinterest LinkedIn Tumblr

obama-putin-russia-america-nuclear-war

ಮಾಸ್ಕೋ: ಸಿರಿಯಾ ವಿಷಯದಲ್ಲಿ ಅಮೆರಿಕ ನಡೆ ವಿರುದ್ಧ ತೀರ್ವ ಅಸಮಾಧಾನಗೊಂಡಿರುವ ರಷ್ಯಾ ಇದೀಗ ಯುದ್ಧದ ಉತ್ಸಾಹದಲ್ಲಿದೆ. ಸದ್ದಿಲ್ಲದೆ ಯುದ್ಧ ಸಿದ್ಧತೆಗಳನ್ನು ರಷ್ಯಾ ಆರಂಭಿಸಿದೆ. ರಷ್ಯಾದ ಈ ಯುದೊœàನ್ಮಾದ 3ನೇ ವಿಶ್ವಯುದ್ಧಕ್ಕೆ ಕಾರಣವಾಗುತ್ತಾ ಎಂಬ ಆತಂಕ ಈಗ ಮೂಡಿದೆ. ಒಂದು ವೇಳೆ 3ನೇ ವಿಶ್ವಸಮರವಾದರೆ ಇದು ಅಣುಸಮರವಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಶೀತಲ ಸಮರದ ಬಳಿಕ ಅಮೆರಿಕದ ಜತೆ ರಷ್ಯಾ ಸಂಬಂಧ ಹಳಸಿ ಹೋಗಿದ್ದು, ಇದು ಇನ್ನೂ ಹೊಗೆಯಾಡುತ್ತಲೇ ಇದೆ. ಸಂಬಂಧ ಅತ್ಯಂತ ಕೆಳಮಟ್ಟಕ್ಕೆ ತಲುಪಿದೆ. ಇದು ಯುದ್ಧಕ್ಕೆ ಕಾರಣವಾಗಬಹುದು ಎಂದು ರಕ್ಷಣಾ ತಜ್ಞರನ್ನು ಉಲ್ಲೇಖೀಸಿ ಬ್ರಿಟನ್‌ನ ಸನ್‌ ಟ್ಯಾಬ್ಲಾಯ್ಡ ಪತ್ರಿಕೆ ವರದಿ ಮಾಡಿದೆ.

ಸಿರಿಯಾದಲ್ಲಿನ ಐಸಿಸ್‌ ಉಗ್ರರ ಉಪಟಳ ಮತ್ತು ಅಂತರ್ಯುದ್ಧದ ಹಿನ್ನೆಲೆಯಲ್ಲಿ ಬಂಡುಕೋರರ ವಿರುದ್ಧ ಅಮೆರಿಕ ಮತ್ತು ರಷ್ಯಾ ವಾಯುದಾಳಿ ಆರಂಭಿಸಿದ್ದವು. ಆದರೆ ರಷ್ಯಾ ಈ ದಾಳಿಯ ಶ್ರೇಯಸ್ಸನ್ನು ಪಡೆದುಕೊಳ್ಳುತ್ತಿದೆ ಎಂದು ಆರೋಪಿಸಿದ್ದ ಅಮೆರಿಕ, ಈಗ ಸಿರಿಯಾ ಕಾರ್ಯಾಚರಣೆ ಮತ್ತು ಮಾತುಕತೆಯಿಂದ ಹಿಂದಕ್ಕೆ ಸರಿದಿದೆ. ಇದು ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ರನ್ನು ಕೆರಳಿಸಿದೆ. ಇದು ಅವರನ್ನು ಯುದ್ಧಾಲೋಚನೆಯಲ್ಲಿ ತೊಡಗುವಂತೆ ಮಾಡಿದೆ ಎಂದು ಹೇಳಲಾಗುತ್ತಿದೆ.

ವಿದೇಶದಲ್ಲಿರುವ ಪ್ರಜೆಗಳಿಗೆ ವಾಪಸ್‌ ಸೂಚನೆ:
ಈ ವಿದ್ಯಮಾನಗಳ ನಡುವೆಯೇ, ವಿಶ್ವಾದ್ಯಂತ ಇರುವ ತನ್ನ ಪ್ರಜೆಗಳನ್ನು ರಷ್ಯಾ ಸರ್ಕಾರ ಆದಷ್ಟು ಬೇಗನೆ ಸ್ವದೇಶಕ್ಕೆ ಮರಳುವಂತೆ ಸೂಚಿಸಿದೆ ಎಂದು ದ ಸನ್‌ ವರದಿ ಮಾಡಿದೆ.

ಮೂರನೇ ಮಹಾಯುದ್ಧದ ಸಾಧ್ಯತೆಗಳಿಗೆ ಕಾರಣವಾಗುವ ರೀತಿಯ ಉದ್ವಿಗ್ನತೆ, ಬಿಕ್ಟಟ್ಟು ಕಂಡು ಬರುತ್ತಿರುವ ಕಾರಣ ರಷ್ಯಾ ಅಧ್ಯಕ್ಷ$ವ್ಲಾದಿಮಿರ್‌ ಪುಟಿನ್‌ ಅವರು ಯುದ್ಧ ಸನ್ನದ್ಧತೆಯ ಆದೇಶವನ್ನು ನೀಡಿರುವುದಾಗಿ ಪತ್ರಿಕೆ ಹೇಳಿದೆ.

ಇದಕ್ಕೆ ಪೂರಕ ಎಂಬಂತೆ ಸಂಪೂರ್ಣ ಅಣು ಸಮರದ ಸಂಭಾವ್ಯತೆಯ ಹಿನ್ನೆಲೆಯಲ್ಲಿ ಇತ್ತೀಚೆಗೆ ರಷ್ಯಾ ತನ್ನ 4 ಕೋಟಿ ಪ್ರಜೆಗಳನ್ನು ಸಕ್ರಿಯವಾಗಿ ತೊಡಗಿಸಿ ರಕ್ಷಣಾ ಕವಾಯತನ್ನು ನಡೆಸಿದೆ. ರಷ್ಯಾ ಸರ್ಕಾರ ವಿದೇಶಗಳಲ್ಲಿರುವ ತನ್ನ ಎಲ್ಲ ಅಧಿಕಾರಿಗಳಿಗೆ, ತಮ್ಮ ಮಕ್ಕಳು ಹಾಗೂ ಸಂಬಂಧಿಕರೊಂದಿಗೆ, ತಾಯ್ನೆಲಕ್ಕೆ ಮರಳುವಂತೆ ಆದೇಶಿಸಿರುವುದಾಗಿ ವರದಿ ತಿಳಿಸಿದೆ.

ಇದೇ ವೇಳೆ ಪುಟಿನ್‌ ಅವರು ದಿಢೀರ್‌ ಆಗಿ ತಮ್ಮ ಫ್ರಾನ್ಸ್‌ ಭೇಟಿಯನ್ನು ರದ್ದು ಪಡಿಸಿರುವುದು ಕೂಡ ಹಲವು ಅನುಮಾನಗಳಿಗೆ ಕಾರಣವಾಗಿದೆ.

ಮೇಲಾಗಿ ಭಾರತ, ಪಾಕಿಸ್ತಾನ, ಚೀನಾ ಸೇರಿದಂತೆ ಹಲ ದೇಶಗಳ ಯೋಧರ ಜತೆಗೂಡಿ ರಷ್ಯಾ ಜಂಟಿ ಸಮರಾಭ್ಯಾಸವನ್ನು ಇತ್ತೀಚೆಗೆ ನಡೆಸುತ್ತಿರುವುದು ಯುದ್ಧದ ವಾತಾವರಣಕ್ಕೆ ಇಂಬು ನೀಡಿದೆ.

ಯುದ್ಧಕ್ಕೆ ಕಾರಣ ಏನು?
ಸಿರಿಯಾದಲ್ಲಿನ ಬಂಡುಕೋರರ ವಿರುದ್ಧದ ಜಂಟಿ ಸಮರದಲ್ಲಿ ಅಮೆರಿಕವು ರಷ್ಯಾಗೆ ಸಹಯೋಗ ನೀಡದೇ ಹಿಂದೆ ಸರಿದಿರುವುದು ರಷ್ಯಾ ಕೋಪಕ್ಕೆ ಕಾರಣವಾಗಿದೆ. ಇದು ರಷ್ಯಾವನ್ನು ಯುದ್ಧದ ಚಿಂತನೆಗೆ ಹೊರಳಿಸಿದೆ ಎನ್ನಲಾಗಿದೆ.

ರಷ್ಯಾದ ಯುದ್ಧ ಸಿದ್ಧತೆಗಳು
-ವಿಶ್ವದೆಲ್ಲೆಡೆ ನೆಲೆಸಿರುವ ರಷ್ಯಾ ನಾಗರಿಕರಿಗೆ ವಾಪಸಾಗಲು ಸೂಚನೆ
-ಚೀನಾ ಮತ್ತಿತರ ಮಿತ್ರ ರಾಷ್ಟ್ರಗಳ ಜತೆಗೂಡಿ ಸಮರಾಬ್ಯಾಸ
-4ಕೋಟಿ ರಷ್ಯಾ ಪ್ರಜೆಗಳನ್ನು ಒಳಗೊಂಡ ರಕ್ಷಣಾ ಕವಾಯತು
-ಅಮೆರಿಕ ವಿರುದ್ಧ ಅಣ್ವಸ್ತ್ರಗಳನ್ನು ಬಳಸಲು ಚಿಂತನೆ
(ಉದಯವಾಣಿ)

Comments are closed.