ಇಸ್ಲಾಮಾಬಾದ್: ಭಯೋತ್ಪಾದನೆ ವಿರುದ್ಧ ಕಠಿಣ ನಿಲುವು ತಳೆಯಲು ವಿಫಲವಾಗಿರುವ ಪಾಕಿಸ್ತಾನ ಸರ್ಕಾರ ಹಾಗೂ ಸೇನೆಯನ್ನು ಅಲ್ಲಿನ ಪತ್ರಿಕೆಯೊಂದು ತರಾಟೆಗೆ ತೆಗೆದುಕೊಂಡಿದ್ದು, ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆ ಮುಖಂಡ ಮಸೂದ್ ಅಜರ್ ಹಾಗೂ ಜೆಯುಡಿ ಉಗ್ರ ಸಂಘಟನೆ ಮುಖ್ಯಸ್ಥ ಹಫೀಜ್ ಸಯೀದ್ ವಿರುದ್ಧ ಏಕೆ ಕಠಿಣ ಕ್ರಮ ಜರುಗಿಸುತ್ತಿಲ್ಲ ಎಂದು ಪ್ರಶ್ನಿಸಿದೆ.
ಡಾನ್ ಪತ್ರಿಕೆಯ ಪತ್ರಕರ್ತ ಸೇನೆ ಮತ್ತು ಪಾಕ್ ಸರ್ಕಾರದ ನಡುವೆ ಹೊಂದಾಣಿಕೆ ಇಲ್ಲದಿರುವುದನ್ನು ವರದಿ ಮಾಡಿದ್ದ ಹಿನ್ನೆಲೆಯಲ್ಲಿ ಪಾಕ್ ನಲ್ಲಿರಲು ಪತ್ರಕರ್ತನಿಗೆ ನಿಷೇಧ ವಿಧಿಸಿದ ಹಿನ್ನೆಲೆಯಲ್ಲಿ ದಿ ನೇಷನ್ ಎಂಬ ಪತ್ರಿಕೆ ಸಂಪಾದಕೀಯದಲ್ಲಿ ಪಾಕ್ ಸರ್ಕಾರ ಹಾಗೂ ಸೇನೆಯನ್ನು ತರಾಟೆಗೆ ತೆಗೆದುಕೊಂಡಿದ್ದು, ಹಫೀಜ್ ಸಯೀದ್, ಮಸೂದ್ ಅಜರ್ ನಂತಹ ಉಗ್ರರು ಹಾಗೂ ಉಗ್ರ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಪಾಕಿಸ್ತಾನದ ಆಡಳಿತ ವರ್ಗ ಮಾಧ್ಯಮಗಳಿಗೆ ಬೋಧನೆ ಮಾಡುವುದರಲ್ಲಿ ನಿರತವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ.
ಪಠಾಣ್ ಕೋಟ್ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಮಸೂದ್ ಅಜರ್ ಹಾಗೂ 2008 ರ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಗೆ ಪಾಕ್ ಸೇನೆ ರಕ್ಷಣೆ ನೀಡುತ್ತಿರುವ ಆರೋಪವಿದೆ. ಮಾಧ್ಯಮಗಳಿಗೆ ಹೇಗೆ ಕಾರ್ಯನಿರ್ವಹಿಸಬೇಕೆಂಬುದನ್ನು ನಾಗರಿಕ ಹಾಗೂ ಸೇನಾ ನಾಯಕತ್ವ ಬೋಧನೆ ಮಾಡಿರುವುದು ಕೆಟ್ಟ ಬೆಳವಣಿಗೆ ಎಂದು ಸಂಪಾದಕೀಯದಲ್ಲಿ ಪತ್ರಿಕೆ ಅಸಮಾಧಾನ ವ್ಯಕ್ತಪಡಿಸಿದೆ.
ಡಾನ್ ಪತ್ರಿಕೆಯ ಪತ್ರಕರ್ತ ಸೇನೆಗೂ ಸರ್ಕಾರಕ್ಕೂ ಹೊಂದಾಣಿಕೆ ಇಲ್ಲ ಎಂದು ಬರೆದಿರುವುದನ್ನು ಸೇನೆ ಮತ್ತು ಸರ್ಕಾರ ನಿರಾಕರಿಸುತ್ತಿವೆ. ಹಾಗಿದ್ದಲ್ಲಿ ಉಗ್ರಾದ ಮಸೂದ್ ಅಜರ್ ಹಾಗೂ ಹಫೀಜ್ ಸಯೀದ್ ವಿರುದ್ಧ ಕ್ರಮ ಏಕೆ ಕೈಗೊಳ್ಳುತ್ತಿಲ್ಲ ಅಥವಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನವೇಕೆ ಒಂಟಿಯಾಗುತ್ತಿದೆ ಎಂದು ಪ್ರಶ್ನಿಸಿದೆ.
ಮಾಧ್ಯಮಗಳು ಹೇಗೆ ಕಾರ್ಯನಿರ್ವಹಿಸಬೇಕೆಂಬುದನ್ನು ಬೋಧನೆ ಮಾಡಲು, ಒಬ್ಬ ಪತ್ರಕರ್ತನನ್ನ ಕ್ರಿಮಿನಲ್ ನಂತೆ ನಿಷೇಧಿಸುವುದಕ್ಕೆ ಸರ್ಕಾರ ಹಾಗೂ ಸೇನೆಗೆ ಎಷ್ಟು ಧೈರ್ಯ ಇರಬೇಕು? ಪಾಕಿಸ್ತಾನದ ರಾಷ್ಟ್ರೀಯ ಹಿತಾಸಕ್ತಿ ಏನು ಎಂಬುದನ್ನು ಏಕಪಕ್ಷೀಯವಾಗಿ ನಿರ್ಧರಿಸಲು ಎಷ್ಟು ಧೈರ್ಯವಿರಬೇಕು ಎಂದು ಸಂಪಾದಕೀಯ ಪ್ರಶ್ನಿಸಿದ್ದು, ಪಾಕ್ ಸರ್ಕಾರದಿಂದ ದಿಗ್ಭಂಧನಕ್ಕೊಳಗಾಗಿರುವ ಪತ್ರಕರ್ತ ಸಿರಿಲ್ ಅಲ್ಮೈದಾಗೆ ಬೆಂಬಲ ಘೋಷಿಸಿದ್ದು, ಪತ್ರಕರ್ತನೊಂದಿಗೆ ನಿಲ್ಲುವುದಾಗಿ ತಿಳಿಸಿದೆ.
ಅಂತರಾಷ್ಟ್ರೀಯ
Comments are closed.