ಅಂತರಾಷ್ಟ್ರೀಯ

ಪಾಕ್‌ ವಿರುದ್ಧ ದೊಡ್ಡ ಸಮರಕ್ಕೆ ಭಾರತ-ಅಮೆರಿಕ ಸಿದ್ಧತೆ: ಸಯೀದ್‌

Pinterest LinkedIn Tumblr

Sayeed-600ಲಾಹೋರ್‌ : “ಭಾರತ ಮತ್ತು ಅಮೆರಿಕ ಒಂದರ ಬಳಿಕ ಒಂದರಂತೆ ಪರಸ್ಪರ ಹಲವು ಒಪ್ಪಂದಗಳಿಗೆ ಸಹಿ ಹಾಕುತ್ತಿವೆ ಮತ್ತು ಪಾಕಿಸ್ಥಾನದ ವಿರುದ್ಧ ದೊಡ್ಡ ಸಮರ ಹೂಡುವುದಕ್ಕೆ ಅವು ಸಿದ್ಧತೆ ನಡೆಸುತ್ತಿವೆ. ಆದುದರಿಂದ ಮುಸ್ಲಿಮರು ಒಗ್ಗಟ್ಟಿನಿಂದಿರಬೇಕು’ ಎಂದು ಮುಂಬಯಿ ದಾಳಿಯ ಪ್ರಧಾನ ಸೂತ್ರಧಾರನಾಗಿರುವ ನಿಷೇಧಿತ ಉಗ್ರ ಸಂಘಟನೆ ಜಮಾತ್‌ ಉದ್‌ ದಾವಾ ಇದರ ಮುಖ್ಯಸ್ಥ ಹಾಫೀಜ್‌ ಸಯೀದ್‌ ಕರೆ ನೀಡಿದ್ದಾನೆ.

ಲಷ್ಕರ್‌ ಎ ತಯ್ಯಬ ಉಗ್ರ ಸಂಘಟನೆಯ ಸ್ಥಾಪಕನೂ ಆಗಿರುವ ಸಯೀದ್‌ ಇಂದು ಬುಧವಾರ ಲಾಹೋರ್‌ನ ಗದ್ದಾಫಿ ಸ್ಟೇಡಿಯಂನಲ್ಲಿ ಈದ್‌ ಉಲ್‌ ಫಿತರ್‌ ಪ್ರಯುಕ್ತದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಷಣ ಮಾಡುತ್ತಾ, “ಅಮೆರಿಕವು ಪಾಕಿಸ್ಥಾನದಿಂದ ದೂರ ಸರಿಯುತ್ತಿದೆ. ಆದರೆ ಇದು ನಿಜಕ್ಕೂ ಒಂದು ಒಳ್ಳೆಯ ಸುದ್ದಿಯಾಗಿದೆ. ಪಾಕಿಸ್ಥಾನವನ್ನು ಸೋಲಿಸುವ ಕಾಫಿರರ ಯತ್ನಗಳನ್ನು ವಿಫ‌ಲಗೊಳಿಸಲು ಮುಸ್ಲಿಂ ಸಮುದಾಯದವರು ಒಗ್ಗೂಡಬೇಕಾಗಿದೆ’ ಎಂದು ಹೇಳಿರುವುದು ವರದಿಯಾಗಿದೆ.

ಪಾಕಿಸ್ಥಾನದ ಪರಮಾಣು ಕಾರ್ಯಕ್ರಮದ ವಿರುದ್ಧ ಅಂತಾರಾಷ್ಟ್ರೀಯ ಸಮುದಾಯದವರು ಹೂಟ ನಡೆಸುತ್ತಿದ್ದಾರೆ. ಅಮೆರಿಕ ಮತ್ತು ಭಾರತ ಜತೆಗೂಡಿ ಪಾಕ್‌ ವಿರುದ್ಧ ದೊಡ್ಡ ಸಮರಕ್ಕೆ ಸಿದ್ಧತೆ ನಡೆಸುತ್ತಿವೆ. ಭಾರತೀಯ ವಿಮಾನ ನಿಲ್ದಾಣಗಳಲ್ಲಿ ಡ್ರೋನ್‌ಗಳನ್ನು ಇರಿಸಲಾಗಿದೆ. ಹಾಗಿದ್ದರೂ ನಮ್ಮನ್ನು ಆಳುವ ಮಂದಿ ವಿಪಕ್ಷೀಯರೊಂದಿಗೆ ಜಗಳವಾಡುತ್ತಿದ್ದಾರೆ ಎಂದು ಸಯೀದ್‌ ಹೇಳಿದ್ದಾನೆ.

ಪಾಕಿಸ್ಥಾನ ಮತ್ತು ಸೌದಿ ಅರೇಬಿಯದಿಂದ ಅಮೆರಿಕವು ದೂರ ಸರಿಯುತ್ತಿರುವುದು ಪರೋಕ್ಷವಾಗಿ ಒಳಿತೇ ಆಗಲಿದೆ ಎಂದಿರುವ ಸಯೀದ್‌ ತಲೆಗೆ ಅಮೆರಿಕ ಈಗಾಗಲೇ 1 ಕೋಟಿ ಡಾಲರ್‌ ಬಹುಮಾನವನ್ನು ಘೋಷಿಸಿದೆ.
-ಉದಯವಾಣಿ

Comments are closed.