ಅಂತರಾಷ್ಟ್ರೀಯ

ಭಾರತಕ್ಕೆ ಎನ್‌ಎಸ್‌ಜಿ ಸದಸ್ಯತ್ವ: ಚೀನಾ ಮಾಧ್ಯಮ ಅಪಸ್ವರ

Pinterest LinkedIn Tumblr

G-timemsmಬೀಜಿಂಗ್‌ (ಪಿಟಿಐ): ಭಾರತಕ್ಕೆ ಎನ್‌ಎಸ್‌ಜಿ ಸದಸ್ಯತ್ವ ಸಿಗುವುದರಿಂದ ದಕ್ಷಿಣ ಏಷ್ಯಾದ ‘ಸಮತೋಲನ’ ಹಾಳಾಗಲಿದೆ ಎಂದು ಚೀನಾದ ಪ್ರಮುಖ ಮಾಧ್ಯಮ ‘ಗ್ಲೋಬಲ್‌ ಟೈಮ್ಸ್‌’ ವರದಿ ಮಾಡಿದೆ.

ಭಾರತಕ್ಕೆ ಎನ್‌ಎಸ್‌ಜಿ ಸದಸ್ಯತ್ವ ಸಿಕ್ಕರೆ ಚೀನಾದ ರಾಷ್ಟ್ರೀಯ ಹಿತಾಸಕ್ತಿಗಳಿಗೆ ಅಪಾಯ ಎದುರಾಗಲಿದೆ. ಅಲ್ಲದೆ, ಇದರಿಂದ ಪಾಕಿಸ್ತಾನಕ್ಕೂ ಆತಂಕ ಉಂಟಾಗಲಿದೆ ಎಂದು ‘ಗ್ಲೋಬಲ್‌ ಟೈಮ್ಸ್‌’ ಮಂಗಳವಾರ ವರದಿ ಮಾಡಿದೆ.

ಭಾರತ ಎನ್‌ಎಸ್‌ಜಿ ಸದಸ್ಯತ್ವ ಪಡೆಯದಂತೆ ಅಡ್ಡಗಾಲು ಹಾಕುತ್ತಿರುವ ಚೀನಾದ ಪ್ರಯತ್ನಕ್ಕೆ ಇದು ಇನ್ನಷ್ಟು ಪುಷ್ಟಿ ನೀಡಿದಂತಾಗಿದೆ.

48 ರಾಷ್ಟ್ರಗಳ ಎನ್‌ಎಸ್‌ಜಿ ಸದಸ್ಯತ್ವಕ್ಕೆ ಚೀನಾದ ಅಡ್ಡಿಯನ್ನು ನಿವಾರಿಸಲು ಭಾರತ ಶತಾಯಗತಾಯ ಯತ್ನಿಸುತ್ತಿದ್ದರೂ ಚೀನಾ ಇತ್ತೀಚಿನ ದಿನಗಳಲ್ಲಿ ತನ್ನ ನಿಲುವನ್ನು ಸಾರ್ವಜನಿಕವಾಗಿಯೇ ವ್ಯಕ್ತಪಡಿಸುತ್ತಿದೆ.

ಅಣ್ವಸ್ತ್ರ ಪ್ರಸರಣ ಒಪ್ಪಂದದಿಂದ (ಎನ್‌ಪಿಟಿ) ಹೊರಗಿರುವ ರಾಷ್ಟ್ರಗಳಿಗೆ ಗುಂಪಿನ ಸದಸ್ಯತ್ವ ನೀಡುವ ವಿಚಾರದಲ್ಲಿ ಎನ್‌ಎಸ್‌ಜಿ ಸದಸ್ಯರು ಭಿನ್ನಾಭಿಪ್ರಾಯ ಹೊಂದಿದ್ದಾರೆ ಎಂದು ಭಾನುವಾರ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದ ಚೀನಾ, ಈ ಸಂಬಂಧ ಸಮಗ್ರ ಚರ್ಚೆ ನಡೆಯಬೇಕು ಎಂದು ಕರೆ ನೀಡಿತ್ತು.

‘ಅಣ್ವಸ್ತ್ರ ಹೊಂದುವ ಹೆಬ್ಬಯಕೆಯನ್ನು ಕುರುಡಾಗಿ ನೆಚ್ಚಿಕೊಳ್ಳಬೇಡಿ’ ಎಂದು ‘ಗ್ಲೋಬಲ್‌ ಟೈಮ್ಸ್‌’ ಭಾರತಕ್ಕೆ ಕಿವಿಮಾತು ಹೇಳಿದೆ.

‘ಎನ್‌ಎಸ್‌ಜಿ ಪ್ರವೇಶಕ್ಕೆ ಬೆಂಬಲ ಗಳಿಸುವ ಗುರಿಯಿಟ್ಟುಕೊಂಡು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ವಾರ ಜಗತ್ತಿನ ಅರ್ಧಭಾಗದಲ್ಲಿ ಪ್ರವಾಸ ಕೈಗೊಂಡಿದ್ದರು.

ಜೂನ್‌ 24ರಂದು ಸೋಲ್‌ನಲ್ಲಿ ನಡೆಯಲಿರುವ ಎನ್‌ಎಸ್‌ಜಿ ಸಮಿತಿ ಸಭೆಗೆ ಪೂರ್ವಭಾವಿಯಾಗಿ ಅವರು ಈ ಪ್ರವಾಸ ಮಾಡಿದ್ದರು’ ಎಂದೂ ಪತ್ರಿಕೆ ಬರೆದಿದೆ.

ಅಮೆರಿಕ ಮತ್ತು ಕೆಲವು ಎನ್‌ಎಸ್‌ಜಿ ಸದಸ್ಯರು ಭಾರತಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ. ಆದರೆ ಚೀನಾವೂ ಸೇರಿದಂತೆ ಹೆಚ್ಚಿನ ದೇಶಗಳ ವಿರೋಧವು ಭಾರತಕ್ಕೆ ಕಿರಿಕಿರಿ ಉಂಟುಮಾಡಿರಬೇಕು’ ಎಂದು, ಸರ್ಕಾರಿ ಸ್ವಾಮ್ಯದ ‘ಗ್ಲೋಬಲ್‌ ಟೈಮ್ಸ್‌’ ಎನ್‌ಎಸ್‌ಜಿ ಸಂಬಂಧ ಇದೇ ಮೊದಲ ಬಾರಿಗೆ ಪ್ರಕಟಿಸಿರುವ ವರದಿಯಲ್ಲಿ ಹೇಳಿದೆ.

Comments are closed.