ಅಂತರಾಷ್ಟ್ರೀಯ

ಮಾತು ಕೇಳದ ಹೆಂಡತಿಯನ್ನು ಥಳಿಸಲು ಗಂಡನಿಗೆ ಅಧಿಕಾರ

Pinterest LinkedIn Tumblr

1-Beating-Wife-webಇಸ್ಲಾಮಾಬಾದ್: ಗಂಡನ ಮಾತು ಕೇಳದ ಹೆಂಡತಿಗೆ ಸಣ್ಣ ಪ್ರಮಾಣದಲ್ಲಿ ಥಳಿಸಲು ಅವಕಾಶ ನೀಡುವಂತೆ ಪಾಕಿಸ್ತಾನದ ಸಂವಿಧಾನದ ಮಾನ್ಯತೆ ಪಡೆದಿರುವ ಇಸ್ಲಾಂ ಸೈದ್ಧಾಂತಿಕ ಮಂಡಳಿ ಪಾಕ್ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಪಾಕಿಸ್ತಾನದ ಪಂಜಾಬ್ ಪ್ರಾಂತೀಯ ಸರ್ಕಾರವು ಹೊಸದಾಗಿ ಮಹಿಳಾ ಸುರಕ್ಷತಾ ಮಸೂದೆ ಜಾರಿಗೆ ತರಲು ಸಿದ್ಧತೆ ನಡೆಸುತ್ತಿದ್ದು, ಇಸ್ಲಾಂ ಸೈದ್ಧಾಂತಿಕ ಮಂಡಳಿ ತನ್ನ ಶಿಫಾರಸ್ಸುಗಳನ್ನು ಸರ್ಕಾರಕ್ಕೆ ಸಲ್ಲಿಸಿದೆ. ಈ ಮುನ್ನ ಮಂಡಳಿಯು ಇಸ್ಲಾಂ ಧರ್ಮಕ್ಕೆ ವಿರುದ್ಧವಾಗಿದೆ ಎಂದು ಪಂಜಾಬ್ ವಿಧಾನಸಭೆ ಅನುಮೋದಿಸಿದ್ದ ಮಹಿಳಾ ರಕ್ಷಣಾ ಮಸೂದೆ (ಪ್ರೊಟೆಕ್ಷನ್ ಆಫ್ ವುಮೆನ್ ಅಗೆನೆಸ್ಟ್ ವಯಲೆನ್ಸ್ ಆಕ್ಟ್ – 2015) ನ್ನು ತಿರಸ್ಕರಿಸಿತ್ತು. ಹಳೆ ಮಸೂದೆಯನ್ನು ತಿರಸ್ಕರಿಸಿದ ನಂತರ ಇಸ್ಲಾಂ ಸೈದ್ಧಾಂತಿಕ ಮಂಡಳಿಯು ಹೊಸ ವಿವಾದಾತ್ಮಕ ಮಸೂದೆಯನ್ನು ಸಿದ್ಧಪಡಿಸಿದ್ದು, 163 ಪುಟಗಳ ಹೊಸ ಮಸೂದೆಯ ಕರಡನ್ನು ಪಂಜಾಬ್ ಸರ್ಕಾರಕ್ಕೆ ಸಲ್ಲಿಸುತ್ತಿದೆ.

ಈ ಮಸೂದೆಯಲ್ಲಿ ಗಂಡನ ಇಷ್ಟಕ್ಕೆ ವಿರುದ್ಧವಾಗಿ ನಡೆದುಕೊಳ್ಳುವ ಮಹಿಳೆಗೆ ಸಣ್ಣ ಪ್ರಮಾಣದಲ್ಲಿ ಥಳಿಸಲು ಅವಕಾಶ ನೀಡಬೇಕೆಂದು ತಿಳಿಸಲಾಗಿದೆ. ಜತೆಗೆ ಗಂಡನ ಇಷ್ಟದಂತೆ ಉಡುಗೆ ತೊಡದ, ದೈಹಿಕ ಸಂಪರ್ಕಕ್ಕೆ ನಿರಾಕರಿಸುವ, ಆಗಂತುಕರೊಂದಿಗೆ ಮಾತನಾಡಿದರೆ, ಜೋರಾಗಿ ಮಾತನಾಡಿದರೆ, ಗಂಡನ ಒಪ್ಪಿಗೆಯಿಲ್ಲದೆ ಇತರರಿಗೆ ಹಣ ನೀಡಿದರೆ, ಬುರ್ಕಾ ತೊಡದಿದ್ದರೆ ಗಂಡ ತನ್ನ ಹೆಂಡತಿಯನ್ನು ದಂಡಿಸಬಹುದು ಎಂದು ಹೊಸ ವಿವಾದಾತ್ಮಕ ಮಸೂದೆಯಲ್ಲಿ ಶಿಫಾರಸು ಮಾಡಲಾಗಿದೆ.

ಜತೆಗೆ ಈ ಮಸೂದೆಯಲ್ಲಿ ಹೆಣ್ಣು ಮಕ್ಕಳು ಪ್ರಾಥಮಿಕ ಶಿಕ್ಷಣದ ನಂತರ ಬಾಲಕರೊಂದಿಗೆ ಶಾಲೆಗೆ ತೆರಳದಂತೆ ನಿರ್ಬಂಧಿಸುವಂತೆ, ಸೇನೆಯಲ್ಲಿ ಸೇರ್ಪಡೆಗೊಳ್ಳದಂತೆ, ವಿದೇಶಿ ಅತಿಥಿಗಳನ್ನು ಸ್ವಾಗತಿಸದಂತೆ, ಪುರುಷರೊಂದಿಗೆ ಮಾತನಾಡದಂತೆ, ಆಗಂತುಕರೊಂದಿಗೆ ವಿಹಾರಕ್ಕೆ ತೆರಳದಂತೆ ನಿರ್ಬಂಧಿಸಲು ಶಿಫಾರಸು ಮಾಡಲಾಗಿದೆ.

Comments are closed.