ಅಂತರಾಷ್ಟ್ರೀಯ

ಮಲೇಷ್ಯಾ: ಸರ್ಕಾರ ‌ನಿಂದಿಸಿದರೆ ವಿದೇಶಿ ಪ್ರವಾಸಕ್ಕೆ ನಿಷೇಧ

Pinterest LinkedIn Tumblr

Najib-Razakಕ್ವಾಲಾಲಂಪುರ (ಪಿಟಿಐ): ಸರ್ಕಾರವನ್ನು ಮೂದಲಿಸುವ ಮಲೇಷ್ಯಾ ಪ್ರಜೆಗಳು ಇನ್ಮುಂದೆ ಮೂರು ವರ್ಷಗಳ ಕಾಲ ವಿದೇಶಿ ಪ್ರವಾಸ ಮಾಡದಂತೆ ನಿಷೇಧ ಎದುರಿಸಲಿದ್ದಾರೆ.

ಸರ್ಕಾರಕ್ಕೆ ಅಗೌರವ ತೋರುವ ಅಥವಾ ಲೇವಡಿ ಮಾಡುವ ಪ್ರಜೆಗಳನ್ನು ವಿದೇಶಿ ಪ್ರವಾಸದಿಂದ ತಡೆಯಲು ಅವಕಾಶ ನೀಡುವ ಕಾನೂನು ಜಾರಿಗೆ ಅಧಿಕಾರಿಗಳು ಚಾಲನೆ ನೀಡಿದ್ದಾರೆ. ‘ದೇಶದ ಇಮೇಜ್‌ ಸಂರಕ್ಷಣೆ’ಯೇ ಇದರ ಗುರಿ ಎಂದು ಅಧಿಕಾರಿಗಳು ಹೇಳಿಕೊಂಡಿದ್ದಾರೆ.

ಇಂಥ ನಿಬಂಧನೆ ಚಾಲ್ತಿಯಲ್ಲಿದೆ ಎಂದು ವಲಸೆ ಇಲಾಖೆಯ ‍ಪ್ರಧಾನ ನಿರ್ದೇಶಕ ಶಕೀಬ್ ಕುಶ್ಮಿ ಅವರು ಇಮೇಲ್ ಮೂಲಕ ಪತ್ರಿಕೆಯೊಂದಕ್ಕೆ ಖಚಿತಪಡಿಸಿದ್ದಾರೆ.

ಮಲೇಷ್ಯಾದಲ್ಲಿ ಪಾಸ್‌ಪೋರ್ಟ್‌ ಒಂದು ಸವಲತ್ತು ಮಾತ್ರ. ಅದು ಹಕ್ಕಲ್ಲ. ‘ಆದ್ದರಿಂದ ಪಾಸ್‌ಪೋರ್ಟ್‌ ವಿತರಿಸುವ, ಅದನ್ನು ಮುಂದೂಡುವ ಇಲ್ಲವೇ ಹಿಂಪಡೆಯುವ ವಿವೇಚನಾ ಅಧಿಕಾರ ಸರ್ಕಾರಕ್ಕೆ ಇದೆ’ ಎಂದು ಅವರು ತಿಳಿಸಿದ್ದಾರೆ.

ಅಲ್ಲದೇ, ವಿದೇಶದಲ್ಲಿದ್ದು ಸರ್ಕಾರಕ್ಕೆ ಅಗೌರವ ತೋರುವ ಮಲೇಷ್ಯಾ ಪ್ರಜೆಗಳಿಗೂ ಇದು ಅನ್ವಯಿಸಲಿದೆ. ಅವರು ಸ್ವದೇಶಕ್ಕೆ ಮರಳಿದ ಮೇಲೆ ಮೂರು ವರ್ಷಗಳ ಕಾಲ ವಿದೇಶಿ ಪ್ರವಾಸ ಮಾಡದಂತೆ ನಿಷೇಧ ಶಿಕ್ಷೆ ಎದುರಿಸಲಿದ್ದಾರೆ.

‘ಸರ್ಕಾರದ ವಿರುದ್ಧ ಯಾವುದೇ ಬಗೆಯಲ್ಲಿ ಯಾರೇ ಅವಮಾನ ಮಾಡಿದರೂ ಅವರ ವಿದೇಶಿ ಪ್ರವಾಸದ ಮೇಲೆ ನಿಷೇಧ ಹೇರಲಾಗುವುದು. ಇಂಥ ಪ್ರಕರಣಗಳಲ್ಲಿ ಮನವಿ ಆಲಿಸುವ ಅಧಿಕಾರ ವಲಸೆ ಇಲಾಖೆಯ ಪ್ರಧಾನ ನಿರ್ದೇಶಕರಿಗೆ ಮಾತ್ರವೇ ಇರಲಿದೆ’ ಎಂದು ಮೂಲಗಳನ್ನು ಉಲ್ಲೇಖಿಸಿ ಆ ಪತ್ರಿಕೆ ವರದಿ ಮಾಡಿದೆ.

Comments are closed.