ವಾಷಿಂಗ್ಟನ್, ಮೇ 3-ಪಾಕಿಸ್ತಾನಕ್ಕೆ ಎಫ್-16 ಜೆಟ್ ಯುದ್ಧ ವಿಮಾನಗಳನ್ನು ಮಾರಾಟ ಮಾಡುವ ವಿಷಯಕ್ಕೆ ಸಂಬಂಧಿಸಿದಂತೆ ಸಂಸತ್ ಸದಸ್ಯರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಒಬಾಮಾ ಆಡಳಿತ, ರಾಷ್ಟ್ರೀಯ ನಿಧಿಯಿಂದ ಎಫ್-16 ವಿಮಾನಗಳ ಮೊತ್ತವನ್ನು ಸಂಪೂರ್ಣವಾಗಿ ಪಾವತಿಸಿ ವಿಮಾನ ಪಡೆಯುವಂತೆ ಇಸ್ಲಾಮಾಬಾದ್ಗೆ ಸೂಚಿಸಿದೆ. ಸಬ್ಸಿಡಿ ನೀಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಪಾಕಿಸ್ಥಾನಕ್ಕೆ ಬಲಿಷ್ಠವಾದ ಎಫ್-16 ಜೆಟ್ ಯುದ್ಧ ವಿಮಾನಗಳನ್ನು ನೀಡಿದರೆ ಆ ರಾಷ್ಟ್ರವು ವಿಮಾನಗಳನ್ನು ಭಯೋತ್ಪಾದಕರ ವಿರುದ್ಧ ಬಳಸುವ ಬದಲಾಗಿ ಭಾರತದ ಮೇಲೆ ಬಳಸುವ ಸಾಧ್ಯತೆಗಳೇ ಹೆಚ್ಚಿವೆ.
ಹಾಗಾಗಿ ಯುದ್ಧ ವಿಮಾನ ಮಾರಾಟ ವಿಷಯದಲ್ಲಿ ಮರುಪರಿಶೀಲನೆ ನಡೆಸುವಂತೆ ಅಧ್ಯಕ್ಷ ಬರಾಕ್ ಒಬಾಮಾ ಅವರನ್ನು ಸೆನೆಟ್ ಸದಸ್ಯರು ಇತ್ತೀಚೆಗೆ ಆಗ್ರಹಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಒಬಾಮಾ ಸರ್ಕಾರ ಸಬ್ಸಿಡಿಯ ಆಧಾರದಲ್ಲಿ ಎಫ್-16 ವಿಮಾನ ನೀಡುವ ಬದಲು, ಸಂಪೂರ್ಣ ಹಣ ವಾಪಸ್ ನೀಡಲು ತಿಳಿಸಿದೆ. ಸಬ್ಸಿಡಿ ದರ ಸುಮಾರು 700 ಮಿಲಿಯನ್ ಡಾಲರ್ಗಳಷ್ಟಿತ್ತು. ಆದರೆ, ಇದೀಗ ಪಾಕಿಸ್ತಾನವು ಸಂಪೂರ್ಣ ಪಾವತಿಸಿ ವಿಮಾನ ಪಡೆಯಬೇಕಾಗಿದೆ ಎಂದು ಒಬಾಮಾ ಆಡಳಿತದ ವಕ್ತಾರ ಜಾನ್ಕಿರ್ಬಿ ಹೇಳಿದ್ದಾರೆ.
ಕಳೆದ ಫೆ.11ರಂದು ಸರ್ಕಾರ ತನ್ನ ಈ ಎಫ್-16 ವಿಮಾನ ಮಾರಾಟದ ಪ್ರಸ್ತಾವನೆಯನ್ನು ಸಂಸದರೆದುರು ಪ್ರಸ್ತಾಪಿಸಿತ್ತು. ಅಲ್ಲದೆ ಅಮೆರಿಕದಲ್ಲಿರುವ ಭಾರತದ ರಾಯಭಾರಿ ರಿಚರ್ಡ್ವರ್ಮಾ ಅವರಿಗೂ ಮಾಹಿತಿ ನೀಡಿ, ವಿಮಾನ ನೀಡಿಕೆ ವಿರುದ್ಧ ಆಕ್ಷೇಪ ಸಲ್ಲಿಸಬಹುದು ಎಂದು ತಿಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಭಾರತ ಕೂಡ ಅಮೆರಿಕ ನಿರ್ಧಾರವನ್ನು ವಿರೋಧಿಸಿತ್ತು. ಶನಿವಾರ ನಡೆದ ಕಾಂಗ್ರೆಸ್ ಸಂಸದರ ಸಭೆಯಲ್ಲಿ ಪಾಕಿಸ್ಥಾನಕ್ಕೆ ವಿಮಾನ ನೀಡಿಕೆಯನ್ನು ಬಲವಾಗಿ ವಿರೋಧಿಸಲಾಗಿತ್ತು ಎಂದು ಸೆನೆಟರ್ ಬಾಟ್ಕಾರ್ಕರ್ ಹೇಳಿದ್ದರು. ಈ ಮಧ್ಯೆ ಭಯೋತ್ಪಾದನೆ ವಿರುದ್ಧ ಪಾಕಿಸ್ಥಾನ ಯಾವುದೇ ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ಪಾಕ್ ಭೇಟಿಯಲ್ಲಿರುವ ಅಮೆರಿಕ ನಿಯೋಗ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.