ಕರ್ನಾಟಕ

ಚಿತ್ರಕಲಾ ಪರಿಷತ್‌ಗೆ ಸುವರ್ಣ ಸಂಭ್ರಮ

Pinterest LinkedIn Tumblr

CHITRACLRಬೆಂಗಳೂರು, ಮೇ ೩- ಕರ್ನಾಟಕ ಚಿತ್ರಕಲಾ ಪರಿಷತ್‌ನ 50 ವರ್ಷದ ನೆನಪಿನ ಸುವರ್ಣ ಸಂಭ್ರಮ ಹಾಗೂ ಮಾಜಿ ಮುಖ್ಯಮಂತ್ರಿ ದೇವರಾಜು ಅರಸು ಅವರ ಜನ್ಮ ಶತಮಾನೋತ್ಸವ ಸ್ಮರಣಾರ್ಥ ಇದೇ 5 ರಿಂದ ಒಂದು ವಾರದ ಕಾಲ ಚಿತ್ರಕಲಾ ಪರಿಷತ್‌ನ ಬೆಳವಣಿಗೆಯ ಅಪರೂಪದ ಛಾಯಾಚಿತ್ರ ಪ್ರದರ್ಶನವನ್ನು ಏರ್ಪಡಿಸಲಾಗಿದೆ.
ಚಿತ್ರಕಲಾ ಪರಿಷತ್‌ಗೆ ಮಾಜಿ ಮುಖ್ಯಮಂತ್ರಿ ದೇವರಾಜು ಅರಸು ಅವರು ಅಡಿಗಲ್ಲು ಹಾಕಿದ್ದು ನಂತರ ನಡೆದುಬಂದ ಹಾದಿಯ ಕುರಿತು ಸುಮಾರು 600ಕ್ಕೂ ಹೆಚ್ಚು ಛಾಯಾಚಿತ್ರ ಪ್ರದರ್ಶನಗಳನ್ನು ಏರ್ಪಡಿಸಲಾಗಿದ್ದು, ಇವುಗಳನ್ನು ಜನರ ಮುಂದಿಡಲಾಗುವುದು ಎಂದು ಚಿತ್ರಕಲಾ ಪರಿಷತ್ ಅಧ್ಯಕ್ಷ ಡಾ. ಬಿ.ಎಲ್. ಶಂಕರ್ ಮತ್ತು ಇತರ ಪದಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಚಿತ್ರಕಲಾ ಪರಿಷತ್‌‌ನ ಬೆಳವಣಿಗೆಗೆ ಕಾರಣರಾದ ಎಲ್ಲರನ್ನು ನೆನೆಯುವುದು ಅಪರೂಪದ ಛಾಯಾಚಿತ್ರ ಪ್ರದರ್ಶನವನ್ನು ಚಿತ್ರಕಲಾ ಪರಿಷತ್ ಆವರಣದಲ್ಲಿ ಮೇ 5 ರಿಂದ 10ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಮೇ 5 ರಂದು ಸಂಜೆ 5 ಗಂಟೆಗೆ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಛಾಯಾಚಿತ್ರ ಪ್ರದರ್ಶನವನ್ನು ಉದ್ಘಾಟಿಸಲಿದ್ದು, ವಾರ್ತಾ ಸಚಿವ ರೋಷನ್ ಬೇಗ್, ಖ್ಯಾತ ಕಲಾವಿದ ಪ್ರೊ. ಎ. ಆಲ್ಫಾನ್ಸೊ, ಮಾಜಿ ಸಂಸದ ಎಚ್. ವಿಶ್ವನಾಥ್, ಭಾರತಿ ಅರಸು ಸೇರಿದಂತೆ, ಅನೇಕರು ಪಾಲ್ಗೊಳ್ಳಲಿದ್ದಾರೆ ಎಂದರು.
ಚಿತ್ರಕಲಾ ಪರಿಷತ್‌ನಲ್ಲಿರುವ 5 ಕಲಾ ಗ್ಯಾಲರಿಯಲ್ಲಿ ಕಲಾವಿದರ ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಬಾಡಿಗೆ ಹೊರತುಪಡಿಸಿ ಮಾರಾಟವಾಗುವ ಕಲಾಕೃತಿಗಳಿಗೆ ಚಿತ್ರಕಲಾ ಪರಿಷತ್ ಯಾವುದೇ ಕಮಿಷನ್ ಪಡೆಯುವುದಿಲ್ಲ. ಕಲಾ ಮಾರ್ಟ್‌ನಲ್ಲಿ ಮೂರು ತಿಂಗಳವರೆಗೆ ಕಲಾವಿದರು ತಮ್ಮ ಕಲಾಕೃತಿಗಳನ್ನು ಉಚಿತವಾಗಿ ಪ್ರದರ್ಶಿಸಬಹುದು. ಅಷ್ಟರೊಳಗೆ ಮಾರಾಟವಾದರೆ, ಬಾಡಿಗೆ ಪಡೆಯಲಾಗುತ್ತದೆ. ಇಲ್ಲದಿದ್ದರೆ, ಕಲಾವಿದರು ಕಲಾಕೃತಿಗಳನ್ನು ತೆಗೆದುಕೊಂಡು ಹೋಗಬಹುದು ಎಂದು ಹೇಳಿದರು.
ಮತ್ತೊಂದು ಕಲಾ ಗ್ಯಾಲರಿಯಲ್ಲಿ ಚಿತ್ರಕಲಾ ಪರಿಷತ್‌ನ ವಿದ್ಯಾರ್ಥಿಗಳು, ಪ್ರಾಧ್ಯಾಪಕರು, ಚಿತ್ರಕಲಾ ಪರಿಷತ್‌ನ ಸದಸ್ಯರಿಗಾಗಿ ಮೀಸಲಿಡಲಾಗಿದೆ. ಇಲ್ಲಿ ಉಚಿತವಾಗಿ ಅವರು ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಬಹುದು ಎಂದರು.
ರಾಜ್ಯ ಸರ್ಕಾರ ಚಿತ್ರಕಲಾ ಪರಿಷತ್‌ಗೆ ಹಿಂದೆಂಗಿಂತಲೂ ಹೆಚ್ಚಿನ ಅನುದಾನ ನೀಡಿದೆ. ಜೊತೆಗೆ ಬಿಡದಿಯ ಗಾಣಕಲ್ಲು ಬಳಿ ಚಿತ್ರಕಲಾ ಮಹಾವಿದ್ಯಾಲಯಕ್ಕಾಗಿ 25 ಕೋಟಿ ರೂ. ಬಿಡುಗಡೆ ಮಾಡಲು ಮುಂದಾಗಿದ್ದು, ಈಗಾಗಲೇ 13 ಕೋಟಿ ರೂ. ಗಳನ್ನು ಬಿಡುಗಡೆ ಮಾಡಲಾಗಿದೆ. ಅಲ್ಲಿ ಸುಸಜ್ಜಿತ ವಿದ್ಯಾಲಯದ ಕಟ್ಟಡವನ್ನು ಕೈಗೆತ್ತಿಕೊಳ್ಳಲಾಗುವುದು. ಅದರ ಕಾಮಗಾರಿ ಒಂದೆರಡು ತಿಂಗಳಲ್ಲಿ ಆರಂಭವಾಗಲಿದ್ದು, ಮೂರು ವರ್ಷಗಳಲ್ಲಿ ಕಾಮಗಾರಿ ಮುಕ್ತಾಯವಾಗಲಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಡಿ.ಕೆ. ಚೌಟ, ಉಪಾಧ್ಯಕ್ಷರಾದ ರಾಮಕೃಷ್ಣ, ಪ್ರೊ. ಕೆ.ಇ. ರಾಧಾಕೃಷ್ಣ, ಪ್ರಭುದೇವ ಆರಾಧ್ಯ ಖಜಾಂಚಿ ಸೇರಿದಂತೆ, ಚಿತ್ರಕಲಾ ಪರಿಷತ್‌ನ ಸದಸ್ಯರು ಹಾಜರಿದ್ದರು.

Write A Comment