ಅಂತರಾಷ್ಟ್ರೀಯ

ಬರೊಬ್ಬರಿ 700 ಕೋಟಿ ಮೌಲ್ಯದ ಆನೆ ದಂತಕ್ಕೆ ಬೆಂಕಿ ಇಟ್ಟ ಕೀನ್ಯಾ

Pinterest LinkedIn Tumblr

Kenya-sets-fire-to-ivoryನೈರೋಬಿ: ಕೀನ್ಯಾದ ವಿವಿಧ ಪ್ರದೇಶಗಳಲ್ಲಿ ವಿವಿಧ ಕಾಲಘಟ್ಟದಲ್ಲಿ ಬೇಟೆಗಾರರಿಂದ ವಶಪಡಿಸಿಕೊಂಡಿದ್ದ ಸುಮಾರು 700 ಕೋಟಿ ರು. ಮೌಲ್ಯದ ಸಾವಿರಾರು ಆನೆ ದಂತಗಳಿಗೆ ಕೀನ್ಯಾ  ಸರ್ಕಾರ ಬೆಂಕಿ ಇಟ್ಟು ನಾಶ ಪಡಿಸಿದೆ.

ಆನೆ ಬೇಟೆ ತಡೆಯುವ ನಿಟ್ಟಿನಲ್ಲಿ ಐತಿಹಾಸಿಕ ಹೆಜ್ಜೆ ಇಟ್ಟಿರುವ ಕೀನ್ಯಾ ಸರ್ಕಾರ ಶನಿವಾರ ಬರೊಬ್ಬರಿ 700 ರು.ಕೋಟಿ ಮೌಲ್ಯದ ಆನೆ ದಂತವನ್ನು ಸುಟ್ಟು ಭಸ್ಮ ಮಾಡಿದೆ. ಮೂಲಗಳ ಪ್ರಕಾರ  ಕೀನ್ಯಾ ಸರ್ಕಾರದಿಂದ ಬೆಂಕಿಗಾಹುತಿಯಾದ ಆನೆದಂತಗಳು ಸುಮಾರು 105 ಟನ್ ತೂಗುತಿತ್ತು ಎಂದು ತಿಳಿದುಬಂದಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಆನೆ ದಂತಕ್ಕೆ ಅಪಾರವಾದ ಬೇಡಿಕೆ ಇರುವ ಹಿನ್ನಲೆಯಲ್ಲಿ ಕೀನ್ಯಾದಲ್ಲಿ ಪ್ರತೀ ವರ್ಷ ಸಾವಿರಾರು ಆನೆಗಳ ಮಾರಣ ಹೋಮ ನಡೆಯುತ್ತದೆ. ಆನೆ ಭೇಟೆ ನಿಷೇಧಿಸಿ  ಕೀನ್ಯಾ ಸರ್ಕಾರ ಸಾಕಷ್ಟು ಕಠಿಣ ಕ್ರಮಗಳನ್ನು ಕೈಗೊಂಡಿದ್ದರೂ, ಅಧಿಕಾರಿಗಳ ಲಂಚಬಾಕತನದಿಂದಾಗಿ ಮತ್ತು ಬೇಟೆಗಾರರ ಹಾವಳಿಯಿಂದಾಗಿ ಇಂದಿಗೂ ಕೀನ್ಯಾದಲ್ಲಿ ಆನೆಗಳ ಬೇಟೆ  ಎಗ್ಗಿಲ್ಲದೇ ನಡೆಯುತ್ತಿದೆ.  ಇದನ್ನು ತಡೆಯುವ ಸಲುವಾಗಿ ಕೀನ್ಯಾ ಸರ್ಕಾರ ವ್ಯಾಪಕ ಕ್ರಮಗಳನ್ನು ತೆಗೆದುಕೊಂಡಿದ್ದು, ಅದರ  ಒಂದು ಭಾಗವಾಗಿ ಬೇಟೆಗಾರರಿಂದ ವಶಪಡಿಸಿಕೊಂಡ 105 ಟನ್  ಆನೆ ದಂತಗಳನ್ನು ಬೆಂಕಿ ಇಟ್ಟು ಸುಟ್ಟು ನಾಶ ಮಾಡಲಾಗಿದೆ.

ಆನೆ ಬೇಟೆ ತಡೆಯಲು ಈ ಹಿಂದೆ ಇದೇ ಕೀನ್ಯಾ ಸರ್ಕಾರ ಆನೆ ದಂತಗಳನ್ನು ಸುಟ್ಟು ಹಾಕಿತ್ತಾದರೂ, ಈ ಬಾರಿ ಬೃಹತ್ ಪ್ರಮಾಣದ ಅಂದರೆ 105 ಟನ್ ತೂಕದ ಆನೆ ದಂತಗಳನ್ನು ನಾಶ  ಪಡಿಸಿದೆ. ಇಷ್ಟು ಪ್ರಮಾಣದ ದಂತಗಳನ್ನು ಪಡೆಯಲು ಬೇಟೆಗಾರರು 6000 ರಿಂದ 7000 ಆನೆಗಳನ್ನು ಬೇಟೆಯಾಡಿದ್ದಾರೆ. ಕೀನ್ಯಾ ಸರ್ಕಾರ 1989 ರಲ್ಲೂ ಸಹ ದೊಡ್ಡ ಪ್ರಮಾಣದ ಆನೆ  ದಂತಗಳಿಗೆ ಬೆಂಕಿ ಇಟ್ಟು ನಾಶಪಡಿಸಿತ್ತು.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತೀ ಕೆ.ಜಿ. ಆನೆ ದಂತಕ್ಕೆ 1000 ಡಾಲರ್ ಮೌಲ್ಯವಿದೆ. ಪ್ರಸ್ತುತ ನಾಶಪಡಿಸಿರುವ ಆನೆ ದಂತದ ಮೌಲ್ಯ ಸುಮಾರು 108 ಮಿಲಿಯನ್ ಡಾಲರ್ ಇದೆ  ಎಂದು ಕೀನ್ಯಾದ ವನ್ಯಜೀವಿ ತಜ್ಞರು ತಿಳಿಸಿದ್ದಾರೆ. ಬೇಟೆಗಾರರು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಉಪಯೋಗಿಸಿ ಆನೆಗಳನ್ನು ಭೇಟೆಯಾಡುತ್ತಿದ್ದು, ಇವರು ಸಂಗ್ರಹಿಸಿದ ಆನೆ ದಂತಗಳು ಚೀನಾ  ಸೇರಿದಂತೆ ಏಷ್ಯಾದ ಕೆಲವು ರಾಷ್ಟ್ರಗಳಿಗೆ ಸರಬರಾಜು ಆಗುತ್ತದೆ. ಚೀನಾದಲ್ಲಿ ಆನೆ ದಂತದಿಂದ ಕನ್ನಡಕದ ಫ್ರೇಮುಗಳು, ಬಾಚಣಿಕೆಗಳು, ಸಣ್ಣ ಪ್ರತಿಮೆಗಳನ್ನು ತಯಾರಿಸಲಾಗುತ್ತದೆ.  ಇವುಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಬೇಡಿಕೆ ಇದೆ.

ಇನ್ನು ಆನೆ ಬೇಟೆ ಬಗ್ಗೆ ಮಾತನಾಡಿರುವ ಕೀನ್ಯಾ ಅಧ್ಯಕ್ಷ ಉಹುರು ಕೆನ್ಯತಾ ಅವರು, ಆನೆ ದಂತದ ಮಾರಾಟ ಜಾಲದಿಂದ ನಮ್ಮ ದೇಶದ ಆನೆಗಳಷ್ಟೇ ಸಾಯುತ್ತಿಲ್ಲ, ನಮ್ಮ ಸಂಸ್ಕೃತಿ ಮತ್ತು  ಪ್ರಾಕೃತಿಕ ಪರಂಪರೆ ಸಹ ನಾಶವಾಗುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Write A Comment