ಕರಾಚಿ (ಪಿಟಿಐ): ಕರಾಚಿಯಲ್ಲಿ ಬುಧವಾರ ಪೋಲಿಯೊ ಅಭಿಯಾನ ನಡೆಯುತ್ತಿದ್ದ ವೇಳೆ ಅಪರಿಚಿತ ಬಂದೂಕುಧಾರಿಗಳು ನಡೆಸಿದ ಎರಡು ಪ್ರತ್ಯೇಕ ಗುಂಡಿನ ದಾಳಿಗಳಲ್ಲಿ ಕನಿಷ್ಠ 7 ಮಂದಿ ಪೊಲೀಸರು ಬಲಿಯಾಗಿದ್ದಾರೆ.
ಪೋಲಿಯೊ ಕಾರ್ಯಕರ್ತರ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸರ ಮೇಲೆ ಈ ದಾಳಿ ನಡೆದಿದೆ. ದಾಳಿ ನಡೆದಿರುವುದು ಪೋಲಿಯೊ ಕಾರ್ಯಕರ್ತರ ಮೇಲಲ್ಲ, ಪೊಲೀಸರನ್ನೇ ಗುರಿಯಾಗಿಸಿಟ್ಟುಕೊಂಡು ಈ ಕೃತ್ಯ ನಡೆಸಲಾಗಿದೆ ಎಂದು ಮೂಲಗಳು ಹೇಳಿವೆ.
ನಾಲ್ಕು ಬೈಕ್ಗಳಲ್ಲಿ ಬಂದ ಎಂಟು ಮಂದಿ ದಾಳಿಕೋರರು ಒರಂಗಿ ಬಳಿ ಪೊಲೀಸರತ್ತ ಮನಬಂದಂತೆ ಗುಂಡು ಹಾರಿಸಿದರು. ನಾಲ್ಕು ಮಂದಿ ಪೊಲೀಸರು ಸ್ಥಳದಲ್ಲೇ ಮೃತಪಟ್ಟರು. ಸಮೀಪದ ಪ್ರದೇಶದಲ್ಲಿ ನಡೆದ ಇನ್ನೊಂದು ದಾಳಿಯಲ್ಲಿ ಇನ್ನೂ 3 ಮಂದಿ ಮೃತಪಟ್ಟರು ಎಂದು ಹಿರಿಯ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
2012ರಿಂದ ಪೋಲಿಯೊ ಲಸಿಕೆ ಕಾರ್ಯಕ್ರಮಗಳ ಮೇಲೆ ತಾಲಿಬಾನ್ ನಿಷೇಧ ಹೇರಿದೆ. ಹೀಗಾಗಿ ಪಾಕ್ನ ಗಡಿ ಭಾಗದ ಹಲವು ಬುಡಕಟ್ಟು ಪ್ರದೇಶಗಳಲ್ಲಿ ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕಲು ಸಾಧ್ಯವಾಗುತ್ತಿಲ್ಲ. ಜನವರಿಯಲ್ಲಿ ಕ್ವೆಟ್ಟಾದಲ್ಲಿ ಪೋಲಿಯೊ ಕಾರ್ಯಕರ್ತರ ಮೇಲೆ ದಾಳಿ ನಡೆಸಿದ್ದ ತಾಲಿಬಾನ್ ಉಗ್ರರು 12 ಪೊಲೀಸರು ಸೇರಿ 15 ಮಂದಿಯನ್ನು ಹತ್ಯೆ ಮಾಡಿದ್ದರು.