ಅಂತರಾಷ್ಟ್ರೀಯ

ಅಜರ್ ದಿಗ್ಭಂಧನಕ್ಕೆ ಚೀನಾ ಅಡ್ಡಗಾಲು; ಭಾರತ ಟೀಕೆ

Pinterest LinkedIn Tumblr

JeMವಿಶ್ವಸಂಸ್ಥೆ/ವಾಷಿಂಗ್ಟನ್‌(ಪಿಟಿಐ): ಜೈಷ್–ಎ–ಮೊಹಮ್ಮದ್‌ ಉಗ್ರ ಸಂಘಟನೆಯ ಮುಖ್ಯಸ್ಥ ಹಾಗೂ ಪಠಾಣ್‌ಕೋಟ್‌ ಉಗ್ರರ ದಾಳಿ ರೂವಾರಿ ಮಸೂದ್ ಅಜರ್‌ ಮೇಲೆ ವಿಶ್ವಸಂಸ್ಥೆಯ ಆರ್ಥಿಕ ದಿಗ್ಭಂಧನ ಹೇರಲು ಚೀನಾ ಅಡ್ಡಗಾಲು ಹಾಕಿದೆ. ಚೀನಾ ನಡೆಗೆ ಭಾರತ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಅಜರ್‌ನನ್ನು ‘ಭಯೋತ್ಪಾದಕ’ ಎಂದು ಘೋಷಿಸಿ, ವಿಶ್ವಸಂಸ್ಥೆಯ ದಿಗ್ಭಂಧನ ಹೇರಲು ಭದ್ರತಾ ಮಂಡಳಿಯ ಮಾನದಂಡಗಳಿಗೆ ಅನುಗುಣವಾಗಿ ಆತ ಅರ್ಹತೆ ಹೊಂದಿಲ್ಲ ಎಂಬ ‘ತಾಂತ್ರಿಕ ತಡೆ’ಯನ್ನು ಚೀನಾ ಒಡ್ಡಿದೆ.
‘ಯಾರನ್ನಾದರೂ ಕಪ್ಪುಪಟ್ಟಿಗೆ ಸೇರಿಸಬೇಕಾದರೆ ಆತ ಮಾನದಂಡನೆಗಳಿಗೆ ತಕ್ಕ ಅರ್ಹತೆ ಹೊಂದಿರಬೇಕು’ ಎಂದು ವಿಶ್ವಸಂಸ್ಥೆಯಲ್ಲಿರುವ ಚೀನಾದ ಕಾಯಂ ಪ್ರತಿನಿಧಿ ಲಿಯು ಜೆಯಿ ಪ್ರತಿಕ್ರಿಯಿಸಿದ್ದಾರೆ.
ಇದೇ ಮೊದಲಲ್ಲ: ಪಾಕ್ ಮೂಲಕ ಉಗ್ರರ ಮೇಲೆ ದಿಗ್ಭಂಧನ ವಿಧಿಸಲು ಭಾರತ ಹೇರುವ ಒತ್ತಡಗಳಿಗೆ ಚೀನಾ ಅಡ್ಡಗಾಲು ಹಾಕಿರುವುದು ಇದೇ ಮೊದಲೇನೂ ಅಲ್ಲ.
ವಿಶ್ವಸಂಸ್ಥೆಯು 2001ರಲ್ಲಿ ಜೈಷ್‌–ಎ–ಮೊಹಮ್ಮದ್ ಉಗ್ರ ಸಂಘಟನೆಯನ್ನು ನಿಷೇಧಿಸಿತ್ತು. ಆದರೆ, 2008ರ ಮುಂಬೈ ದಾಳಿ ಬಳಿಕ ಅಜರ್‌ ಮೇಲೆ ದಿಗ್ಭಂಧನ ಹೇರಬೇಕು ಎನ್ನುವ ಭಾರತದ ಒತ್ತಾಯಕ್ಕೆ ಚೀನಾ ವಿಟೊ ಅಧಿಕಾರ ಬಳಸಿಕೊಂಡು ಅಡ್ಡಿಪಡಿಸಿತ್ತು.
ಕಳೆದ ವರ್ಷದ ಜುಲೈನಲ್ಲಿ ಮುಂಬೈ ದಾಳಿ ಸಂಚುಕೋರ ಝಕಿ ಉರ್ ರೆಹಮಾನ್ ಮೇಲೆ ದಿಗ್ಭಂಧನೆ ವಿಧಿಸಲು ಒತ್ತಾಯಿಸಿದ್ದ ಭಾರತದ ಯತ್ನಕ್ಕೂ ಚೀನಾ ಅಡ್ಡಿಪಡಿಸಿತ್ತು.
ಭಾರತ ತೀವ್ರ ಆಕ್ಷೇಪ: ಚೀನಾ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಭಾರತ, ಇದೊಂದು ‘ಗ್ರಹಿಸಲಾಗದ ನಡೆ’ ಎಂದು ಟೀಕಿಸಿದೆ.
ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ‘ಆಯ್ದ ನೀತಿ’ ಅನುಸರಿಸುತ್ತಿದೆ ಎಂದು ವಿದೇಶಾಂಗ ಇಲಾಖೆ ವಕ್ತಾರ ವಿಕಾಸ್‌ ಸ್ವರೂಪ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Write A Comment