ಅಂತರಾಷ್ಟ್ರೀಯ

ಈಜಿಪ್ಟ್‌ ವಿಮಾನ ಅಪಹರಣ ಪ್ರಹಸನಕ್ಕೆ ತೆರೆ

Pinterest LinkedIn Tumblr

33

ನಿಕೋಸಿಯ, ಸೈಪ್ರಸ್‌ (ಎಎಫ್‌ಪಿ/ ರಾಯಿಟರ್ಸ್‌): ಈಜಿಪ್ಟ್‌ನ ಅಲೆಕ್ಸಾಂಡ್ರಿಯಾದಿಂದ ರಾಜಧಾನಿ ಕೈರೊಗೆ ಹೊರಟಿದ್ದ ‘ಈಜಿಪ್ಟ್‌ ಏರ್‌ಲೈನ್ಸ್‌’ ವಿಮಾನವನ್ನು ಅಪಹರಿಸಿದ್ದ ವ್ಯಕ್ತಿಯನ್ನು ಭದ್ರತಾ ಅಧಿಕಾರಿಗಳು ಬಂಧಿಸಿದ್ದು, ಅಪಹರಣ ನಾಟಕಕ್ಕೆ ತೆರೆ ಎಳೆದಿದ್ದಾರೆ.

ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರು ಮತ್ತು ಸಿಬ್ಬಂದಿ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ. ಅಪಹರಣದ ಹಿಂದಿನ ಉದ್ದೇಶ ಇನ್ನೂ ಸ್ಪಷ್ಟವಾಗಿಲ್ಲ.

‘ಸ್ಫೋಟಕ ಅಳವಡಿಸಿದ್ದ ಬೆಲ್ಟ್‌ ಧರಿಸಿದ್ದೇನೆ’ ಎಂದು ಬೆದರಿಸಿದ್ದ ಅಪಹರಣಕಾರ ವಿಮಾನವನ್ನು ಸೈಪ್ರಸ್‌ಗೆ ಕೊಂಡೊಯ್ಯುವಂತೆ ಪೈಲಟ್‌ಗೆ ಸೂಚಿಸಿದ್ದ. ಸ್ಥಳೀಯ ಕಾಲಮಾನ ಮಂಗಳವಾರ ಬೆಳಿಗ್ಗೆ 8.50ಕ್ಕೆ ವಿಮಾನವು ದಕ್ಷಿಣ ಸೈಪ್ರಸ್‌ನ ಲರ್ನಾಕಾ ವಿಮಾನ ನಿಲ್ದಾಣದಲ್ಲಿ ಇಳಿದಿತ್ತು.

ಸುಮಾರು ಆರು ಗಂಟೆಗಳ ಬಳಿಕ ಎಲ್ಲ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಬಿಡುಗಡೆ ಮಾಡಿದ ಅಪಹರಣಕಾರ ಪೊಲೀಸರಿಗೆ ಶರಣಾಗಿದ್ದಾನೆ. ‘ವಿಮಾನದಿಂದ ಇಳಿದ ಅಪಹರಣಕಾರ ಸ್ವಲ್ಪ ದೂರ ನಡೆದ ಬಳಿಕ ಎರಡೂ ಕೈಗಳನ್ನು ಮೇಲಕ್ಕೆತ್ತಿ ಶರಣಾಗಿರುವ ಸೂಚನೆ ನೀಡಿದ್ದಾನೆ. ಭಯೋತ್ಪಾದನಾ ನಿಗ್ರಹ ದಳದ ಇಬ್ಬರು ಅಧಿಕಾರಿಗಳು ಸುಮಾರು ಎರಡು ನಿಮಿಷ ಆತನನ್ನು ತಪಾಸಣೆ ನಡೆಸಿ ತಮ್ಮ ವಶಕ್ಕೆ ತೆಗೆದುಕೊಂಡರು’ ಎಂದು ಸುದ್ದಿಸಂಸ್ಥೆಯ ವರದಿಗಾರರೊಬ್ಬರು ತಿಳಿಸಿದ್ದಾರೆ.

‘ಎಲ್ಲ ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತರಾಗಿದ್ದಾರೆ’ ಎಂದು ಈಜಿಪ್ಟ್‌ ನಾಗರಿಕ ವಿಮಾನಯಾನ ಸಚಿವ ಶರೀಫ್‌ ಫಾತಿ ಹೇಳಿದ್ದಾರೆ. ‘ಇದು ಭಯೋತ್ಪಾದನಾ ಕೃತ್ಯ ಅಲ್ಲ’ ಎಂದು ಸೈಪ್ರಸ್‌ ಅಧ್ಯಕ್ಷ ನಿಕೊಸ್‌ ಅನಸ್ತೇಸಿಯಾಡೆಸ್‌ ತಿಳಿಸಿದ್ದಾರೆ. ಅಪಹರಣಕಾರನನ್ನು ಸೈಫ್‌ ಎಲ್ದಿನ್‌ ಮುಸ್ತಫಾ (59) ಎಂದು ಗುರುತಿಸಲಾಗಿದೆ. ಆತ ‘ಅಸಹಜ ಮತ್ತು ವಿಚಿತ್ರವಾಗಿ’ ವರ್ತಿಸುತ್ತಿದ್ದ ಎಂದು ವಿಮಾನದ ಪೈಲಟ್‌ ಒಮರ್‌ ಅಲ್‌ ಜಮಾಲ್‌ ತಿಳಿಸಿದ್ದಾರೆ.

ಉದ್ದೇಶ ಅಸ್ಪಷ್ಟ: ‘ಅಪಹರಣದ ಹಿಂದಿನ ಉದ್ದೇಶ ಏನೆಂಬುದು ಸ್ಪಷ್ಟವಾಗಿಲ್ಲ. ವಿಚಾರಣೆಯ ಬಳಿಕ ನಿಜವಾದ ಕಾರಣ ತಿಳಿದುಬರಲಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಅಪಹರಣಕಾರ ಈಜಿಪ್ಟ್‌ ಪ್ರಜೆಯಾಗಿದ್ದು, ಐರೋಪ್ಯ ಒಕ್ಕೂಟದ ಪ್ರತಿನಿಧಿಗಳ ಜತೆ ಮಾತನಾಡಬೇಕೆಂಬ ಬೇಡಿಕೆ ಮುಂದಿಟ್ಟಿದ್ದ’ ಎಂದು ಈಜಿಪ್ಟ್‌ ಪ್ರಧಾನಿ ಶರೀಫ್‌ ಇಸ್ಮಾಯಿಲ್ ಅವರು ಟಿ.ವಿ. ವಾಹಿನಿಯೊಂದಕ್ಕೆ ತಿಳಿಸಿದ್ದರು.

ಸೈಪ್ರಸ್‌ನಲ್ಲಿ ವಾಸವಿರುವ ಮಾಜಿ ಪ್ರೇಯಸಿಯನ್ನು ನೋಡಬೇಕು ಎಂದು ಅಪಹರಣಕಾರ ಬೇಡಿಕೆ ಮುಂದಿಟ್ಟಿದ್ದ ಎಂದು ಕೆಲವು ಸುದ್ದಿ ವಾಹಿನಿಗಳು ವರದಿ ಮಾಡಿದ್ದವು. ಈಜಿಪ್ಟ್‌ನ ಜೈಲಿನಲ್ಲಿರುವ ಮಹಿಳಾ ಕೈದಿಗಳನ್ನು ಬಿಡುಗಡೆ ಮಾಡಬೇಕು ಎಂಬ ಬೇಡಿಕೆಯನ್ನೂ ಇಟ್ಟಿದ್ದ ಎನ್ನಲಾಗಿದೆ. ಆದರೆ ಇವುಗಳನ್ನು ಅಧಿಕಾರಿಗಳು ಖಚಿತಪಡಿಸಿಲ್ಲ.

ಘಟನೆಯ ವಿವರ: 21 ವಿದೇಶಿಯರು ಸೇರಿದಂತೆ 55 ಪ್ರಯಾಣಿಕರಿದ್ದ ‘ಎಂಎಸ್‌181’ ವಿಮಾನ ಅಲೆಕ್ಸಾಂಡ್ರಿಯಾದ ಬುರ್ಜ್‌ ಅಲ್‌ ಅರಬ್‌ ನಿಲ್ದಾಣದಿಂದ ಹೊರಟ ಕೆಲವೇ ನಿಮಿಷಗಳಲ್ಲಿ ಅಪಹರಣಕ್ಕೆ ಒಳಗಾಗಿತ್ತು.

‘ಸ್ಫೋಟಕ ಅಳವಡಿಸಿದ್ದ ಬೆಲ್ಟ್‌ ಧರಿಸಿದ್ದೇನೆ’ ಎಂದು ಪೈಲಟ್‌ಗೆ ಬೆದರಿಸಿದ್ದ ಅಪಹರಣಕಾರ ವಿಮಾನವನ್ನು ಬಲವಂತವಾಗಿ ಸೈಪ್ರಸ್‌ನಲ್ಲಿ ಇಳಿಸಿದ್ದಾನೆ. ‘ವಿಮಾನವನ್ನು ಸೈಪ್ರಸ್‌ ಅಥವಾ ಟರ್ಕಿಗೆ ಕೊಂಡೊಯ್ಯುವಂತೆ ಅಪಹರಣಕಾರ ಪೈಲಟ್‌ಗೆ ಸೂಚಿಸಿದ್ದ’ ಎಂದು ಶರೀಫ್‌ ಫಾತಿ ತಿಳಿಸಿದ್ದಾರೆ.

ಹೆಚ್ಚಿನ ಪ್ರಯಾಣಿಕರು ವಿಮಾನ ಸೈಪ್ರಸ್‌ನಲ್ಲಿ ಇಳಿದ ಕೂಡಲೇ ವಿಮಾನದಿಂದ ಹೊರಬಂದಿದ್ದರು. ‘ನಾಲ್ವರು ಸಿಬ್ಬಂದಿ ಮತ್ತು ಮೂವರು ಪ್ರಯಾಣಿಕರು ಹೊರತುಪಡಿಸಿ ಇತರ ಎಲ್ಲರು ಹೊರಬಂದಿದ್ದಾರೆ’ ಎಂದು ಫಾತಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು. ಕೆಲ ಗಂಟೆಗಳ ಬಳಿಕ ಉಳಿದ ಏಳೂ ಮಂದಿ ಸುರಕ್ಷಿತವಾಗಿ ಹೊರಬಂದಿದ್ದಾರೆ.

‘ಸ್ಫೋಟಕ ಬೆಲ್ಟ್‌’ ನಕಲಿ
ಕೈರೋ: ಅಪಹರಣಕಾರ ಧರಿಸಿದ್ದ ‘ಸ್ಫೋಟಕ ಬೆಲ್ಟ್‌’ ನಕಲಿ ಎಂಬುದು ದೃಢಪಟ್ಟಿದೆ. ‘ಆತ ಧರಿಸಿದ್ದ ಬೆಲ್ಟ್‌ನಲ್ಲಿ ಸ್ಫೋಟಕ ವಸ್ತುಗಳು ಇರಲಿಲ್ಲ ಎಂಬುದನ್ನು ಸೈಪ್ರಸ್‌ನ ಭದ್ರತಾ ಅಧಿಕಾರಿಗಳು ಖಚಿತಪಡಿಸಿದ್ದಾರೆ’ ಎಂದು ಈಜಿಪ್ಟ್‌ ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ.

Write A Comment