ಅಂತರಾಷ್ಟ್ರೀಯ

ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾದರೆ ಭಾರತಕ್ಕೆ ಆತಂಕ: ಸಲ್ಮಾನ್ ಖುರ್ಷೀದ್

Pinterest LinkedIn Tumblr

salman-khurshidವಾಷಿಂಗ್ಟನ್: ಅಮೆರಿಕದ ಮುಂದಿನ ಅದ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಆಯ್ಕೆಗೊಂಡರೆ ಭಾರತ ತುಂಬಾ ಆತಂಕಕ್ಕೊಳಗಾಗಲಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಸಲ್ಮಾನ್ ಖುರ್ಷಿದ್ ಹೇಳಿದ್ದಾರೆ.
ಅವರು ನಿನ್ನೆ ವಾಷಿಂಗ್ಟನ್ ನ ಪ್ರತಿಷ್ಟಿತ ಜಾರ್ಜ್ ಟೌನ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದ ವೇಳೆ ಹೀಗೆ ಹೇಳಿದ್ದಾರೆ.
ಈಗಿನ ಅಧ್ಯಕ್ಷ ಬರಾಕ್ ಒಬಾಮಾ ಮತ್ತು ಅಧ್ಯಕ್ಷೀಯ ಪದವಿ ಚುನಾವಣೆ ಕುರಿತು ವಿದ್ಯಾರ್ಥಿಯೊಬ್ಬರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಲ್ಮಾನ್ ಖುರ್ಷಿದ್, ಅಮೆರಿಕದ ಮುಂದಿನ ಪ್ರಜಾಪ್ರಭುತ್ವವಾದಿಗಳ ಆಯ್ಕೆಯಲ್ಲಿ ನಾನು ಮಧ್ಯೆ ಪ್ರವೇಶಿಸಬಾರದು. ಪ್ರಜಾಪ್ರಭುತ್ವದಲ್ಲಿ ನಿಮ್ಮ ಆಯ್ಕೆಗೇ ಬಿಟ್ಟದ್ದಾಗಿರುತ್ತದೆ ಎಂದರು.
ಡೊನಾಲ್ಡ್ ಟ್ರಂಪ್ ಅವರ ಬಗ್ಗೆ ಜಾಗತಿಕ ಮಟ್ಟದಲ್ಲಿ ಆತಂಕವಿದೆ. 69 ವರ್ಷದ ಟಿವಿ ರಿಯಾಲಿಟಿ ಶೋನ ಸ್ಟಾರ್ ಆಗಿರುವ ಟ್ರಂಪ್ ಅವರ ಮುಸಲ್ಮಾನ ವಿರೋಧಿ ಮತ್ತು ವಲಸೆಗಾರರ ವಿರೋಧಿ ನೀತಿಗೆ ಎಲ್ಲೆಡೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಅವರು ತಮ್ಮ ವಿವಾದಾತ್ಮಕ ಹೇಳಿಕೆಯಿಂದ ಅವರ ಪ್ರತಿಸ್ಪರ್ಧಿಗಳಿಂದಲೇ ಟೀಕೆಗೆ ಗುರಿಯಾಗಿದ್ದಾರೆ.
ತಮ್ಮ ಮಾತು ಮುಂದುವರಿಸಿದ ಸಲ್ಮಾನ್ ಖುರ್ಷೀದ್, ಒಬಾಮಾ ಅವರು ಭಾರತದ ಉತ್ತಮ ಸ್ನೇಹಿತರಾಗಿ ಮುಂದುವರಿಯಲಿದ್ದಾರೆ. ಕಳೆದ 10 ವರ್ಷಗಳಿಂದ ಒಬಾಮಾ ಅವರ ಮಾತುಗಳನ್ನು ಭಾರತ ನಂಬಿಕೊಂಡು ಬಂದಿದೆ. ಹಾಗೇ ಯಾರೇ ಶ್ವೇತಭವನಕ್ಕೆ ಹೋದರೂ ಅವರ ಮಾತುಗಳನ್ನು ಕೇಳುತ್ತಾರೆ ಎನ್ನುವ ಭಾವನೆ ನನಗಿದೆ.
ಇದುವರೆಗಿನ ಅಮೆರಿಕ ಅಧ್ಯಕ್ಷರಲ್ಲಿ ಜಾನ್ ಎಫ್ ಕೆನಡಿಯವರು ಭಾರತೀಯರ ಪಾಲಿಗೆ ಅತ್ಯಂತ ಜನಪ್ರಿಯರು. ನಂತರದ ಸ್ಥಾನ ಬರಾಕ್ ಒಬಾಮಾರವರಿಗೆ ಎಂದರು.
ಬರಾಕ್ ಒಬಾಮಾರವರು ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಗೊಂಡಾಗ ಭಾರತೀಯರು ತುಂಬಾ ಅದ್ಭುತವಾಗಿ ಸಂಭ್ರಮಿಸಿದ್ದರು. ನಿಜ ಹೇಳಬೇಕೆಂದರೆ ತಾವೇ ಮತ ಹಾಕಿ ಗೆಲ್ಲಿಸಿದಷ್ಟು, ತಮ್ಮ ದೇಶದ ನಾಯಕರೇನೋ ಎನ್ನುವಷ್ಟು ಸಂತೋಷ ಭಾರತೀಯರಿಗಾಗಿತ್ತು ಎಂದು ಸಲ್ಮಾನ್ ಖುರ್ಷೀದ್ ಹೇಳಿದರು.

Write A Comment