ಅಂತರಾಷ್ಟ್ರೀಯ

ಕುಡಿಯುವ ನೀರಿಗಾಗಿಯೇ ನಡೆಯಲಿದೆ ಮಹಾಯುದ್ಧ..! :ಭಯ ಹುಟ್ಟಿಸುತ್ತಿದೆ ವಿಶ್ವಸಂಸ್ಥೆ ವರದಿ

Pinterest LinkedIn Tumblr

waterವಿಶ್ವದಲ್ಲಿ ಮೂರನೆ ಮಹಾಯುದ್ಧವೇನಾದರೂ ನಡೆದರೆ ಅದು ನೀರಿಗಾಗಿ ಎಂಬ ಹೇಳಿಕೆಯೊಂದು ಕೆಲವು ದಿನಗಳ ಹಿಂದೆ ಕೇಳಿಬರುತ್ತಿತ್ತು. ಆದರೆ, ಅದನ್ನು ನಂಬಲು ಆಗ ಜನ ತಯಾರಿರಲಿಲ್ಲ. ಈಗ ಅದು ನಿಜವಾಗುವ ಕಾಲ ಸನ್ನಿಹಿತವಾಗಿದೆಯೇನೋ ಎಂಬಂತೆ ಭಾಸವಾಗಲಾರಂಭಿಸಿದೆ. ಇಂದು (ಮಾ.22) ವಿಶ್ವ ನೀರಿನ ದಿನ (ವರ್ಲ್ಡ್ ವಾಟರ್ ಡೇ). ಈ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ವರದಿ ಭಯ ಹುಟ್ಟಿಸುವಂತಿದೆ. ಇದಕ್ಕೆ ಕಾರಣ ಪ್ರಪಂಚದ ವಿವಿಧೆಡೆ ಉಂಟಾಗಿರುವ ನೀರಿನ ಬರ. ಇದರಲ್ಲಿ ನಮ್ಮ ದೇಶವೂ ಸೇರಿದೆ ಎಂಬುದನ್ನು ಮರೆಯುವಂತಿಲ್ಲ. ಈ ಪ್ರಪಂಚದಲ್ಲೇ ಅತ್ಯಂತ ಸಂಕಷ್ಟದಲ್ಲಿರುವ ದೇಶ ಪಪುಣ ನ್ಯೂಗಿನಿಯ.

ಇಲ್ಲಿನ ಪ್ರಜೆಗಳು ಬರೀ ಕುಡಿಯುವ ನೀರಿಗಾಗಿ ತಮ್ಮ ಸಂಪಾದನೆಯ ಅರ್ಧ ಭಾಗದಷ್ಟು ಹಣ ವ್ಯಯಿಸುತ್ತಿದ್ದಾರೆ ಎನ್ನುತ್ತದೆ ಸಮೀಕ್ಷೆ. ಸುಮಾರು 650 ಮಿಲಿಯನ್ ಜನರಿಗೆ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ. ಪ್ರತಿ ವ್ಯಕ್ತಿಗೆ ಕನಿಷ್ಠ ದಿನವೊಂದಕ್ಕೆ 50 ಲೀಟರ್ ಶುದ್ಧ ನೀರು ಬೇಕೇಬೇಕು ಎಂಬುದು ವಿಶ್ವಸಂಸ್ಥೆಯ ವಿಶ್ವ ಆರೋಗ್ಯ ಸಂಘಟನೆ (ಡಬ್ಲ್ಯೂಎಚ್‌ಒ) ವರದಿ. ವಿಶ್ವದಲ್ಲಿ ಬಡತನ ಮತ್ತು ಅನಾರೋಗ್ಯಗಳಿಗೆ ಮೂಲ ಕಾರಣ ನೀರಿನ ಅಭಾವ. ಪ್ರಪಂಚದಲ್ಲಿ ಪ್ರತಿ 10 ಮಂದಿಯಲ್ಲಿ ಒಬ್ಬರಿಗೆ ಕುಡಿಯಲು ನೀರಿಲ್ಲ ಎಂದರೆ ನಂಬಲೇಬೇಕು. ಪ್ರಸ್ತುತ ನೀವು ನೀರನ್ನು ಸಂರಕ್ಷಿಸದಿದ್ದರೆ ಮುಂದೆ ಸಂರಕ್ಷಿಸಲು ಏನೂ ಉಳಿದಿರುವುದಿಲ್ಲ ಎನ್ನುತ್ತವೆ ವಿವಿಧ ಮೂಲಗಳು.

ಜಗತ್ತಿನಲ್ಲಿ ಪ್ರತಿ ನಾಲ್ಕರಲ್ಲಿ ಒಂದು ಉದ್ಯೋಗ ಬಂದಲ್ಲಿ ಒಂದು ರೀತಿಯಲ್ಲಿ ನೀರನ್ನೇ ಅವಲಂಬಿಸಿದೆ ಎಂಬುದು ಅಚ್ಚರಿಯ ವಿಷಯವೇನಲ್ಲ.ಇದನ್ನು ಸ್ವತಃ ವಿಶ್ವಸಂಸ್ಥೆಯೇ ಇಂದು ಬಿಡುಗಡೆ ಮಾಡಿರುವ ವರದಿಯಲ್ಲಿ ತಿಳಿಸಿದೆ. ಏರುತ್ತಿರುವ ತಾಪಮಾನದ ಜತೆಗೇ ನೀರಿನ ಹಾಹಾಕಾರ ಸೃಷ್ಟಿಯಾಗಿರುವುದು ಮನುಕುಲವನ್ನೇ ಬೆಚ್ಚಿ ಬೀಳಿಸಿದೆ. ಇನ್ನು ಕೆಲವೇ ವರ್ಷಗಳಲ್ಲಿ ಈ ಭೂಮಿಯ ಮೇಲೆ ಶುದ್ಧವಾದ ಕುಡಿಯುವ ನೀರೇ ಇಲ್ಲದಂತೆ ಮಾಯವಾಗಲಿದೆ ಎನ್ನುವ ಈ ವರದಿಗಳು ಭವಿಷ್ಯದ ಪರಿಸ್ಥಿತಿಯ ಭೀಕರತೆಯನ್ನು ಎತ್ತಿ ತೋರಿಸುತ್ತಿವೆ.

ಸದ್ಯ ಕೆಲವು ದೇಶಗಳಲ್ಲಿ ಕುಡಿಯುವ ನೀರಿಗೆ ಅದೆಷ್ಟು ಅಭಾವವಿದೆ ಎಂಬುದನ್ನು ಬಿಂಬಿಸುವ ಕೆಲವು ಚಿತ್ರಣಗಳು ಇಲ್ಲಿವೆ ನೋಡಿ.

ಎಲ್ಲೆಲ್ಲಿ ಎಷ್ಟೆಷ್ಟು ಬೆಲೆ..?!

ಪಪುವಾ ನ್ಯೂಗಿನಿಯಾದ ರಾಜಧಾನಿ ಪೋರ್ಟ್‌ಮೋರ್ಸ್‌ಬಿಯಲ್ಲಿ ಸಾಮಾನ್ಯ ಮನುಷ್ಯನೊಬ್ಬ 50 ಲೀಟರ್ ಕುಡಿಯುವ ನೀರಿಗಾಗಿ ತನ್ನ ದೈನಂದಿನ ಆದಾಯದ ಶೇ.54ರಷ್ಟು ಖರ್ಚು ಮಾಡುತ್ತಾನೆ. ಅಷ್ಟು ಹಣ ತೆತ್ತು ಸರದಿಯಲ್ಲಿ ನಿಂತು ಅವನು ನೀರು ತರಬೇಕು. ಮಡಗಾಸ್ಕರ್‌ನ ರಾಜಧಾನಿ ಅಂಟನಾನಾರಿವೊದಲ್ಲಿ 50 ಲೀಟರ್ ನೀರಿಗೆ ಶೇ.45ರಷ್ಟು ದಿನದ ಆದಾಯ ವೆಚ್ಚ ವಾಗುತ್ತದೆ. ಬ್ರಿಟನ್ನಿನಲ್ಲಿ ಕನಿಷ್ಠ ಸಂಪಾದನೆ ಮಾಡುವ ವ್ಯಕ್ತಿ ಶೇ.1ರಷ್ಟು ವ್ಯಯಿಸುತ್ತಾನೆ.

ಮೊಜಾಂಬಿಕ್‌ನಲ್ಲಿ ಭಾರೀ ಅದ್ವಾನವಂತೆ. ಇಲ್ಲಿ 1ಕ್ಕೆ 10ರಷ್ಟು ಬೆಲೆ ಕೊಟ್ಟು ಬ್ಲಾಕ್‌ನಲ್ಲಿ ನೀರು ತರುತ್ತಾರಂತೆ. ಸರ್ಕಾರ ಸಬ್‌ಸಿಡಿಯಲ್ಲಿ ಒದಗಿಸುವ ನೀರು ಎಲ್ಲರಿಗೂ ದೊರೆಯದಿರುವುದೇ ಇದಕ್ಕೆ ಕಾರಣ. ಇಕ್ವೆಟೋರಿಯಲ್ ಗಿನಿಯಾ, ಆಂಗೋಲಾ ಪ್ರದೇಶಗಳು ವಿಶ್ವದಲ್ಲೇ ನೀರಿನ ಗಂಭೀರ ಸಮಸ್ಯೆ ಎದುರಿಸುತ್ತಿರುವ ದೇಶಗಳು. 16 ದೇಶಗಳಲ್ಲಿ ಶೇ.40ರಷ್ಟು ಜನರಿಗೆ ಒಳ್ಳೆಯ ನೀರೇ ಸಿಗುತ್ತಿಲ್ಲ. ಕಾಂಬೋಡಿಯಾ, ಮಾಲಿ, ಲಾವೋಸ್ ಮತ್ತು ಇಥಿಯೋಫಿಯಾ ದೇಶಗಳು ಜನರಿಗೆ ನೀರೊದಗಿಸಲು ಪ್ರತ್ಯೇಕ ಕಾರ್ಯಕ್ರಮವನ್ನೇ ರೂಪಿಸಿವೆ. ಎಷ್ಟೇ ಸುಧಾರಣೆ ತಂದರೂ ಎಲ್ಲರಿಗೂ ಶುದ್ಧ ಕುಡಿಯುವ ನೀರೊದಗಿಸುವುದು ಸರ್ಕಾರಗಳಿಗೆ ದುಸ್ತರವಾಗುತ್ತಿದೆ.

ಭಾರತದಲ್ಲಿ ಹೇಗಿದೆ..?

ಭಾರತದ ಅನೇಕ ರಾಜ್ಯಗಳಲ್ಲೂ ಪರಿಸ್ಥಿತಿ ಭಿನ್ನವಾಗೇನೂ ಇಲ್ಲ. ಇಲ್ಲಿಯೂ ಎಲ್ಲ ಜನರಿಗೆ ಶುದ್ಧ ಕುಡಿಯುವ ನೀರು ಸಾಕಷ್ಟು ದೊರೆಯುತ್ತಿಲ್ಲ. ಕರ್ನಾಟಕದ ಹಲವು ಪ್ರದೇಶಗಳಲ್ಲಿ ಈ ಬಾರಿಯ ಬೇಸಿಗೆ ಆರಂಭದಲ್ಲೇ ಕುಡಿಯುವ ನೀರಿನ ಕ್ಷಾಮ ಭೀಕರವಾಗಿದೆ. ರಾಜಧಾನಿ ಬೆಂಗಳೂರಿನಲ್ಲಿಯೇ ಅನೇಕ ಭಾಗಗಳಲ್ಲಿ ಕುಡಿಯುವ ನೀರು ಪೂರೈಸಲು ಪಾಲಿಕೆ ತಿಣುಕಾಡುತ್ತಿದೆ. ಆದರೂ ನೀರಿಗಾಗಿ ಹೊಡೆದಾಟಗಳು ನಡೆಯುತ್ತಲೇ ಇವೆ.

Write A Comment