
ಡಮಾಸ್ಕಸ್, ಮಾ.20- ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರರ ಹಿಡಿತದಲ್ಲಿರುವ ರಾಖ್ಖಾ ನಗರದ ಮೇಲೆ ಸಿರಿಯಾ ಮತ್ತು ರಷ್ಯಾ ಮೈತ್ರಿಕೂಟದ ಪಡೆಗಳು ನಡೆಸಿದ ವಾಯುದಾಳಿಯಲ್ಲಿ ಅನೇಕ ಜನ ಸಾವನ್ನಪ್ಪಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.
ಜಿನೇವಾದಲ್ಲಿ ಶಾಂತಿ ಮಾತುಕತೆಗಳ ಪ್ರಕ್ರಿಯೆ ಮುಂದುವರೆದಿದ್ದರೂ ಇಲ್ಲಿ ಐಎಸ್ ಭಯೋತ್ಪಾದಕ ಸಂಘಟನೆ ಉಗ್ರರ ಹಿಂಸಾಚಾರ ನಿಂತಿಲ್ಲ. ವಿವಿಧ ಪ್ರದೇಶಗಳನ್ನು ವೈರಿ ಪಡೆಗಳು ವಶಪಡಿಸಿಕೊಳ್ಳುತ್ತಲೇ ಇವೆ. ಈ ಹಿನ್ನೆಲೆಯಲ್ಲಿ ಸಿರಿಯಾ ಪಡೆ ಯೋಧರು ರಷ್ಯಾ ಪಡೆ ಜತೆಗೂಡಿ ನಿನ್ನೆ ರಾತ್ರಿ ಈ ವೈಮಾನಿಕ ದಾಳಿ ನಡೆಸಿವೆ.
ಈಗಾಗಲೇ ಉಗ್ರರು ತಮ್ಮ ಪೈಶಾಚಿಕ ಕೃತ್ಯಗಳನ್ನು ನಿಲ್ಲಿಸಿದರೆ ತಾನು ತನ್ನ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುವುದಾಗಿ ರಷ್ಯಾ ಪ್ರಕಟಿಸಿದೆ. ಇದರ ಹೊರತಾಗಿಯೂ ಐಎಸ್ ತನ್ನ ದಾಳಿ ನಡೆಸುತ್ತಲೇ ಇದೆ. ಸಿರಿಯಾ ಅಧ್ಯಕ್ಷ ಬಶಾರ್-ಅಲ್-ಅಸಾದ್ ಅವರ ಬೆಂಬಲಕ್ಕೆ ನಿಂತಿರುವ ರಷ್ಯಾ ಪಡೆ ಉಗ್ರರ ವಿರುದ್ಧದ ಕಾರ್ಯಾಚರಣೆಯನ್ನೂ ಮುಂದುವರೆಸಿದೆ. ಒಂದು ಮೂಲದ ಪ್ರಕಾರ, ರಾತ್ರಿ ದಾಳಿಯಲ್ಲಿ 50 ಜನ ಸಾವನ್ನಪ್ಪಿದ್ದು, ನಾಗರಿಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇನ್ನೊಂದು ವರದಿ ಪ್ರಕಾರ 50ಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ. ಮೃತರಲ್ಲಿ 18 ರಿಂದ 20 ಜನ ಉಗ್ರರೂ ಸೇರಿದ್ದಾರೆ ಎಂದು ಮೂಲಗಳು ತಿಳಿಸಿವೆ.