ಅಂತರಾಷ್ಟ್ರೀಯ

ಕೊಳೆತ ಟೊಮ್ಯಾಟೋದಿಂದ ವಿದ್ಯುತ್ ಉತ್ಪಾದಿಸಬಹುದು!

Pinterest LinkedIn Tumblr

Tomato

ವಾಷಿಂಗ್ಟನ್: ಅತೀ ಬೇಗ ಕೊಳೆತು ಹೋಗುವ ತರಕಾರಿ ಟೊಮ್ಯಾಟೋ. ಹೀಗೆ ಕೊಳೆತ ಟೊಮ್ಯಾಟೋಗಳಿಂದ ವಿದ್ಯುತ್ ಉತ್ಪಾದಿಸಬಹುದು ಎಂದು ಸಂಶೋಧಕರು ಹೇಳಿದ್ದಾರೆ. ಭಾರತ ಮೂಲದ ವಿಜ್ಞಾನಿ ಸೇರಿದಂತೆ ಸಂಶೋಧಕರ ತಂಡವೊಂದು ಕೊಳೆತ ಟೊಮ್ಯಾಟೋದಿಂದ ವಿದ್ಯುತ್ ಉತ್ಪಾದಿಸಬಹುದೆಂಬ ಪ್ರಯೋಗ ಮಾಡಿ ಯಶಸ್ವಿಯಾಗಿದೆ.

ಕೊಳೆತ ಅಥವಾ ಹಾನಿಗೊಳಗಾದ ಟೊಮ್ಯಾಟೋಗಳನ್ನು ಬಯಾಲಾಜಿಕಲ್ ಅಥವಾ ಮೈಕ್ರೋಬಿಯಲ್ ಇಲೆಕ್ಟ್ರೋ ಕೆಮಿಕಲ್ ಸೆಲ್ ಗಳಲ್ಲಿ ಬಳಸಿದಾಗ ಅವುಗಳು ವಿದ್ಯುತ್ ಚೈತನ್ಯದ ಮೂಲಗಳಾಗಿ ವರ್ತಿಸುತ್ತದೆ ಎಂದು ಅಮೆರಿಕದ ದಕ್ಷಿಣ ಡಕೇಟ್ ಸ್ಕೂಲ್ ಆಫ್ ಮೈನ್ಸ್ ಆ್ಯಂಡ್ ಟೆಕ್ನಾಲಜಿಯ ವಿಜ್ಞಾನಿ ನಮಿತಾ ಶ್ರೇಷ್ಠ ಹೇಳಿದ್ದಾರೆ.

ಫ್ಲೋರಿಡಾದಲ್ಲಿ ಟೊಮ್ಯಾಟೋ ಪ್ರಧಾನ ಬೆಳೆಯಾಗಿದೆ.ಇಲ್ಲಿ ಪ್ರತೀ ವರ್ಷ 396,000 ಟನ್ ಟೊಮ್ಯಾಟೋ ಹಾನಿಗೊಳಗಾಗುತ್ತಿದೆ. ಹೀಗೆ ಹಾನಿಯಾದ ಟೊಮ್ಯಾಟೋಗಳನ್ನು ಏನು ಮಾಡುವುದು ಎಂಬುದರ ಬಗ್ಗೆ ಯೋಚಿಸುತ್ತಿದ್ದೆವು. ಇವುಗಳನ್ನು ಮಣ್ಣಿನಲ್ಲಿ ಹೂತು ಹಾಕಿದರೆ ಇವು ಗ್ರೀನ್‌ಹೌಸ್ ಗ್ಯಾಸ್ (ಹಸಿರುಮನೆ ಅನಿಲ)ವಾದ ಮೀಥೇನ್ ನ್ನು ಹೊರಸೂಸುತ್ತವೆ. ಒಂದು ವೇಳೆ ಇವುಗಳನ್ನು ನೀರಿನಲ್ಲಿ ವಿಸರ್ಜಿಸಿದರೆ, ನೀರು ಮಾಲಿನ್ಯಕ್ಕೆ ಕಾರಣವಾಗುತ್ತದೆ.

ಈ ಎಲ್ಲ ಸಮಸ್ಯೆಗಳಿಗೆ ಪರಿಹಾರವೆಂಬಂತೆ ಟೊಮ್ಯಾಟೋದಿಂದ ವಿದ್ಯುತ್ ಉತ್ಪಾದನೆಯ ಪ್ರಯೋಗಗಳನ್ನು ಮಾಡಲಾಯಿತು. ಸಂಶೋಧಕರ ತಂಡವು ಮೈಕ್ರೋಬಿಯಲ್ ಇಲೆಕ್ಟ್ರೋಕೆಮಿಕಲ್ ಸೆಲ್ ತಯಾರಿಸಿದ್ದು, ಈ ಸೆಲ್ ಟೊಮ್ಯಾಟೋ ತ್ಯಾಜ್ಯವನ್ನು ವಿದ್ಯುತ್ ಆಗಿ ಮಾರ್ಪಡಿಸುತ್ತದೆ.

ಮೆಕ್ರೋಬಿಯಲ್ ಇಲೆಕ್ಟ್ರೋಕೆಮಿಕಲ್ ಸೆಲ್‌ಗಳು ಟೊಮ್ಯಾಟೋದಲ್ಲಿರುವ ಆಕ್ಸಿಡೈಸ್ ಆರ್ಗಾನಿಕ್ ವಸ್ತುಗಳನ್ನು ವಿಭಜನೆ ಮಾಡಲು ಬ್ಯಾಕ್ಟೀರಿಯಾಗಳನ್ನು ಬಳಸುತ್ತವೆ. ಆಕ್ಸಿಡೇಷನ್ ಕ್ರಿಯೆಯಲ್ಲಿ ಬ್ಯಾಕ್ಟೀರಿಯಾಗಳು ಟೆಮ್ಯಾಟೋ ತ್ಯಾಜಗಳೊಂದಿಗೆ ಸಂಯೋಗವಾಗುವಾಗ ಅಲ್ಲಿ ಇಲೆಕ್ಟ್ರಾನ್‌ಗಳು ಬಿಡುಗಡೆಯಾಗಿ ವಿದ್ಯುತ್ ಉತ್ಪಾದನೆಯಾಗುತ್ತದೆ.

ಟೊಮ್ಯಾಟೋಗಳಲ್ಲಿರುವ ನೈಸರ್ಗಿಕ ಲೈಕೋಪೇನ್ ಪಿಗ್ಮಂಟ್‌ಗಳು ಕೊಳೆತ ಹಣ್ಣುಗಳಿಂದ ವಿದ್ಯುತ್ ಉತ್ಪಾದನೆ ಮತ್ತು ಪ್ರವಹಿಸುವುದಕ್ಕೆ ಸಹಾಯವಾಗುತ್ತದೆ. ಅಂದ ಹಾಗೆ 10 ಮಿಲ್ಲಿಗ್ರಾಂ ಟೊಮ್ಯಾಟ್ ತ್ಯಾಜ್ಯದಿಂದ 0.3 ವಾಟ್ಸ್ ವಿದ್ಯುತ್‌ನ್ನು ಉತ್ಪಾದಿಸಬಹುದಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

Write A Comment