ಅಂತರಾಷ್ಟ್ರೀಯ

ಪಾಕ್‌ ತಂಡದ ಭಾರತ ಪ್ರವಾಸಕ್ಕೆ ಅನಿರೀಕ್ಷಿತ ತಡೆ

Pinterest LinkedIn Tumblr

Cricket WCup India Pakistan
ಕರಾಚಿ (ಪಿಟಿಐ): ಧರ್ಮಶಾಲಾದಲ್ಲಿ ಭಾರತ –ಪಾಕಿಸ್ತಾನ ನಡುವೆ ಪಂದ್ಯ ನಡೆಸುವ ವಿವಾದ ತೀವ್ರ ಸ್ವರೂಪ ಪಡೆದಿದೆ.   ಮಂಗಳವಾರ ತಡರಾತ್ರಿ ನಡೆದ ಅನಿರೀಕ್ಷಿತ ಬೆಳವಣಿಗೆಯೊಂದರಲ್ಲಿ, ಪಾಕಿಸ್ತಾನ ತಂಡದ ಭಾರತ ಪ್ರವಾಸವನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ತಡೆ ಹಿಡಿದಿದೆ.

ಪಾಕ್ ತಂಡವು ಭಾರತಕ್ಕೆ ಪ್ರಯಾಣಿಸುವ ಸಂಬಂಧ ಆಂತರಿಕ ಸಚಿವಾಲಯ ಬುಧವಾರ ನಿರ್ಧರಿಸಲಿದೆ ಎಂದು ಪಿಸಿಬಿ ಅಧ್ಯಕ್ಷ ಶಹರ್ಯಾರ್‌ ಖಾನ್‌ ತಿಳಿಸಿದ್ದಾರೆ.

‘ಭದ್ರತಾ ಪರಿಶೀಲನೆಗಾಗಿ ಭಾರತದಲ್ಲಿರುವ ಪಾಕ್‌ ನಿಯೋಗದ ಜತೆಗಿನ ಚರ್ಚೆಯ ಬಳಿಕ ಆಂತರಿಕ ಸಚಿವ ಚೌಧರಿ ನಿಸಾರ್ ಅಲಿ ಖಾನ್ ಅವರು ತಂಡದ ಪ್ರಯಾಣ ಹಾಗೂ ಮುಂದಿನ ಯೋಜನೆಗಳ ಕುರಿತು ಹೇಳಲಿದ್ದಾರೆ’ ಎಂದು ಖಾನ್ ತಿಳಿಸಿದ್ದಾರೆ.

ವಿಶ್ವ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯಲ್ಲಿ ಪಾಲ್ಗೊಳ್ಳುವ ನಿಟ್ಟಿನಲ್ಲಿ ನಿಗದಿತ ವೇಳಾ ಪಟ್ಟಿಯಂತೆ ಪಾಕ್‌ ತಂಡವು ಬುಧವಾರ ಮಧ್ಯಾಹ್ನ ಲಾಹೋರ್‌ನಿಂದ ನವದೆಹಲಿಗೆ ಪ್ರಯಾಣಿಸಬೇಕಿತ್ತು.

ಪ್ರಯಾಣ ಯೋಜನೆ ತಡೆ ಹಿಡಿದಿರುವ ವಿಷಯವನ್ನು ಕೆಲವು ಆಟಗಾರರು ಕೂಡ ಖಚಿತಪಡಿಸಿದ್ದಾರೆ.

ಪಂದ್ಯ ಸ್ಥಳಾಂತರಕ್ಕೆ ಮನವಿ: ಮತ್ತೊಂದೆಡೆ, ಧರ್ಮಶಾಲಾದಲ್ಲಿ ಆಡದಂತೆ ಪಾಕ್‌ ತಂಡಕ್ಕೆ ಆತಂರಿಕ ಸಚಿವಾಲಯ ನೀಡಿರುವ ಎಚ್ಚರಿಕೆಯನ್ನು ಪಿಸಿಬಿ ಅಧ್ಯಕ್ಷ ಖಾನ್ ಅವರು ಬಿಸಿಸಿಐಗೆ ತಿಳಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಮಾರ್ಚ್ 19ರಂದು ಧರ್ಮಶಾಲಾದಲ್ಲಿ ನಡೆಯಲಿರುವ ಇಂಡೊ–ಪಾಕ್‌ ಪಂದ್ಯವನ್ನು ಕೋಲ್ಕತ್ತ ಇಲ್ಲವೆ ಮೊಹಾಲಿಗೆ ಸ್ಥಳಾಂತರಿಸುವಂತೆ ಬಿಸಿಸಿಐ ಹಾಗೂ ಐಸಿಸಿಗೆ ಪಿಸಿಬಿ ಮನವಿ ಮಾಡಿಕೊಂಡಿದೆ’ ಎಂದೂ ಖಾನ್ ತಿಳಿಸಿದ್ದಾರೆ.

Write A Comment