ರಾಷ್ಟ್ರೀಯ

ಸೂರ್ಯನನ್ನೇ ನುಂಗಿದ ಚಂದ್ರ..!: ಸೂರ್ಯಗ್ರಹಣದ ರೋಮಾಂಜನ ಕಂಡು ಕುಣಿದು ಕುಪ್ಪಳಿಸಿದ ಜನ

Pinterest LinkedIn Tumblr

sun-new
ಪಾಲೆಂಬಾಂಗ್, ಮಾ.9- ಇಂದು ಬೆಳ್ಳಂಬೆಳಗ್ಗೆ ಇಂಡೋನೇಷ್ಯಾ ಜನರಿಗೆ ರೋಚಕ ಅನುಭವ, ರೋಮಾಂಜನ… ಆಗತಾನೆ ಉದಯವಾದ ಹೊಂಬಣ್ಣದ ಬಾಲರವಿ ನೋಡ ನೋಡುತ್ತಿದ್ದಂತೆ ಮರೆಯಾಗಿ ದೇಶದ ಬಹುತೇಕ ಭಾಗದಲ್ಲಿ ಅಕ್ಷರಶಃ ಕಾರ್ಗತ್ತಲು ಆವರಿಸಿದಾಗ ಇಡೀ ಪ್ರಕೃತಿಯೇ ಸ್ತಬ್ಧ. ಅದು ಸಂಪೂರ್ಣ ಸೂರ್ಯಗ್ರಹಣದ ಪರಿಣಾಮವಾಗಿತ್ತು. ಇದರಿಂದ ಪುಳಕಿತರಾದ ಜನ ಭಗವಂತನನ್ನು ಪ್ರಾರ್ಥಿಸಿದರು, ಹಾಡಿದರು, ಕುಣಿದು ಕುಪ್ಪಳಿಸಿದರು. ಈ ರೀತಿ ಬೆಳಗಿನಲ್ಲಿ ಕತ್ತಲಾವರಿಸಿದ್ದು ಇದೇ ಮೊದಲು ಎನ್ನುತ್ತಾರೆ ಜನ.  ಜಗತ್ತಿನಾದ್ಯಂತ ಇಂದು ಬೆಳಗಿನ ಜಾವದಿಂದ ಅಲ್ಲಲ್ಲಿ ಭಾಗಶಃ ಸೂರ್ಯಗ್ರಹಣ ಕಾಣಿಸಿಕೊಂಡರೆ

ಇಂಡೋನೇಷ್ಯಾದಲ್ಲಿ ಪರಿಪೂರ್ಣ ಸೂರ್ಯಗ್ರಹಣ ಉಂಟಾಗಿ ಜನರನ್ನು ಅಚ್ಚರಿಗೊಳಿಸಿತು. ಇಂಡೋನೇಷ್ಯಾದ 12 ಪ್ರಾಂತಗಳ ಬರೋಬ್ಬರಿ ನಾಲ್ಕು ಕೋಟಿ ಜನ ಈ ಗ್ರಹಣದ ಸಂತಸ ಅನುಭವಿಸಿದರು.

ಇಂಡೋನೇಷ್ಯಾದಲ್ಲಿ ಸಂಭವಿಸುವ ಪರಿಪೂರ್ಣ ಸೂರ್ಯಗ್ರಹಣ ವೀಕ್ಷಣೆಗೆಂದು ವಿಶ್ವದ ಅನೇಕ ದೇಶಗಳಿಂದ ಲಕ್ಷಗಟ್ಟಲೆ ಪ್ರವಾಸಿಗರು ಇಲ್ಲಿಗೆ ಆಗಮಿಸಿದ್ದರು. ಈ ಗ್ರಹಣದ ಲಾಭ ಪಡೆಯಲು ಇಂಡೋನೇಷ್ಯಾ ಸರ್ಕಾರ ಕಳೆದ ಒಂದು ವರ್ಷದಿಂದಲೂ ಸಾಕಷ್ಟು ಪ್ರಚಾರ ನಡೆಸಿ ದೇಶ-ವಿದೇಶಗಳ ಕುತೂಹಲಿಗಳನ್ನು ಆಕರ್ಷಿಸಿತ್ತು. ಸರ್ಕಾರದ ಪ್ರವಾಸೋದ್ಯಮ ಪ್ರೋತ್ಸಾಹದ ಯೋಜನೆ ಚೆನ್ನಾಗಿ ಕೆಲಸ ಮಾಡಿದ್ದು, ಲಕ್ಷ ಲಕ್ಷ ಜನ ಇಂದಿನ ಈ ಗಳಿಗೆಗಾಗಿ ಹಲವು ದಿನಗಳಿಂದಲೇ ಇಲ್ಲಿನ ಕಡಲ ತೀರದಲ್ಲಿ ಠಿಕಾಣಿ ಹೂಡಿದ್ದರು.

ಕೇಂದ್ರೀಯ, ಸುಲಾವೆಸಿ ಪ್ರಾಂತ್ಯದಲ್ಲಿ ಪರ್ವತದ ಮೇಲಿರುವ ಸಿಗಿ ಬಿರೊಮರು ನಗರದಲ್ಲಿ ಮಕ್ಕಳು, ಮಹಿಳೆಯರು ಸೇರಿದಂತೆ ಸಾವಿರ ಸಾವಿರ ಜನ ಜಮಾಯಿಸಿದ್ದರು. ಎಲ್ಲೆಲ್ಲಿ ಜನ ನೆರೆದಿರುತ್ತಾರೋ ಅಲ್ಲೆಲ್ಲ ಗ್ರಹಣ ವೀಕ್ಷಣೆಗೆ ಸರ್ಕಾರ ಸಕಲ ಸೌಲಭ್ಯ ಕಲ್ಪಿಸಿತ್ತು. ಕಣ್ಣುಗಳ ಸಂರಕ್ಷಣೆಗೆ ಆದ್ಯತೆ ನೀಡಿ ಎಲ್ಲರಿಗೂ ಸಾಧನ-ಸಲಕರಣೆ ಒದಗಿಸಲಾಗಿತ್ತು.   ಈ ಹಿಂದಿನ ವರ್ಷಗಳಲ್ಲಿ ಭೂಕಂಪ, ಸುನಾಮಿಗಳಿಂದ ತತ್ತರಿಸಿ ಹೋಗಿ ಪ್ರವಾಸಿಗರ ಕೊರತೆ ಅನುಭವಿಸುತ್ತಿದ್ದ ಇಂಡೋನೇಷ್ಯಕ್ಕೆ ಇಂದಿನ ಈ ಸಂಪೂರ್ಣ ಸೂರ್ಯಗ್ರಹಣ ಒಂದು ರೀತಿಯ ಟಾನಿಕ್ ನೀಡಿದಂತಾಯಿತು.

Write A Comment