
ವಾಷಿಂಗ್ಟನ್: ಒಂದೇ ಕುಟುಂಬದವರು ಒಟ್ಟಿಗೆ ಊಟ ಮಾಡೋದು, ಒಟ್ಟಿಗೆ ಓಡಾಡೋದು ಇದ್ದಿದ್ದೇ. ಆದ್ರೆ ಒಟ್ಟಿಗೆ ಲಾಟರಿ ಆಡಿದ್ರೆ ಏನಾಗಬಹುದು? ಯಾರಾದರೂ ಒಬ್ಬರಿಗೆ ಬಹುಮಾನ ಬರಬಹುದು ಬರದೆಯೂ ಇರಬಹುದು ಅಂತೀರಾ. ಹಾಗಾದ್ರೆ ಇಲ್ಲಿ ಕೇಳಿ ವಿದೇಶದಲ್ಲಿ ಲಾಟರಿ ಆಡಿದ ಸೋದರರಿಬ್ಬರಿಗೆ ಒಟ್ಟಿಗೆ ಅದೃಷ್ಟ ಖುಲಾಯಿಸಿದೆ.
ಅಮೆರಿಕದ ಫ್ಲೋರಿಡಾದಲ್ಲಿ ಜೇಮ್ಸ್ ಮತ್ತು ಬಾಬ್ ಎಂಬ ಸಹೋದರರಿಬ್ಬರು ಒಟ್ಟಿಗೆ ಪವರ್ಬಾಲ್ ಲಾಟರಿ ಟಿಕೆಟ್ ಖರಿದಿಸಿದ್ದರು. ಅವರ ಅದೃಷ್ಟವೂ ಕಾಕತಾಳೀಯವೋ ಗೊತ್ತಿಲ್ಲ, ಅಂತೂ ಇಬ್ಬರ ಲಾಟರಿ ಟಿಕೆಟ್ಗೂ ಬಹುಮಾನ ಬಂದಿತ್ತು. ಆದ್ರೆ ಅದರಲ್ಲೂ ಒಂದು ಟ್ವಿಸ್ಟ್ ಇತ್ತು. ಜೇಮ್ಸ್ ಅವರಿಗೆ ಲಾಟರಿಯಲ್ಲಿ 291 ಮಿಲಿಯನ್ ಡಾಲರ್(ಅಂದಾಜು 2 ಸಾವಿರ ಕೋಟಿ ರೂ.) ಬಹುಮಾನ ಹಣ ಬಂದರೆ ಬಾಬ್ಗೆ ಸಿಕ್ಕಿದ್ದು ಕೇವಲ 7 ಡಾಲರ್(ಅಂದಾಜು 500 ರೂ.)
ಬರೋಬ್ಬರಿ 2 ಸಾವಿರ ಕೋಟಿ ರೂ. ಬಹುಮಾನ ಗೆದ್ದಿರುವ 67 ವರ್ಷದ ನ್ಯಾಯಾಧೀಶರಾದ ಜೇಮ್ಸ್ ತಮಗೆ ಜಾಕ್ಪಾಟ್ ಹೊಡೆದಿರುವುದಕ್ಕೆ ಸಂಭ್ರಮಿಸುತ್ತಿದ್ದಾರೆ. ಆದರೆ ಬಾಬ್ಗೆ ಕಡಿಮೆ ಮೊತ್ತದ ಬಹುಮಾನ ಬಂದಿರುವುದರಿಂದಾಗಿ ಈ ಸಹೋದರರ ನಡುವಿನ ಸೋದರ ಬಾಂಧವ್ಯ ಹೆಚ್ಚಾಗುತ್ತೋ ಅಥವಾ ಮತ್ಸರ ಬೆಳೆಯುತ್ತೋ ಗೊತ್ತಿಲ್ಲ. ಆದ್ರೆ ಅವರಿಬ್ಬರೂ ಉತ್ಸಾಹದಲ್ಲಿದ್ದಾರೆ ಅಂತ ಇಲ್ಲಿನ ಲಾಟರಿ ಫೇಸ್ಬುಕ್ ಪೇಜ್ನಲ್ಲಿ ಹೇಳಲಾಗಿದೆ.