ಅಂತರಾಷ್ಟ್ರೀಯ

11 ಮಂದಿ ಪ್ರಯಾಣಿಕರಿದ್ದ ಲಘು ವಿಮಾನ ನೇಪಾಳದಲ್ಲಿ ಪತನ

Pinterest LinkedIn Tumblr

pla

ಕಠ್ಮಂಡು: ಟಾರಾ ಏರ್ ವಿಮಾನ ಸಂಸ್ಥೆಯ ಲಘು ವಿಮಾನ ದುರಂತ ಮಾಸುವ ಮುನ್ನವೇ ನೇಪಾಳದಲ್ಲಿ ಮತ್ತೊಂದು ಲಘು ವಿಮಾನ ಪತನಕ್ಕೀಡಾಗಿದ್ದು, ವಿಮಾನದಲ್ಲಿದ್ದ ಪೈಲಟ್ ಮತ್ತು ಸಹ ಪೈಲಟ್ ಗಳಿಬ್ಬರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ನೇಪಾಳದ ನೇಪಾಳ್ ಗಂಜ್ ನಿಂದ ಜುಮ್ಲಾಗೆ ತೆರಳುತ್ತಿದ್ದ ಏರ್ ಕಾಷ್ಟಮಂಡಪ್ ಸಂಸ್ಥೆಗೆ ಸೇರಿದ ವಿಮಾನ ಇಂದು ಮಧ್ಯಾಹ್ನ ಕ್ಯಾಲಿಕೋಟ್ ಬಳಿಯ ಚಿಲ್ಖಯಾ ಬಳಿ ದುರಂತಕ್ಕೀಡಾಗಿದೆ. ಮೇಲ್ನೋಟಕ್ಕೆ ತಾಂತ್ರಿಕ ದೋಷದಿಂದ ವಿಮಾನ ಪತನಕ್ಕೀಡಾಗಿರುವ ಶಂಕೆ ವ್ಯಕ್ತವಾಗುತ್ತಿದ್ದು, ಪ್ರಸ್ತುತ ಇಬ್ಬರು ಸಿಬ್ಬಂದಿಗಳ ಶವ ಪತ್ತೆಯಾಗಿದೆ. ಮೃತರನ್ನು ಪೈಲಟ್ ದಿನೇಶ್ ನ್ಯೂಪೇನ್ ಮತ್ತು ಸಹ ಪೈಲಟ್ ಸಂತೋಷ್ ರಾಣಾ ಎಂದು ಗುರುತಿಸಲಾಗಿದೆ.

9ಎನ್-ಎಜೆಬಿ ಸಂಸ್ಥೆ ನಿರ್ಮಿಸಿದ್ದ ಸಿಂಗಲ್ ಎಂಜಿನ್ ನ ಚಾರ್ಟೆಡ್ ವಿಮಾನ ನೇಪಾಳ್ ಗಂಜ್ ನಿಂದ ಇಂದು ಮಧ್ಯಾಹ್ನ 12.16ರ ಹೊತ್ತಿನಲ್ಲಿ ಜುಮ್ಲಾಗೆ ಪ್ರಯಾಣ ಹೊರಟಿತ್ತು. ಮೂಲಗಳ ಪ್ರಕಾರ ವಿಮಾನದಲ್ಲಿ ಸಿಬ್ಬಂದಿ ಸೇರಿ 11 ಮಂದಿ ಪ್ರಯಾಣಿಕರಿದ್ದರು ಮತ್ತು ಎಲ್ಲ ಪ್ರಯಾಣಿಕರು ಸಾವಿಗೀಡಾಗಿರುವ ಶಂಕೆ ವ್ಯಕ್ತವಾಗುತ್ತಿದೆ. ಘಟನಾ ಸ್ಥಳಕ್ಕ ಧಾವಿಸಿರುವ ರಕ್ಷಣಾ ಸಿಬ್ಬಂದಿಗಳು ವಿಮಾನದ ಅವಶೇಷಗಳನ್ನು ತೆರವು ಮಾಡುತ್ತಿದೆ. ಸ್ಥಳೀಯ ಪ್ರತ್ಯಕ್ಷದರ್ಶಿಗಳು ಹೇಳುವಂತೆ ಮೇಲೆ ಹಾರುತ್ತಿದ್ದ ವಿಮಾನ ಇದ್ದಕ್ಕಿದ್ದಂತೆಯೇ ಪೈಲಟ್ ನಿಯಂತ್ರಣ ತಪ್ಪಿ ಕೆಳಕ್ಕೆ ಉರುಳಿತು ಎಂದು ಹೇಳಿದ್ದಾರೆ.

ಕಳೆದ ಬುಧವಾರವಷ್ಟೇ ನೇಪಾಳದ ಟಾರಾ ಏರ್ ಸಂಸ್ಥೆಗೆ ಸೇರಿದ ವಿಮಾನ ನೇಪಾಳ ಪರ್ವತ ಪ್ರದೇಶಗಳಲ್ಲಿ ದುರಂತಕ್ಕೀಡಾಗಿತ್ತು. ಘಟನೆಯಲ್ಲಿ 23 ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದರು. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ವೈಮಾನಿಕ ದುರ್ಘಟನೆ ಸಂಭವಿಸಿದೆ.

Write A Comment