ಇಸ್ಲಮಾಬಾದ್,ಫೆ.20- ಪಂಜಾಬ್‌ನ ಪಠಾಣ್‌ಕೋಟ್ ವಾಯುನೆಲೆ ಮೇಲಿನ ಭಯೊತ್ಪಾದಕರ ದಾಳಿಯಲ್ಲಿ ಜೈಷ್-ಎ-ಮೊಹಮ್ಮದ್(ಜೆಇಎಂ) ಉಗ್ರರ ಪಾತ್ರವಿದೆ ಎಂಬ ಆರೋಪದ ತನಿಖೆ ನಡೆಸುತ್ತಿರುವ ತನಿಖಾಕಾರಿಗಳ ತಂಡ ಮುಂದಿನ ತಿಂಗಳು ಭಾರತಕ್ಕೆ ತೆರಳಲಿದೆ ಎಂದು ಮೂಲಗಳು ತಿಳಿಸಿವೆ. ತನಿಖಾ ತಂಡ ಪಠಾಣ್‌ಕೋಟ್ ವಾಯುನೆಲೆಗೆ ಭೇಟಿ ನೀಡುವುದು ಖಚಿತ. ಆದರೆ ಯಾವತ್ತು ಎಂಬ ಬಗ್ಗೆ ದಿನಾಂಕ ನಿಗದಿಯಾಗಿಲ್ಲ ಎಂದು ಹಿರಿಯ ರಾಜ ತಾಂತ್ರಿಕರೊಬ್ಬರು ಹೇಳಿರುವುದಾಗಿ ವರದಿಯಾಗಿದೆ.
ನಿನ್ನೆಯಷ್ಟೆ ಪಾಕಿಸ್ಥಾನವು ವಾಯುನೆಲೆ ಮೇಲಿನ ದಾಳಿಗೆ ಸಂಬಂಸಿದಂತೆ ಕೆಲವರ ವಿರುದ್ಧ ಎಫ್‌ಐಆರ್ ದಾಖಲಿಸಿತ್ತು. ಆದರೆ ಅದರಲ್ಲೂ ಪ್ರಮುಖ ಆರೋಪಿ ಅಜರ್ ಮಸೂದ್ ಹೆಸರೇ ಇರಲಿಲ್ಲ. ಜ.2ರಂದು ಪಠಾಣ್‌ಕೋಟ್ ವಾಯುನೆಲೆ ಮೇಲೆ ಪಾಕ್ ಮೂಲದ ಉಗ್ರರು ದಾಳಿ ನಡೆಸಿದ್ದು, ದಾಳಿಯಲ್ಲಿ 14 ಮಂದಿ ಯೋಧರು ಹುತಾತ್ಮರಾಗಿದ್ದರು. ದಾಳಿ ನಡೆಸಿದ 6 ಮಂದಿ ಉಗ್ರರನ್ನು ಭದ್ರತಾಪಡೆ ಹೊಡೆದುರುಳಿಸಿತ್ತು. ಈಗ ಪಾಕ್ ತಂಡವು ಭಾರತದ ರಾಷ್ಟ್ರೀಯ ತನಿಖಾದಳದ ಅಕಾರಿಗಳನ್ನು ಭೇಟಿಮಾಡಿ ವಿಚಾರ ವಿನಿಮಯ ಮಾಡಿಕೊಳ್ಳಲಿದೆ.