ನವದೆಹಲಿ: ಜವಾಹರ್‌ಲಾಲ್ ನೆಹರೂ ವಿಶ್ವ ವಿದ್ಯಾನಿಲಯದ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಕನಯ್ಯಾ ಕುಮಾರ್ ಮೇಲೆ ಪಟಿಯಾಲಾ ಹೌಸ್ ಕೋರ್ಟ್ ಆವರಣದಲ್ಲಿ ಹಲ್ಲೆ ಮಾಡಿದ್ದು ಪೂರ್ವಯೋಜಿತ ಕೃತ್ಯ ಎಂದು ರಾಷ್ಟ್ರೀಯ ಮಾನವಹಕ್ಕುಗಳ ಆಯೋಗ (ಎನ್ ಹೆಚ್ ಆರ್ ಸಿ)ದ ವರದಿಯಲ್ಲಿ ಹೇಳಲಾಗಿದೆ.
ಫೆ. 17 ರಂದು ಪಟಿಯಾಲಾಹೌಸ್ ಕೋರ್ಟ್ ಆವರಣದಲ್ಲಿ ಕನಯ್ಯಾ ಮೇಲೆ ಹಲ್ಲೆ ನಡೆದಿದ್ದು ಪೊಲೀಸರ ನಿರ್ಲಕ್ಷ್ಯದಿಂದ. ದೆಹಲಿ ಪೊಲೀಸರ ಕಡೆಯಿಂದ ಗಂಭೀರವಾದ ಕರ್ತವ್ಯ ಲೋಪ ಸಂಭವಿಸಿದೆ ಎಂದು ಎನ್ ಹೆಚ್ ಆರ್ ಸಿ ಹೇಳಿದೆ.
ಆದಾಗ್ಯೂ, ಕನಯ್ಯಾ ಕುಮಾರ್ ಬರೆದಿದ್ದಾರೆ ಎಂದು ಹೇಳಲಾದ ಹೇಳಿಕೆಯೊಂದನ್ನು ದೆಹಲಿ ಪೊಲೀಸರು ಬಿಡುಗಡೆ ಮಾಡಿದ್ದರು. ಆದರೆ ಆ ಹೇಳಿಕೆಯನ್ನು ಪೊಲೀಸರ ಒತ್ತಾಯದ ಮೇರೆಗೆ ಕನಯ್ಯಾ ಬರೆದಿದ್ದಾರೆ ಎಂದು ಆಯೋಗ ಹೇಳಿದೆ. ಕನಯ್ಯಾ ಅವರನ್ನು ತಿಹಾರ್ ಜೈಲಿನಲ್ಲಿ ಭೇಟಿ ಮಾಡಿದ ನಂತರ ತಯಾರಿದ ವರದಿಯಲ್ಲಿ ಈ ಎಲ್ಲ ಕಾರ್ಯಗಳನ್ನು ಉಲ್ಲೇಖಿಸಲಾಗಿದೆ.
ಈ ಘಟನೆಗಳಿಗೆ ಸಂಬಂಧಿಸಿದಂತೆ ಕೇಂದ್ರ ರಾಜ್ಯ ಸರ್ಕಾರ, ಜೆಎನ್‌ಯು ಅಧಿಕಾರಿಗಳಿಗೆ ಮತ್ತು ದೆಹಲಿ ಪೊಲೀಸರಿಗೆ ಆಯೋಗ ನೋಟಿಸ್ ಕಳುಹಿಸಿದೆ. ಆಯೋಗದ ತನಿಖಾ ವರದಿಯ ಪ್ರತಿಯನ್ನು ಪೊಲೀಸ್ ಆಯುಕ್ತರಿಗೆ, ಜೈಲು ಡಿಜಿ ಅವರಿಗೆ ಕಳುಹಿಸಿಕೊಟ್ಟ ಆಯೋಗ ಫೆ. 26ರೊಳಗೆ ಇದಕ್ಕೆ ಉತ್ತರಿಸಬೇಕಾಗಿ ಆದೇಶಿಸಿದೆ.
ಈ ವರದಿಯ ಪ್ರತಿಯನ್ನು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಾಧೀಶರಿಗೂ ನೇಡಲಾಗಿದೆ ಎಂದು ಆಯೋಗದ ಮೂಲಗಳು ತಿಳಿಸಿವೆ.