ಅಂತರಾಷ್ಟ್ರೀಯ

ನೇಪಾಲದ ಮಾಜಿ ಪ್ರಧಾನಿ ಸುಶೀಲ್‌ ಕೊಯ್‌ರಾಲಾ ವಿಧಿವಶ

Pinterest LinkedIn Tumblr

Sushil Koirala-700ಕಾಠ್ಮಂಡು : ನೇಪಾಲದ ಮಾಜಿ ಪ್ರಧಾನಿ, 79ರ ಹರೆಯದ, ಸುಶೀಲ್‌ ಕೊಯ್‌ರಾಲಾ ಮಂಗಳವಾರ ನಿಧನ ಹೊಂದಿದ್ದಾರೆ.

2014ರ ಫೆಬ್ರವರಿ 10ರಂದು ನೇಪಾಲದ ಪ್ರಧಾನಿಯಾಗಿ ಚುನಾಯಿತರಾಗಿದ್ದ ಕೊಯ್‌ರಾಲಾ ಅವರು ಕಳೆದ ವರ್ಷ ಅಕ್ಟೋಬರ್‌ನಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು.

ದೇಶದ ಹೊಸ ಸಂವಿಧಾನಕ್ಕೆ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳಲ್ಲಿ ಒಮ್ಮತ ಮೂಡದೇ ಪ್ರತಿಭಟನಕಾರರು ಭಾರತದೊಂದಿಗೆ ಪ್ರಮುಖ ವ್ಯಾಪಾರ – ವಾಣಿಜ್ಯ ಗಡಿ ದ್ವಾರವನ್ನು ಮುಚ್ಚಿದ ಪ್ರಯುಕ್ತ ಉಂಟಾದ ಬಿಕ್ಕಟ್ಟನ್ನು ಬಗೆಹರಿಸುವಲ್ಲಿನ ವೈಫ‌ಲ್ಯಕ್ಕಾಗಿ ಕೊಯ್‌ರಾಲಾ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದರು.

ಭಾರತದ ಬನಾರಸ್‌ನಲ್ಲಿ 1939ರ ಆಗಸ್ಟ್‌ 12ರಂದು ಜನಿಸಿದ್ದ ಕೊಯ್‌ರಾಲಾ ಅವರು ನೇಪಾಲದ ಮಾಜಿ ಪ್ರಧಾನಿಗಳಾಗಿದ್ದ ಮಾತ್ರಿಕಾ ಪ್ರಸಾದ್‌ ಕೊಯ್‌ರಾಲಾ, ಗಿರಿಜಾ ಪ್ರಸಾದ್‌ ಕೊಯ್‌ರಾಲಾ ಮತ್ತು ಬಿಶ್ವೇಶ್ವರ ಪ್ರಸಾದ್‌ ಕೊಯ್‌ರಾಲಾ ಅವರ ಸೋದರ ಸಂಬಂಧಿಯಾಗಿದ್ದರು.

1954ರಲ್ಲಿ ನೇಪಾಲ ರಾಜಕಾರಣವನ್ನು ಪ್ರವೇಶಿಸಿದ್ದ ಕೊಯ್‌ರಾಲಾ, 1960ರಲ್ಲಿ ದೇಶದ ದೊರೆ ಕುಟುಂಬವು ಅಧಿಕಾರವನ್ನು ಕೈಗೆತ್ತಿಕೊಂಡ ಬಳಿಕ ಸುಮಾರು ಹದಿನಾರು ವರ್ಷಗಳ ಕಾಲ ಭಾರತದಲ್ಲಿ ದೇಶಭ್ರಷ್ಟ ಜೀವನ ನಡೆಸುತ್ತಿದ್ದರು.

1973ರಲ್ಲಿ ನಡೆದಿದ್ದ ವಿಮಾನ ಅಪಹರಣ ಪ್ರಕರಣದಲ್ಲಿ ಶಾಮೀಲಾಗಿದ್ದ ಕಾರಣಕ್ಕೆ ಕೂಡ ಕೊಯ್‌ರಾಲಾ ಭಾರತದಲ್ಲಿ 3 ವರ್ಷ ಕಾಲ ಜೈಲಿನಲ್ಲಿ ಇದ್ದರು.
-ಉದಯವಾಣಿ

Write A Comment