ಅವನೊಬ್ಬನಿದ್ದ. ಕಡಲ ತೀರದಲ್ಲಿ ಮೀನು ಮಾರುವ ಹುಡುಗ. ಅವನಿಗೆ ಅಲ್ಲಿ ಬರುವ ಚೆಂದದ ಹುಡುಗಿಯರನ್ನು ಮಾತನಾಡಿಸುವುದು ಗೊತ್ತಿತ್ತು. ಅವರನ್ನೆಲ್ಲಾ ನಗಿಸುವುದೂ ಗೊತ್ತಿತ್ತು. ಒಬ್ಬ ಹುಡುಗಿ ಮೇಲೆ ಅವನಿಗೆ ಮನಸ್ಸಿತ್ತು. ಅವಳೂ ಅವನನ್ನು ನೋಡಿ ನಗುತ್ತಿದ್ದಳು. ಅವರಿಬ್ಬರು ಪ್ರೀತಿ ಮಾಡಬಹುದು ಅನ್ನೋ ಗುಮಾನಿ ಇತ್ತು. ಆದರೆ ಅದು ಕೆಲವೇ ದಿನಗಳಲ್ಲಿ ಸುಳ್ಳಾಯಿತು.
ಅವಳು ಒಂದು ದಿನ ಕಡಲ ತೀರಕ್ಕೆ ಬರುವಾಗ ಮತ್ತೂಬ್ಬ ಹುಡುಗನಿದ್ದ. ಎಲ್ಲರಿಗೂ ಅಚ್ಚರಿ. ಒಬ್ಬ ಹುಡುಗಿಗೆ ಹುಡುಗನಲ್ಲಿ ಇಷ್ಟವಾಗುವ ಗುಣ ಯಾವುದು?
ಮಿಲಿಯನ್ ಡಾಲರ್ ಪ್ರಶ್ನೆ. ಉತ್ತರ ಹೇಗೆ ಸಿಗುತ್ತದೆ. ಸುಮ್ಮನೆ ಇಂಟರ್‌ನೆಟ್ಟಲ್ಲಿ ಅಡ್ಡಾಡತೊಡಗಿದೆ. ಉತ್ತರ ಸಿಗುತ್ತದಾ ಅಂತ ಅಲೆದಾಡಿದೆ. ಅಲ್ಲೊಂದು ಕಡೆ ಸರ್ವೇ ಕಣ್ಣಿಗೆ ಬಿತ್ತು. ಸುಮ್ಮನೆ ಒಂದಷ್ಟು ಜನ ಹುಡುಗಿಯರನ್ನು ಏನಿಷ್ಟ ನಿಮಗೆ ಅಂತ ಕೇಳಲಾಗಿತ್ತು. ತುಂಬಾ ಜನ ಹುಡುಗಿಯರು ಉತ್ತರಿಸಿದ್ದರು. ಮೊತ್ತಮೊದಲು ಈ ಹುಡ್ಗಿàರು ಕೊಟ್ಟ ಕಂಪ್ಲೇಂಟ್ಸು.
ಅವನು ಮನಬಿಚ್ಚಿ ಮಾತಾಡಲ್ಲ
ಡ್ಯಾಮ್ ಸೈಲೆನ್ಸ್.
ಅವಳೊಬ್ಬಳು ಹೀಗೆ ಬೈದಿದ್ದಳು. ತುಂಬಾ ಜನ ಹೆಣ್ಣುಮಕ್ಕಳ ಕಂಪ್ಲೇಂಟ್ ಒಂದೇ. ಅವನು ಮನಸ್ಸು ಬಿಚ್ಚಿ ಮಾತಾಡಲ್ಲ. ಅವರಲ್ಲಿ ಕೆಲವರ ಮಾತುಗಳು ಹೀಗಿವೆ.
– ಅವನು ಮನಬಿಚ್ಚಿ ಮಾತನಾಡದೇ ಇದ್ದಾಗ ನನಗೆ ನೋವಾಗುತ್ತದೆ, ಬೇಜಾರಾಗುತ್ತದೆ. ಅವನು ಮನಸ್ಸಲ್ಲಿರೋದನ್ನೆಲ್ಲಾ ಹೇಳಬೇಕು ಅಂತ ನಾ ಕಾಯುತ್ತಿರುತ್ತೇನೆ. ಇಬ್ಬರ ಮನಸ್ಸೂ ಒಂದಾಗಬೇಕು.
– ಅವನು ಯಾಕೆ ನನ್ನ ಅರ್ಥ ಮಾಡಿಕೊಳ್ಳುವುದಿಲ್ಲವೋ ಗೊತ್ತಾಗಲ್ಲ. ನನಗೆ ಅವನ ಅವಶ್ಯಕತೆ ಇದೆ. ನನಗವನು ಬೇಕು. ಎಲ್ಲವನ್ನೂ ಹೇಳಿಕೊಳ್ಳುವೆ. ಆದರೆ ಅವನು ಅಡಗಿಸಿಕೊಳ್ಳುತ್ತಾನೆ. ಒಳಗೆ ಚಂಡಮಾರುತ ಇದ್ದರೂ ತೋರಿಸಿಕೊಳ್ಳುವುದಿಲ್ಲ. ಅವನು ಹಾಗಿದ್ದರೆ ನಾನು ಒಬ್ಬಂಟಿ ಅನ್ನಿಸುತ್ತದೆ. ಅವನು ನನ್ನ ಪ್ರೀತಿಸಲ್ಲ ಅನ್ನಿಸುತ್ತದೆ.
– ನನಗೆ ಮನಸ್ಸನ್ನು ಓದಲು ಬರುವುದಿಲ್ಲ. ತುಂಬಾ ಸಲ ನನಗೆ ಒಂದು ವಿಷಯದ ಬಗ್ಗೆ ಚರ್ಚೆ ಮಾಡಬೇಕು ಅಂತನ್ನಿಸುತ್ತಿರುತ್ತದೆ. ಆದರೆ ಅವನು ಆ ಚರ್ಚೆಯನ್ನೆಲ್ಲಾ ಮನಸ್ಸಲ್ಲೇ ಮಾಡಿ ಪರಿಹಾರಕ್ಕೆ ಬಂದಿರುತ್ತಾನೆ. ನಾನು ಇನ್ನೇನಾದರೂ ಹೇಳಿದರೆ ಅವನು ಸಿಟ್ಟಾಗುತ್ತಾನೆ. ಹೀಗೆ ಅರ್ಧಕ್ಕೆ ನಿಲ್ಲುವ ಮಾತಿನಿಂದ ಎಷ್ಟು ಬೇಜಾರಾಗತ್ತೆ ಗೊತ್ತಾ?
– ನೀನು ತುಂಬಾ ಚೆಂದಗಿದ್ದಿ, ನಿನ್ನ ನಗುವಿನಲ್ಲಿ ನಾನು ಕಳೆದುಹೋಗುತ್ತೇನೆ ಅಂತ ಹೇಳಿ ಗುಲಾಬಿ ಕೊಟ್ಟರೆ ಸಾಕೇ? ಅದಕ್ಕಿಂತ ಆಚೆಗೆ ಏನೂ ಬೇಡ್ವೇ? ಇನ್ನೂ ತುಂಬಾ ಸಣ್ಣ ಸಣ್ಣ ಸಂತೋಷಗಳಿವೆ.
ಇನ್ನೊಂದಷ್ಟು ಹುಡುಗೀರದು ಬೇರೆ ಥರ ದೂರು. ಅವರಿದ್ದೂ ಮಾತಿಗೆ ಸಂಬಂಧಪಟ್ಟಿದ್ದೇ.
– ನಾನು ಯಾಕೆ ಸುಮ್ಮನಿರಬೇಕು? ಮಾತನಾಡಿ ಕ್ಲಿಯರ್ ಮಾಡಬೇಕು ಅನ್ನೋದು ನನ್ನ ವಾದ. ಏನಾದರೂ ಸಮಸ್ಯೆ ಇದ್ದರೆ ಮಾತನಾಡಿ ತಾನೇ ಪರಿಹರಿಸಿಕೊಳ್ಳುವುದು. ಮಾತು ಬೇಡ ಅಂದಾಗ ನನಗೆ ನೋವು. ಹಂಚಿಕೊಳ್ಳಬೇಕಲ್ಲವೇ ನಾವು?
– ಅವನು ಸಮಸ್ಯೆಗಳು ದೊಡ್ಡದಾಗುವ ತನಕ ಸುಮ್ಮನೇ ಇರುತ್ತಾನೆ. ಆಮೇಲೆ ಎಚ್ಚೆತ್ತಾಗ ತುಂಬಾ ಲೇಟ್ ಆಗಿರುತ್ತದೆ. ಸಣ್ಣ ಸಮಸ್ಯೆಯನ್ನು ಸಣ್ಣದರಲ್ಲೇ ಪರಿಹರಿಸಿಕೊಳ್ಳಬೇಕು.
– ನಮ್ಮ ಸಮಾಜ ಹುಡುಗರ ಭಾವನೆಗಳನ್ನು ಹತ್ತಿಕ್ಕುತ್ತದೆ. ಅವನು ಅಳಬಾರದು, ಅವನ ಬೇಸರವನ್ನು ತೋರಿಸಿಕೊಳ್ಳಬಾರದು ಅನ್ನುತ್ತದೆ. ನನಗದು ಇಷ್ಟವಿಲ್ಲ. ನನ್ನ ಹುಡುಗ ನನ್ನೊಂದಿಗೆ ನನ್ನ ಹುಡುಗನೇ ಆಗಿರಬೇಕು. ಎಲ್ಲಾ ಭಾವವನ್ನೂ ನನ್ನೆದುರಿಗೆ ತೋರಿಸಿಕೊಳ್ಳಬೇಕು.
– ನಾನು ಕೆಲವೊಂದು ವಿಷಯಗಳಲ್ಲಿ ಅವನನ್ನು ತುಂಬಾ ಪ್ರಶ್ನೆ ಮಾಡುತ್ತೇನೆ. ಅವನಿಗದು ಇಷ್ಟವಾಗುವುದಿಲ್ಲ. ಆಗೆಲ್ಲಾ ನಾನು ಅವನನ್ನು ಜಡ್ಜ್ ಮಾಡಲು ಕೇಳುವುದಲ್ಲ. ನಾನು ಅವನಿಗೆ ಹೆಲ್ಪ್ ಮಾಡಬೇಕು ಅಂದುಕೊಳ್ಳುತ್ತಿರುತ್ತೇನೆ. ಅವನನ್ನು ಅರ್ಥ ಮಾಡಿಕೊಳ್ಳಬೇಕು ಅನ್ನೋದು ನನ್ನ ಆಸೆಯಾಗಿರುತ್ತದೆ. ಅವನು ನನ್ನನ್ನು ಅರ್ಥ ಮಾಡಿಕೊಳ್ಳಲಿ ಅನ್ನುವ ಆಸೆಯೂ ಇರುತ್ತದೆ.
ಇವರೆಲ್ಲರಿಗಿಂತ ಭಿನ್ನವಾದ ಉತ್ತರಗಳನ್ನು ಒಂದಷ್ಟು ಮಂದಿ ಹುಡುಗಿಯರು ಕೊಟ್ಟಿದ್ದರು.
– ಅವನು ತುಂಬಾ ಮಾತನಾಡದಿದ್ದರೇನೇ ಚೆಂದ. ಸುಮ್ಮನೆ ಜೊತೆಜೊತೆ ನಡೆಯಬಹುದು. ಚರ್ಚೆ ಇಲ್ಲದ ಕ್ಷಣಗಳನ್ನು ಸವಿಯಬಹುದು.
– ಅವನ ಮೂಡ್ ಒಂದೇ ರೀತಿ ಇರುತ್ತದೆ. ಆರಾಮಾಗಿ ಸನ್ನಿವೇಶ ಎದುರಿಸುತ್ತಾನೆ. ನಂಗದು ತುಂಬಾ ಇಷ್ಟ.
ಇನ್ನೊಂದಷ್ಟು ಇಷ್ಟಗಳು..
– ನಂಗೇ ಏನಿಷ್ಟ ಅವನಲ್ಲಿ…? ಅವನ ಸರಳತೆ ನಂಗೆ ತುಂಬಾ ಇಷ್ಟ.
– ಅವನು ಕಾರಲ್ಲಿ ಆಯಿಲ್ ಚೆಕ್ ಮಾಡೋದು, ಕೈ ತೋಟಕ್ಕೆ ನೀರು ಹಾಯಿಸೋದು, ಆಮೇಲೆ ಸುಸ್ತಾಗಿ ಕೂರೋದು ಇವೆಲ್ಲಾ ನೋಡೋದು ನಂಗೆ ತುಂಬಾ ಇಷ್ಟ.
– ನನಗೆ ಅವನ ಅಪ್ಪುಗೆಯಲ್ಲಿ ಕಳೆದುಹೋಗುವುದಿಷ್ಟ. ಅವನ ಬಾಹೊಳಗೆ ನಾನು ತುಂಬಾ ಸುರಕ್ಷಿತವಾಗಿದ್ದೇನೆ ಅನ್ನಿಸುತ್ತದೆ.
– ಅವನು ಒಂದು ಸಲ ಹೇಳಿದರೆ ಅದನ್ನು ಪೂರ್ತಿ ಒಪ್ಪಿಕೊಂಡಿರುತ್ತಾನೆ ಅಂತರ್ಥ. ಅವನ ಆ ವರ್ತನೆ ನಂಗಿಷ್ಟ.
– ಅವನು ಒಂದು ಸಲ ಕ್ಯೂಟ್ ಆಗಿ ಕಾಣಬಲ್ಲ. ಮತ್ತೂಮ್ಮೆ ನಗಿಸಲೂ ಬಲ್ಲ. ಬೇಕಾದಂತೆ ಇರಬಲ್ಲ ಅವನೆಂದರೆ ನಂಗೆ ಜೀವ.
– ಆರಾಮಾಗಿ ಮುಂದೆ ಹೋಗುತ್ತಾನೆ. ಕಾಂಪ್ಲಿಕೇಷನ್ಸ್ ಇರಬಾರದು.
– ತಮಾಷೆ, ಕಾಳಜಿ, ಸಮಾಜದಲ್ಲಿ ಶಕ್ತಿ ಇವೆಲ್ಲಾ ಇರಬೇಕು.
– ಅವನ ಆತ್ಮವಿಶ್ವಾಸ ನನಗೆ ಶಕ್ತಿ ನೀಡುತ್ತದೆ.
– ಗಾಸಿಪ್ ಮಾಡಲ್ಲ. ತಲೆಬುಡವಿಲ್ಲದೆ ಮಾತಾಡಲ್ಲ. ಅವನ ಮಾತೆಂದರೆ ಒಪ್ಪುವಂಥಾ ಮಾತು.
– ನೇರಮಾತು, ನೇರ ನಡವಳಿಕೆ ತುಂಬಾ ಒಳ್ಳೆಯದು.
– ಅವನು ಯಾವಾಗಲೂ ಸಮಸ್ಯೆ ಪರಿಹಾರದ ಕಡೆಗೆ ಗಮನ ಹರಿಸುತ್ತಾನೆ. ಸಮಸ್ಯೆಗಳ ಕಾರಣಗಳತ್ತ ನೋಡಬಾರದು.
– ಬೇಗ ಕ್ಷಮಿಸುತ್ತಾನೆ. ನಾನು ಕರಗಬೇಕು.
ಒಂದಷ್ಟು ಸಲಹೆಗಳು..
– ಹುಡುಗರು ನಮ್ಮ ಎಲ್ಲಾ ದುಃಖಗಳಿಗೆ ತಾವೇ ಕಾರಣ ಅಂತ ಭಾವಿಸಬಾರದು.
– ಸುಮ್ಮನಿರುವುದಕ್ಕಿಂತ ಎರಡು ಸಮಾಧಾನದ ಮಾತಾಡುವುದು ಒಳ್ಳೆಯದು.
– ಊರ್ಮಿಳಾ
-ಉದಯವಾಣಿ