ಅಂತರಾಷ್ಟ್ರೀಯ

ಪಾಕಿಸ್ತಾನ ತನ್ನ ನೆಲದಲ್ಲಿರುವ ಉಗ್ರ ಜಾಲವನ್ನು ಮಟ್ಟಹಾಕಬೇಕು: ಬರಾಕ್ ಒಬಾಮ

Pinterest LinkedIn Tumblr
obama
ಇಸ್ಲಾಮಾಬಾದ್: ಪಾಕಿಸ್ತಾನ ತನ್ನ ನೆಲದಲ್ಲಿರುವ ಉಗ್ರ ಜಾಲವನ್ನು ಕೂಡಲೇ ಮಟ್ಟ ಹಾಕಬೇಕು ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಭಾನುವಾರ ಹೇಳಿದ್ದಾರೆ.
ಉಗ್ರ ಜಾಲವನ್ನು ಮಟ್ಟ ಹಾಕುವ ಸಾಮರ್ಥ್ಯ ಪಾಕಿಸ್ತಾನಕ್ಕೆ ಇದೆ. ಆದರೆ ಈ ಬಗ್ಗೆ ಪಾಕಿಸ್ತಾನ ಸರ್ಕಾರ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುಬೇಕು ಅಷ್ಟೇ ಎಂದು ಒಬಾಮ ಹೇಳಿದ್ದಾರೆ. ಖಾಸಗಿ  ಸುದ್ದಿಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅಮೆರಿಕ ಅಧ್ಯಕ್ಷರು,  ಪಠಾಣ್ ಕೋಟ್ ವಾಯುನೆಲೆ ಉಗ್ರ ದಾಳಿ ಪ್ರಕರಣದ ಕುರಿತು ಮಾತನಾಡಿ, ದೀರ್ಘಕಾಲದಿಂದಲೂ  ಭಾರತದಲ್ಲಿ ಭಯೋತ್ಪಾದಕ ಕೃತ್ಯಗಳು ನಡೆಯುತ್ತಿದ್ದು, ಪಠಾಣ್ ಕೋಟ್ ಉಗ್ರ ದಾಳಿಯೊಂದು ಉದಾಹರಣೆಯಷ್ಟೇ ಎಂದು ಹೇಳಿದರು.
ಪಠಾಣ್ ಕೋಟ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕ ಭಾರತ ಸರ್ಕಾರದೊಂದಿಗಿದ್ದು, ತಮ್ಮ ವೀರ-ಶೂರತ್ವದಿಂದಾಗಿ ಭಯೋತ್ಪಾದಕರಿಂದ ಹೆಚ್ಚಿನ ಹಾನಿಯಾಗದಂತೆ ತಡೆದ  ಭಾರತೀಯ ಸೈನಿಕರಿಗೆ ಸೆಲ್ಯೂಟ್ ಮಾಡುತ್ತೇನೆ. ತಮ್ಮ ಪ್ರಾಣವನ್ನು ಒತ್ತೆ ಇಟ್ಟು ಸೈನಿಕರು, ಆಗಬಹುದಾಗಿದ್ದ ಹೆಚ್ಚಿನ ಅಪಾಯವನ್ನು ತಡೆದಿದ್ದಾರೆ. ಘಟನೆಯಲ್ಲಿ ಸಾವನ್ನಪ್ಪಿದ್ದ  ಹುತಾತ್ಮಯೋಧರ ಕುಟುಂಬಕ್ಕೆ ಸಾಂತ್ವನ ಹೇಳುತ್ತೇನೆ ಎಂದು ಹೇಳಿದರು.
ಇದೇ ವೇಳೆ ಪಾಕಿಸ್ತಾನ ಪ್ರಧಾನಿ ನವಾಜ್ ಶರೀಫ್ ಅವರ ಜನ್ಮದಿನದಂದು ಶಿಷ್ಟಾಚಾರದ ನಡುವೆಯೂ ಪಾಕಿಸ್ತಾನಕ್ಕೆ ತೆರಳಿ ಶುಭಾಷಯಕೋರಿದ ಭಾರತ ಪ್ರಧಾನಿ ನರೇಂದ್ರ ಮೋದಿ ಅವರ  ನಡೆಯನ್ನು ಬರಾಕ್ ಒಬಾಮ ಶ್ಲಾಘಿಸಿದರು. ಉಭಯ ನಾಯಕರು ಸ್ಥಳೀಯ ಭಯೋತ್ಪಾದಕ ಚಟುವಟಿಕೆಗಳನ್ನು ನಿಗ್ರಹಿಸುವ ನಿಟ್ಟಿನಲ್ಲಿ ಚರ್ಚೆ ನಡೆಸಬೇಕು. ಮತ್ತು ಆ ನಿಟ್ಟಿನಲ್ಲಿ  ಕಾರ್ಯಪ್ರವೃತ್ತರಾಗಬೇಕು ಎಂದು ಹೇಳಿದರು.
ಇನ್ನು ಪಾಕಿಸ್ತಾನ ಕುರಿತಂತೆ ಮಾತನಾಡಿದ ಒಬಾಮ, 2014 ಡಿಸೆಂಬರ್ ನಲ್ಲಿ ಪೇಶಾವರದ ಶಾಲೆ ಮೇಲೆ ನಡೆದ ಉಗ್ರ ದಾಳಿ ಪ್ರಕರಣದ ಬಳಿಕ ಪಾಕಿಸ್ತಾನ ಸರ್ಕಾರ ಎಚ್ಚೆತ್ತುಕೊಂಡಿದ್ದು,  ಉಗ್ರರ ವಿರುದ್ಧ ಕಾರ್ಯಾಚರಣೆ ಕೈಗೊಳ್ಳುತ್ತಿದೆ. ಆದರೂ ಆ ನೆಲದಲ್ಲಿ ಭಯೋತ್ಪಾದಕ ಕೃತ್ಯಗಳು ನಿಂತಿಲ್ಲ. ಹೀಗಾಗಿ ಪಾಕಿಸ್ತಾನ ಸರ್ಕಾರ ತನ್ನ ಕಾರ್ಯವನ್ನು ಕಠಿಣಗೊಳಿಸಬೇಕು ಎಂದು  ಒಬಾಮ ಪಾಕ್ ಸರ್ಕಾರಕ್ಕೆ ಸಲಹೆ ನೀಡಿದರು.
ಅಮೆರಿಕಕ್ಕೆ ಭಾರತ ದೊಡ್ಡ ಆಪ್ತ ದೇಶವಾಗಿದ್ದು, ಇದು ಭವಿಷ್ಯದಲ್ಲಿಯೂ ಮುಂದುವರೆಯುವ ವಿಶ್ವಾಸವಿದೆ. ವಿಶ್ವದ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಗಳು ನಿಜವಾದ ಸೌಹಾರ್ಧ ದೇಶಗಳಾಗಿದ್ದು,  ಅಮೆರಿಕ ಅಧ್ಯಕ್ಷನಾಗಿ ಕೊನೆಯ ವರ್ಷದಲ್ಲಿರುವ ನಾನು ಉಭಯ ದೇಶಗಳ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತೇನೆ ಮತ್ತು ಇದು ನಮ್ಮ ವಿದೇಶಾಂಗ  ನೀತಿಯ ಒಂದು ಪ್ರಮುಖ ಭಾಗವಾಗಿರಲಿದೆ ಎಂದು ಒಬಾಮ ಭರವಸೆ ನೀಡಿದರು.

 

Write A Comment