ವಿಶ್ವಸಂಸ್ಥೆ: ವಿಶ್ವದ ವಲಸಿಗ ಜನಸಂಖ್ಯೆ ಪೈಕಿ ಅತಿಹೆಚ್ಚು ಯಾವ ದೇಶದ್ದು ಗೊತ್ತಾ? ಚೀನಾದ್ದು ಎಂದರೆ ತಪ್ಪು! ಏಕೆಂದರೆ, ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ವ್ಯವಹಾರಗಳ ಇಲಾಖೆ ನಡೆಸಿದ ಸಮೀಕ್ಷೆಯ ಪ್ರಕಾರ, ಜಗತ್ತಿನ ವಲಸಿಗರ ಪೈಕಿ ಭಾರತದ ಪಾಲೇ ಹೆಚ್ಚು.
ಸುಮಾರು 1.60 ಕೋಟಿ ಭಾರತೀಯರು ದೇಶದ ಹೊರಗೆ ವಾಸಿಸುತ್ತಿದ್ದಾರೆ. ವಿಶ್ವದ ವಲಸಿಗ ಜನಸಂಖ್ಯೆಪೈಕಿ ಅತಿ ಹೆಚ್ಚು ಮಂದಿ ಭಾರತೀಯರಾಗಿದ್ದರೆ, ಎರಡು ಮತ್ತು ಮೂರನೇ ಸ್ಥಾನವನ್ನು ಕ್ರಮವಾಗಿ ಮೆಕ್ಸಿಕೋ ಹಾಗೂ ರಷ್ಯಾ ಪಡೆದಿದೆ. 1990ರಲ್ಲಿ 67 ಲಕ್ಷ ಭಾರತೀಯರು ದೇಶದ ಹೊರಗೆ ವಾಸಿಸುತ್ತಿದ್ದರೆ, 2015ರಲ್ಲಿ ಇವರ ಸಂಖ್ಯೆ 1.60 ಕೋಟಿಗೇರಿದೆ ಎಂದೂ ವಿಶ್ವಸಂಸ್ಥೆಯ ವರದಿ ಹೇಳಿದೆ. ಇದೇ ವೇಳೆ, ಮೆಕ್ಸಿಕೋದ 1.20 ಕೋಟಿ ಮಂದಿ ದೇಶದ ಹೊರಗಿದ್ದಾರೆ. ಅತಿ ಹೆಚ್ಚು ಚದುರಿದ ಜನಸಂಖ್ಯೆಯುಳ್ಳ ಇತರೆ ದೇಶಗಳೆಂದರೆ ರಷ್ಯಾ, ಚೀನಾ, ಬಾಂಗ್ಲಾದೇಶ, ಪಾಕಿಸ್ತಾನ, ಉಕ್ರೇನ್.
24.40 ಕೋಟಿ ಅಂತಾರಾಷ್ಟ್ರೀಯ ವಲಸಿಗರು: 2015ರ ಅಂಕಿಅಂಶದ ಪ್ರಕಾರ, ವಿಶ್ವದ ಒಟ್ಟಾರೆ ಅಂತಾರಾಷ್ಟ್ರೀಯ ವಲಸಿಗರ(ಹುಟ್ಟಿದ ದೇಶದಿಂದ ಹೊರಗೆ ವಾಸಿಸುತ್ತಿರುವವರು) ಸಂಖ್ಯೆ 24.40 ಕೋಟಿ. 2000ನೇ ಇಸವಿಗೆ ಹೋಲಿಸಿದರೆ ಈ ಪ್ರಮಾಣ ಈಗ ಶೇ.41ರಷ್ಟು ಹೆಚ್ಚಳವಾಗಿದೆ. ಅಂತಾರಾಷ್ಟ್ರೀಯ ವಲಸಿಗರ ಪೈಕಿ ಮೂರನೇ ಎರಡರಷ್ಟು ಮಂದಿ ಯುರೋಪ್‍ನಲ್ಲಿ (7.60ಕೋಟಿ) ಅಥವಾ ಏಷ್ಯಾ (7.50 ಕೋಟಿ)ದಲ್ಲಿ ವಾಸಿಸುತ್ತಿದ್ದಾರೆ ಎಂದೂ ವರದಿ ಹೇಳಿದೆ. 2015ರಲ್ಲಿ ಒಟ್ಟಾರೆ ಅಂತಾರಾಷ್ಟ್ರೀಯ ವಲಸಿಗರ ಪೈಕಿ ಮೂರನೇ ಎರಡರಷ್ಟು ಮಂದಿ ಕೇವಲ 20 ದೇಶಗಳಲ್ಲಿ ವಾಸಿಸುತ್ತಿದ್ದಾರೆ. ಈ ಪೈಕಿ ಅಮೆರಿಕವು ಶೇ.19ರಷ್ಟು ಮಂದಿಗೆ ಆಶ್ರಯ ನೀಡಿ ಮೊದಲ ಸ್ಥಾನದಲ್ಲಿದ್ದರೆ, ನಂತರದ ಸ್ಥಾನಗಳನ್ನು ಜರ್ಮನಿ, ರಷ್ಯಾ, ಸೌದಿ ಅರೇಬಿಯಾ, ಬ್ರಿಟನ್ ಹಾಗೂ ಯುಎಇ ಪಡೆದಿವೆ. ಆ 20 ದೇಶಗಳಲ್ಲಿ ಭಾರತವು 12ನೇ ಸ್ಥಾನ ಪಡೆದಿದ್ದು, 52 ಲಕ್ಷ ವಲಸಿಗರಿಗೆ ಆಶ್ರಯ ನೀಡಿದೆ.