ನ್ಯೂಯಾರ್ಕ್: ಇಸ್ಲಾಮಿಕ್ ಸ್ಟೇಟ್ (ಐಸಿಸ್) ಭಯೋತ್ಪಾದಕ ಸಂಘಟನೆಗೆ ವಿಶ್ವಾದ್ಯಂತ ಪಸರಿಸಲು ಬೆಂಬಲ ನೀಡುತ್ತಿದೆ ಎಂದು ಆಪಾದಿಸಿ ಸಾಮಾಜಿಕ ಜಾಲತಾಣ ಟ್ವಿಟ್ಟರ್ ವಿರುದ್ಧ ಅಮೆರಿಕದ ಮಹಿಳೆಯೊಬ್ಬರು ಖಟ್ಲೆ ಹೂಡಿದ್ದಾರೆ. ಫ್ಲಾರಿಡಾ ಮೂಲದ ಮಹಿಳೆ ತಮರಾ ಫೀಲ್ಡ್ಸ್ ಅವರು ಟ್ವಿಟ್ಟರ್ ವಿರುದ್ಧ ಈ ಖಟ್ಲೆ ಹೂಡಿದ್ದಾರೆ ಎಂದು ವೈರ್ಡ್.ಕಾಮ್ ವರದಿ ಮಾಡಿದೆ.
ವರದಿಯ ಪ್ರಕಾರ ಜೋರ್ಡಾನಿನ ಅಮ್ಮಾನ್ನಲ್ಲಿ ಕಳೆದ ವರ್ಷ ನವೆಂಬರ್ನಲ್ಲಿ ಭಯೋತ್ಪಾದಕ ದಾಳಿಯಲ್ಲಿ ತನ್ನ ಪತಿಯನ್ನು ಕಳೆದುಕೊಂಡ ತಮರಾ ಟ್ವಿಟ್ಟರ್ ವಿರುದ್ಧ ಪರಿಹಾರ ಕೋರಿ ಖಟ್ಲೆ ಹೂಡಿದ್ದಾರೆ. ಟ್ವಿಟ್ಟರ್ ಹೊರತಾಗಿ ಐಸಿಸ್ ಕೆಲವೇ ಕೆಲವು ವರ್ಷಗಳಲ್ಲಿ ವಿಶ್ವದಲ್ಲೇ ಅತ್ಯಂತ ಭೀಕರ ಭಯೋತ್ಪಾದಕ ಸಂಘಟನೆಯಾಗಿ ಬೆಳೆಯುತ್ತಿರಲಿಲ್ಲ. ಭಯೋತ್ಪಾದಕ ಸಂಘಟನೆಯ ವಿಷಯ ಗೊತ್ತಿದ್ದೇ ಐಸಿಸ್ಗೆ ತನ್ನ ಪ್ರಚಾರ ಹಮ್ಮಿಕೊಳ್ಳಲು ಮತ್ತು ತನ್ನ ಸಾಮಾಜಿಕ ಜಾಲತಾಣದ ಮೂಲಕ ಮೂಲಕ ಸದಸ್ಯರ ನೇಮಕಾತಿಗೆ ಟ್ವಿಟ್ಟರ್ ಅವಕಾಶ ನೀಡಿದೆ ಎಂದು ತಮರಾ ದೂರಿದ್ದಾರೆ.
ಆದರೆ ಖಟ್ಲೆಯಲ್ಲಿ ಮಾಡಲಾದ ಆರೋಪಗಳನ್ನು ಟ್ವಿಟ್ಟರ್ ನಿರಾಕರಿಸಿದೆ. ‘ಖಟ್ಲೆಗೆ ಯಾವುದೇ ಅರ್ಹತೆಯೂ ಇಲ್ಲ ಎಂದು ನಾವು ನಂಬುತ್ತೇವೆ, ಈ ಕುಟುಂಬಕ್ಕೆ ಆಗಿರುವ ಭೀಕರ ನಷ್ಟದ ವಿಚಾರ ಕೇಳಿ ನಾವು ಅತೀವ ದುಃಖಿತರಾಗಿದ್ದೇವೆ’ ಎಂದು ಟ್ವಿಟ್ಟರ್ ವಕ್ತಾರರು ಹೇಳಿದ್ದನ್ನು ವೆಬ್ಸೈಟ್ ವರದಿ ಉಲ್ಲೇಖಿಸಿದೆ.