ಅಂತರಾಷ್ಟ್ರೀಯ

ಪರಗ್ವೆಯಲ್ಲಿ ಭಾರೀ ಪ್ರವಾಹದಿಂದ ಸಾವು ನೋವು । ತುರ್ತುಸ್ಥಿತಿ ಘೋಷಣೆ

Pinterest LinkedIn Tumblr

rainಪರಗ್ವೆ ಡಿ.27-ಎಲ್‌ನಿನೊ ಚಂಡಮಾರುತದ ಪರಿಣಾಮ ಉಂಟಾದ ಭಾರೀ ಮಳೆ ಮತ್ತು ಪ್ರವಾಹದಲ್ಲಿ ನೂರಾರು ಜನ ಮೃತಪಟ್ಟು, ಒಂದು ಲಕ್ಷಕ್ಕೂ ಹೆಚ್ಚು ಜನ ಮನೆ-ಮಠ ಕಳೆದುಕೊಂಡು ಬೀದಿ ಪಾಲಾಗಿದ್ದು, ನಿರಾಶ್ರಿತರಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಮುಕ್ತ ಹಣಕಾಸು ವೆಚ್ಚಕ್ಕೆ ಅನುವಾಗುವಂತೆ ಅಸುನ್ಸಿಯೋನ್ ಸೇರಿದಂತೆ ಏಳು ಪ್ರಾಂತ್ಯಗಳಲ್ಲಿ ಪರಗ್ವೆ ಸರ್ಕಾರ ತುರ್ತು ಪರಿಸ್ಥಿತಿ ಘೋಷಿಸಿದೆ. ಸಾವಿನ ಸಂಖ್ಯೆ ನಿಖರವಾಗಿ ತಿಳಿದುಬಂದಿಲ್ಲ. ಆದರೆ, ಸಾವು ನೋವಿನ ಸಂಖ್ಯೆ ಭಾರೀ ಪ್ರಮಾಣದಲ್ಲಿದೆ ಎಂದು ವರದಿಯಾಗಿದೆ. ಸಾವಿರಾರು ಮನೆಗಳು ಕುಸಿದುಬಿದ್ದು ಪ್ರವಾಹದಲ್ಲಿ ಕೊಚ್ಚಿಹೋಗಿವೆ.

ಎಲ್ಲೆಲ್ಲಿ ನೋಡಿದರೂ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿವೆ. ಈ ಅನಾಹುತದಲ್ಲಿ ಸತ್ತವರ ಸಂಖ್ಯೆ ಬಗ್ಗೆ ಸರ್ಕಾರ ಅಧಿಕೃತ ಹೇಳಿಕೆ ನೀಡಿಲ್ಲ. ನಿನ್ನೆ ಬೆಳಗ್ಗೆ ಇದ್ದಕ್ಕಿದ್ದಂತೆ ಎಲ್‌ನಿನೋ ಚಂಡಮಾರುತ ಅಪ್ಪಳಿಸಿದ್ದರಿಂದ, ಪರಗ್ವೆ, ಉರುಗ್ವೆ, ಬ್ರೆಜಿಲ್ ಮತ್ತು ಅರ್ಜೆಂಟೀನಾಗಳು ತತ್ತರಿಸಿ ಹೋಗಿವೆ.

ಎಲ್‌ನಿನೋದ ಹಾವಳಿ ಅಧಿಕವಾಗಿರುವ ಪರಗ್ವೆಯಲ್ಲಿ, ರಾಜಧಾನಿ ಅಸುನ್ಸಿಯೋನ್ ಸುತ್ತಮುತ್ತ 90 ಸಾವಿರ ನಾಗರಿಕರನ್ನು  ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ. ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದ ನದಿಗಳು ಉಕ್ಕಿ ಹರಿಯುತ್ತಿರುವುದರಿಂದಾಗಿ ಪ್ರವಾಹದ ಸೆಳೆತದಲ್ಲಿ ಜನರ ಸಹಿತ ಮನೆಗಳು ಕೊಚ್ಚಿಹೋಗಿವೆ. ರಾಜಧಾನಿಯಿಂದ 120 ಕಿ.ಮೀ ದೂರದಲ್ಲಿರುವ ಅಲ್ಭೆರ್ಡಿಯಲ್ಲಿ ನದಿ ದಡದಲ್ಲಿ ವಾಸಿಸುತ್ತಿರುವ ಸಾವಿರಾರು ಜನರನ್ನು ತೆರವುಗೊಳಿಸಲಾಗಿದೆ. ಕಳೆದ 15 ವರ್ಷಗಳಿಂದೀಚೆಗೆ ಇದೇ ಮೊದಲ ಬಾರಿ ಇಂತಹ ಭೀಕರ ಪ್ರವಾಹಕ್ಕೆ ದೇಶ ಗುರಿಯಾಗಿದೆ. ಇನ್ನು ಅರ್ಜೆಂಟೀನಾ, ಬ್ರೆಜಿಲ್, ಉರುಗ್ವೆಗಳಲ್ಲಿಯೂ ಎಲ್‌ನಿನೊ ಹಾವಳಿ ಮುಂದುವರಿದಿದ್ದು, ಪರಗ್ಯೆಗಿಂತ ಕಡಿಮೆ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ.

ಎಲ್ಲೆಡೆ ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆದಿದೆ. ಆದರೆ, ಸುರಿಯುತ್ತಿರುವ ಧಾರಾಕಾರ ಮಳೆಯಿಂದ ರಕ್ಷಣಾಕಾರ್ಯಕ್ಕೆ ಅಡಚಣೆ ಉಂಟಾಗಿದೆ ಎಂದು ಸರ್ಕಾರದ ರಕ್ಷಣಾ ವಕ್ತಾರರು ತಿಳಿಸಿದ್ದಾರೆ.

Write A Comment