ಅಂತರಾಷ್ಟ್ರೀಯ

ತಾಯ್ತನದ ಸಂಭ್ರಮದಲ್ಲಿ ಲೈಂಗಿಕ ಅಲ್ಪಸಂಖ್ಯಾತ ‘ತಂದೆ’

Pinterest LinkedIn Tumblr

dayaane

ಬಗೊಟಾ: ಲೈಂಗಿಕ ಅಲ್ಪಸಂಖ್ಯಾತೆ ಹಾಗೂ ಈ ಸಮುದಾಯದ ಕಾರ್ಯಕರ್ತೆಯಾಗಿ ಈಕ್ವೆಡಾರ್‌ನಲ್ಲಿ ಖ್ಯಾತರಾಗಿರುವ ಡಯಾನೆ ರಾಡ್ರಿಗಸ್‌, ತನ್ನ ಪುರುಷ ಸಂಗಾತಿ ಗರ್ಭ ಧರಿಸಿದ್ದಾರೆ ಎಂದು ಪ್ರಕಟಿಸಿದ್ದಾರೆ.

ಫರ್ನಾಂಡೊ ಮಕಾಡೊ ಮತ್ತು ಡಯಾನೆ ರಾಡ್ರಿಗಸ್‌ ತಾವು ತಂದೆ ತಾಯಿಯಾಗುತ್ತಿದ್ದೇವೆ ಎಂಬ ಸಂಭ್ರಮ ಲೈಂಗಿಕ ಅಲ್ಪಸಂಖ್ಯಾತ ಸಮುದಾಯಕ್ಕೇ ಹೊಸ ಆಶಾಕಿರಣ ಮೂಡಿಸಿದೆ ಹಾಗೂ ನಾವೂ ಗರ್ಭ ಧರಿಸಬಹುದು ಎಂಬ ಸಂದೇಶ ರವಾನಿಸಿದೆ ಎಂದು ಹೇಳಿಕೊಂಡಿದ್ದಾರೆ.

ಲೂಯಿಸ್‌ ಎಂಬ ಮೂಲ ಹೆಸರಿನ ರಾಡ್ರಿಗಸ್‌, ತನ್ನ ಸಂಗಾತಿ ಮಕಾಡೊ ತಾಯಿಯಾಗುತ್ತಿರುವುದಾಗಿ ಬಹಿರಂಗಪಡಿಸಿದ್ದಾರೆ. ಮಕಾಡೊ ಮೂಲ ಹೆಸರು ಮರಿಯಾ. ರೋಮನ್ ಕೆಥೊಲಿಕ್ ಸಮಾಜದ ದೃಷ್ಟಿಕೋನಗಳನ್ನು ಬದಲಿಸುವ ಸಲುವಾಗಿ ಈ ಮಾಹಿತಿ ಬಹಿರಂಗಪಡಿಸುತ್ತಿರುವುದಾಗಿ ದಂಪತಿ ಪ್ರಕಟಿಸಿದ್ದಾರೆ.

ಇಬ್ಬರೂ ಹಾರ್ಮೋನುಗಳನ್ನು ತೆಗೆದುಕೊಂಡಿದ್ದರೂ, ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೆ ಒಳಪಟ್ಟಿರಲಿಲ್ಲ.

‘ಸಮಾನಲಿಂಗಿಗಳ ಲೈಂಗಿಕತೆ ಕುರಿತ ಪೂರ್ವಗ್ರಹಗಳನ್ನು ಮುರಿಯಲು ನಾವು ಪ್ರಯತ್ನಿಸುತ್ತಿದ್ದೇವೆ’ ಎಂದು ಹೇಳಿರುವ ರಾಡ್ರಿಗಸ್‌, ಈ ಕುರಿತು ಧಾರ್ಮಿಕ ಮುಖಂಡರು ಯಾವುದೇ ಪ್ರತಿಕ್ರಿಯೆ ನೀಡದಿರುವುದು ಇಬ್ಬರಿಗೂ ಅಚ್ಚರಿಯುಂಟುಮಾಡಿದೆ ಮತ್ತಷ್ಟೇ ಸಂತಸ ತಂದಿದೆ ಎಂದಿದ್ದಾರೆ.

ಸಲಿಂಗಕಾಮಿಗಳು ಮತ್ತು ಲೈಂಗಿಕ ಅಲ್ಪಸಂಖ್ಯಾತರು ಮಕ್ಕಳನ್ನು ದತ್ತು ಸ್ವೀಕರಿಸುವುದನ್ನು ಚರ್ಚ್‌ ಟೀಕಿಸುತ್ತದೆ. ನಿಸರ್ಗದ ನಿಯಮದಂತೆ ಮಗುವಿಗೆ ಜನ್ಮ ನೀಡುವ ಕುರಿತು ನಮ್ಮನ್ನು ಟೀಕಿಸುವವರಿಗೆ ಇದೊಂದು ಉತ್ತರ’ ಎಂದು ಅವರು ಹೇಳಿದ್ದಾರೆ.

Write A Comment