
ಲಾಹೋರ್: ಅಫ್ಘಾನಿಸ್ತಾನ ಪ್ರವಾಸದ ನಂತರ ಕಾಬೂಲ್ ನಿಂದ ನೇರವಾಗಿ ಲಾಹೋರ್ ಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಪ್ ಅವರು ಖುದ್ದು ವಿಮಾನ ನಿಲ್ದಾಣಕ್ಕೆ ಆಗಮಿಸಿ, ಕೆಂಪು ಹಾಸಿನ ಸ್ವಾಗತ ನೀಡಿದರು,
ಇಂದು 66ನೇ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವ ನವಾಜ್ ಷರೀಫ್ ಅವರಿಗೆ ದೂರವಾಣಿ ಮೂಲಕ ಮೋದಿ ಶುಭಾಶಯ ಕೋರಿದ್ದರು. ಈ ವೇಳೆ ಪಾಕಿಸ್ತಾನಕ್ಕೆ ಭೇಟಿ ನೀಡುವಂತೆ ನವಾಜ್ ಷರೀಫ್ ಮೋದಿಗೆ ಆಹ್ವಾನ ನೀಡಿದ್ದರು.
ಈ ಹಿನ್ನೆಲೆಯಲ್ಲಿ ದೆಹಲಿಗೆ ಆಗಮಿಸುವ ಮಾರ್ಗ ಮಧ್ಯ ಲಾಹೋರ್ ಗೆ ಭೇಟಿ ನೀಡಿದ ಮೋದಿ, ಅಲ್ಲಿಂದ ವಿಶೇಷ ಹೆಲಿಕಾಪ್ಟರ್ ನಲ್ಲಿ ಜತಿ ಉಮಾರಾದಲ್ಲಿರುವ ಷರೀಫ್ ಅವರ ರಾಯ್ ವಿಂಡ್ ಪ್ಯಾಲೇಸ್ ಗೆ ತೆರಳಿ, ಷರೀಫ್ ಅವರ ಕುಟುಂಬವನ್ನು ಭೇಟಿ ಮಾಡಿದರು. ವಾಪಸ್ ಬರುವ ವೇಳೆ ಮೋದಿ ಅವರು ಷರೀಫ್ ಅವರ ತಾಯಿಯ ಪಾದಮುಟ್ಟಿ ನಮಸ್ಕರಿಸಿದರು ಎನ್ನಲಾಗಿದೆ.
ಇನ್ನು ಪಾಕ್ ಪ್ರಧಾನಿ ಸಹ ಶಿಷ್ಟಾಚಾರ ಬದಿಗೊತ್ತಿ ಖುದ್ದು ಲಾಹೋರ್ ವಿಮಾನ ನಿಲ್ದಾಣಕ್ಕೆ ಬಂದು ಮೋದಿಯನ್ನು ಸ್ವಾಗತಿಸಿದ್ದರು. ಅಲ್ಲದೆ ವಾಪಸ್ ತೆರಳುವಾಗಲೂ ವಿಮಾನ ನಿಲ್ದಾಣಕ್ಕೆ ಬಂದು ಮೋದಿ ಅವರನ್ನು ಬೀಳ್ಕೊಟ್ಟರು.
2004ರಲ್ಲಿ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಪಾಕ್ ಗೆ ಭೇಟಿ ನೀಡಿದ್ದರು. ಇದೀಗ 11 ವರ್ಷಗಳ ಬಳಿಕ ಭಾರತದ ಪ್ರಧಾನಿ ಮೋದಿ ಪಾಕ್ ಗೆ ಭೇಟಿ ನೀಡಿದ್ದು, ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧ ಸುಧಾರಣೆಯಾಗುವ ಸೂಚನೆ ನೀಡಿದೆ.
ಇನ್ನು ಪ್ರಧಾನಿ ಮೋದಿ ಭೇಟಿ ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಪಾಕಿಸ್ತಾನ ವಿದೇಶಾಂಗ ಕಾರ್ಯದರ್ಶಿ ಏಜಾಜ್ ಚೌಧರಿ ಅವರು, ಮೋದಿ ಅನಿರೀಕ್ಷಿತ ಭೇಟಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮೋದಿ ಅವರ ಭೇಟಿ ಇಂದೇ ನಿರ್ಧರವಾಗಿದ್ದು, ಷರೀಫ್ ಅವರ ಮೊಮ್ಮಗಳ ಮದುವೆ ವಿಷಯ ಅವರಿಗೆ ಗೊತ್ತಿರಲಿಲ್ಲ ಎಂದರು. ಅಲ್ಲದೆ 2016ರ ಜನವರಿಯಲ್ಲಿ ಉಭಯ ದೇಶಗಳ ವಿದೇಶಾಂಗ ಸಚಿವರ ಮಾತುಕತೆ ನಡೆಸುವುದಾಗಿ ಅವರು ತಿಳಿಸಿದ್ದಾರೆ.
ಇಂದು ಬೆಳಗ್ಗೆ ಕಾಬೂಲ್ ನಲ್ಲಿ ಭಾರತ ಸರ್ಕಾರದಿಂದ ನಿರ್ಮಾಣಗೊಂಡಿದ್ದ ನೂತನ ಪಾರ್ಲಿಮೆಂಟ್ ಅನ್ನು ಉದ್ಘಾಟಿಸಿ ಮಾತನಾಡಿದ ಮೋದಿ, ಅಫ್ಘಾನಿಸ್ತಾನದಲ್ಲಿ ಉಗ್ರ ಚಟುವಟಿಕೆ ಕುರಿತಂತೆ ಪಾಕ್ ವಿರುದ್ಧ ವಾಗ್ದಾಳಿ ಕೂಡಾ ನಡೆಸಿದ್ದರು.
ಇನ್ನು ಪ್ರಧಾನಿ ಪಾಕಿಸ್ತಾನ ಭೇಟಿಯನ್ನು ಎನ್ ಡಿಎ ಮಿತ್ರ ಪಕ್ಷ ಶಿವಸೇನೆ ಕಟುವಾಗಿ ಟೀಕಿಸಿದ್ದು, ಫೋಟೋಗೆ ಪೋಸ್ ಕೊಡಲು ಪ್ರಧಾನಿ ಮೋದಿ ಪಾಕ್ ಗೆ ಭೇಟಿ ನೀಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದೆ.