ಅಂತರಾಷ್ಟ್ರೀಯ

ಇಸಿಸ್ ನಿರ್ನಾಮಕ್ಕೆ ಸಜ್ಜಾದ 1900 ಜೇಮ್ಸ್ ಬಾಂಡ್ ಗಳು

Pinterest LinkedIn Tumblr

terror

ಲಂಡನ್: ಇಡೀ ವಿಶ್ವವನ್ನೇ ತನ್ನ ಉಗ್ರತ್ವದಿಂದ ಬೆದರಿಸುತ್ತಿರುವ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯನ್ನು ಬುಡ ಸಮೇತ ಕಿತ್ತುಹಾಕಲು ವಿಶ್ವ ಸಮುದಾಯ ಒಗ್ಗೂಡಿದ್ದು, ರಷ್ಯಾ ಬಳಿಕ ಇದೀಗ ಬ್ರಿಟನ್ ಕೂಡ ಇಸಿಸ್ ವಿರುದ್ಧ ತೊಡೆ ತಟ್ಟಿ ನಿಂತಿದೆ.

ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ನಲ್ಲಿ ನಡೆದ ನೂರಾರು ಅಮಾಯಕರ ಹತ್ಯಾಕಾಂಡದ ನಂತರ ಬ್ರಿಟನ್ ಸರ್ಕಾರ ಎಚ್ಚೆತ್ತುಕೊಂಡಿದ್ದು, ಸುಮಾರು 1,900 ಜನರ ವಿಶೇಷ ತನಿಖಾಧಿಕಾರಿಗಳ ಪಡೆಯನ್ನು ಸಜ್ಜುಗೊಳಿಸಿದೆ. ಒಂದು ಮೂಲದ ಪ್ರಕಾರ ಈ ಪಡೆಗಳಿಗೆ ಬ್ರಿಟನ್ ಸರ್ಕಾರ ಪರಮಾಧಿಕಾರವನ್ನು ನೀಡಿದ್ದು, ಇಸಿಸ್ ಉಗ್ರಗಾಮಿ ಸಂಘಟನೆಯನ್ನು ದಮನಗೊಳಿಸಲು ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲು ಈ ತಂಡ ಸ್ವತಂತ್ರ ಎಂದು ಹೇಳಲಾಗುತ್ತಿದೆ.

ಅಲ್ಲದೆ ಪ್ಯಾರಿಸ್ ನಂತೆಯೇ ಬ್ರಿಟನ್ ಮೇಲೆಯೂ ಇಸಿಸ್ ಉಗ್ರಗಾಮಿಗಳು ದಾಳಿ ಮಾಡುವ ಸಾಧ್ಯತೆ ಇರುವ ಹಿನ್ನಲೆಯಲ್ಲಿ ಉಗ್ರರ ಸಂಭಾವ್ಯ ದಾಳಿ ತಡೆಯುವ ಸಲುವಾಗಿ ಆಪರೇಷನ್ ಬಾಂಡ್ (ಸೀಕ್ರೆಟ್ ಸರ್ವಿಸ್ ಏಜೆಂಟ್)ಯೋಜನೆಯನ್ನು ಬ್ರಿಟನ್ ಸಿದ್ಧಪಡಿಸಿದೆ. ಈ ಯೋಜನೆಯ ಪ್ರಕಾರ ಸಿರಿಯಾ, ಇರಾಕ್‌ನಲ್ಲಿ ಅಡಗಿಕೊಂಡು ಅಟ್ಟಹಾಸ ಮೆರೆಯುತ್ತಿರುವ ಐಸಿಸ್ ನಾಯಕರನ್ನು ಬೇಟೆಯಾಡಲು 1,900 ವಿಶೇಷ ತನಿಖಾಧಿಕಾರಿಗಳ ಪಡೆಯನ್ನು ಅಣಿಗೊಳಿಸಲಾಗಿದ್ದು, ಪ್ಯಾರಿಸ್ ದಾಳಿಯ ಸಂಚುಕೋರರು ಸೇರಿದಂತೆ ಇಸಿಸ್ ನ ಪ್ರಮುಖ ಉಗ್ರ ನಾಯಕರ ಹಿಟ್‌ ಲಿಸ್ಟ್ ಅನ್ನು ಈ ಬಾಂಡ್‌ಗಳ ಪಡೆ ಸಿದ್ಧಪಡಿಸಿಕೊಂಡಿದ್ದು, ಸಿರಿಯಾಗೆ ತೆರಳಲು ಎಲ್ಲ ಸಿದ್ಧತೆ ಮಾಡಿಕೊಂಡಿದೆ.

ಪ್ಯಾರಿಸ್‌ನಲ್ಲಿ ಐಸಿಸ್ ಉಗ್ರರು ರಕ್ತದೋಕುಳಿ ನಡೆಸಿದ ನಂತರ ಅಮೆರಿಕದಷ್ಟೇ ಬ್ರಿಟನ್ ಕೂಡ ಭೀತಿಗೆ ಒಳಗಾಗಿದ್ದು, ಐಸಿಸ್ ಉಗ್ರರು ಈಗಾಗಲೇ ಲಂಡನ್‌ಗೂ ನುಗ್ಗಿರುವ ಮಾಹಿತಿ ದೊರೆತಿದೆ. ಈ ಹಿನ್ನಲೆಯಲ್ಲಿ ಆ ಸಂಘಟನೆಯನ್ನು ನಿರ್ನಾಮ ಮಾಡಲೇಬೇಕೆಂದು ಬ್ರಿಟನ್ ಪಣತೊಟ್ಟಿದ್ದು, ಇದೇ ಕಾರಣಕ್ಕೆ ಈ ವಿಶೇಷ ಪಡೆಯನ್ನು ಸಜ್ಜುಗೊಳಿಸಿದೆ ಎಂದು ಹೇಳಲಾಗುತ್ತಿದೆ. ರಷ್ಯಾ, ಅಮೆರಿಕ ಮತ್ತು ಸೌದಿ ಅರೇಬಿಯಾ ಈಗಾಗಲೇ ಸಿರಿಯಾದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು, ಐಸಿಸ್‌ನ ಪ್ರಮುಖ ನಾಯಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಬ್ರಿಟನ್ ವಿಶೇಷ ಗೂಢಚಾರ ಅಧಿಕಾರಿಗಳನ್ನು ನೇಮಿಸಿ ಈ ಹೊಸ ಕಾರ್ಯ ಯೋಜನೆ ಸಿದ್ಧಪಡಿಸಿದೆ.

ಬಾಂಡ್‌ಗಳ ಕೆಲಸವೇನು?
ಸಿರಿಯಾ, ಮತ್ತು ಇರಾಕ್‌ನಲ್ಲಿ ಅಡಗಿರುವ ಐಸಿಸ್ ಉಗ್ರರನ್ನು ಹತ್ಯೆಗೈಯ್ಯುವುದು ಬ್ರಿಟನ್ ನೇಮಿಸಿರುವ 1,900 ಗೂಢಚಾರ ಅಧಿಕಾರಿಗಳ ಪ್ರಮುಖ ಕೆಲಸವಾಗಿದೆ. ಇದಲ್ಲದೆ ಸಿರಿಯಾ, ಇರಾಕ್ ಜತೆಗೆ ಬ್ರಿಟನ್‌ ನಲ್ಲೂ ಸಂಘಟನೆಗೆ ಯುವಕರನ್ನು ಆಕರ್ಷಿಸಲು ಯತ್ನಿಸುವವರನ್ನು ಕಂಡಲ್ಲೇ ಗುಂಡಿಕ್ಕಿ ಹತ್ಯೆಗೈಯ್ಯುವ ಪರಮಾಧಿಕಾರವನ್ನೂ ಈ ಪಡೆಗೆ ನೀಡಲಾಗಿದೆ. ಇನ್ನು ಹೊಸದಾಗಿ ನೇಮಕವಾಗಿರುವ ಈ 1900 ಜೇಮ್ಸ್ ಬಾಂಡ್ ಗಳಷ್ಟೇ ಅಲ್ಲದೇ ಈಗಾಗಲೇ ವಿಶ್ವಾದ್ಯಂತ ಕಾರ್ಯ ನಿರ್ವಹಿಸುತ್ತಿರುವ ಗೂಡಚಾರಿಗಳು ಸೇರಿದಂತೆ ಒಟ್ಟು 15 ಸಾವಿರ ಗೂಢಚಾರರು ಬ್ರಿಟನ್ ರಕ್ಷಣೆಗಾಗಿ ಸಿರಿಯಾಕ್ಕೆ ಹೋರಾಡಲಿದ್ದಾರೆ ಎಂದು ತಿಳಿದುಬಂದಿದೆ.

ಇಸಿಸ್ ನಾಯಕರ ಹಿಟ್‌ಲಿಸ್ಟ್ ಸಿದ್ಧ, ಶೀಘ್ರದಲ್ಲಿ ಬಾಂಡ್ ಗಳ ಕೆಲಸ ಶುರು
ಬ್ರಿಟಿಷ್ ಅಧಿಕಾರಿಗಳು ಐಸಿಸ್ ಉಗ್ರ ನಾಯಕರ ಹಿಟ್‌ಲಿಸ್ಟ್ ಕೂಡ ಸಿದ್ಧಪಡಿಸಿಕೊಂಡಿದ್ದು, ಪ್ಯಾರಿಸ್ ದಾಳಿಯ ಸಂಚುಕೋರ ಶೇಖ್ ಅಬು ಅಲ್ ಅದ್ನಾನಿ, ಐಸಿಸ್ ಮುಖ್ಯಸ್ಥ ಅಬುಬಕರ್ ಅಲ್ ಬಾಗ್ದಾದಿ, ಸಿರಿಯಾದಲ್ಲಿ ಐಸಿಸ್ ಕಾರ್ಯಚಟುವಟಿಕೆಗಳನ್ನು ನಿಯಂತ್ರಿಸುತ್ತಿರುವ ಅಬು ಅಲಿ ಅಲ್ ಅನ್ಬಾರಿ ಸೇರಿದಂತೆ ಹಲವು ಐಸಿಸ್ ನಾಯಕರು ಬ್ರಿಟನ್ ಗೂಢಚಾರರ ಪ್ರಮುಖ ಟಾರ್ಗೆಟ್ ಆಗಿದ್ದಾರೆ. ಇವರನ್ನು ಹತ್ಯೆಗೈಯ್ಯಲೆಂದೇ ವಿಶೇಷ ಕಾರ್ಯ ಯೋಜನೆಗಳನ್ನು ಸಿದ್ಧಪಡಿಸಿಕೊಳ್ಳಲಾಗಿದ್ದು, ಶೀಘ್ರವೇ ಸಿರಿಯಾಕ್ಕೆ ಹೊರಡುವ ಬಾಂಡ್ ಗಳು ತಮ್ಮ ಕೆಲಸ ಆರಂಭಿಸಲಿದ್ದಾರೆ.

Write A Comment