ಅಂತರಾಷ್ಟ್ರೀಯ

ಐಸಿಸ್‌ ಪೋಸ್ಟ್‌ರ್‌ ಹುಡುಗಿಯನ್ನು ಹೊಡೆದು ಕೊಂದ ಜೆಹಾದಿ ಉಗ್ರರು

Pinterest LinkedIn Tumblr

2 Sabina-Samra

ಡಮಾಸ್ಕಸ್‌: ಆಕೆ ಇಸ್ಲಾಮಿಕ್‌ ಉಗ್ರ ಸಂಘಟನೆ, ಐಸಿಸ್‌ನ ಪೋಸ್ಟರ್‌ ಹುಡುಗಿ ಆಗಿದ್ದಳು; ಆದರೆ ಆಕೆಯನ್ನೀಗ ಇಸ್ಲಾಮಿಕ್‌ ಜೆಹಾದಿಗಳು ಹೊಡೆದು ಚಚ್ಚಿ ಸಾಯಿಸಿದ್ದಾರೆ.

ಹದಿನೇಳರ ಹರೆಯದ ಸಮ್ರಾ ಕೆಸಿನೋವಿಕ್‌ ಎರಡು ವರ್ಷಗಳ ಹಿಂದೆ ತನ್ನ ಗೆಳತಿ ಸಬೀನಾ ಸೆಲಿಮೋವಿಕ್‌ ಜತೆಗೆ ಆಸ್ಟ್ರಿಯಾದಲ್ಲಿನ ತನ್ನ ಮನೆಯಿಂದ ಸಿರಿಯಾಗೆ ಹೋಗಲು ಪ್ರಯಾಣ ಬೆಳೆಸಿದ್ದಳು. ಆಗಿನ್ನೂ ಆಕೆಗೆ ಹದಿನೈದರ ಹರೆಯ.

ಆಸ್ಟ್ರಿಯಾ ತ್ಯಜಿಸಿ ಸಿರಿಯಾ ತಲುಪಿ ಐಸಿಸ್‌ ಉಗ್ರ ಸಂಘಟನೆಯನ್ನು ಸೇರಿಕೊಂಡು ಬಹುಬೇಗನೆ ತನ್ನ ಮಾದಕ ಸೌಂದರ್ಯದಿಂದ ಐಸಿಸ್‌ ಸಂಘಟನೆಯ ಪೋಸ್ಟರ್‌ ಹುಡುಗಿಯಾದ ಸಮ್ರಾ ಮೊನ್ನೆ ಮೊನ್ನೆ ಸಿರಿಯಾದ ಐಸಿಸ್‌ ಭದ್ರ ಕೋಟೆ ರಕ್ಕಾದಿಂದ ಪಲಾಯನ ಮಾಡಲು ಯತ್ನಿಸಿದಾಗ ಜೆಹಾದಿ ಉಗ್ರರು ಆಕೆಯನ್ನು ಹೊಡೆದು ಚಚ್ಚಿ ಸಾಯಿಸಿದರು ಎಂದು ಮಾಧ್ಯಮಗಳು ವರದಿ ಮಾಡಿವೆ.

ಸಿರಿಯಾದಲ್ಲಿ ತಾವು ಹೋರಾಡಲು ಬಯಸಿರುವುದಾಗಿ ಹೇಳಿಕೊಂಡಿದ್ದ ಸಮ್ರಾ ಮತ್ತು ಸಬೀನಾ 2014ರ ಎಪ್ರಿಲ್‌ನಲ್ಲಿ ಸಿರಿಯಾಗೆ ಹಾರಿದ್ದರು.

ಹೀಗೆ ಸಿರಿಯಾದ ರಕ್ಕಾಗೆ ಬಂದು ಐಸಿಸ್‌ ಉಗ್ರ ಸಂಘಟನೆಯನ್ನು ಸೇರಿಕೊಂಡಿದ್ದ ಸಮ್ರಾ ಮತ್ತು ಸಬೀನಾ ಜಿಹಾದಿ ಮುಸ್ಲಿಂ ಮಹಿಳೆಯರೊಂದಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ಆದರೆ ಮೊನ್ನೆ ಸಮ್ರಾ ರಕ್ಕಾದಿಂದ ಪರಾರಿಯಾಗಲು ಯತ್ನಿಸಿದಾಗ ಜೆಹಾದಿ ಉಗ್ರರನ್ನು ಆಕೆಯನ್ನು ಹೊಡೆದು ಸಾಯಿಸಿದರು ಎಂದು ಆಸ್ಟೆರೀಕ್‌ ಟ್ಯಾಬ್ಲಾಯ್ಡ ಪತ್ರಿಕೆ ವರದಿ ಮಾಡಿದೆ.

ಸಮ್ರಾ ಮತ್ತು ಸಬೀನಾ ರನ್ನು ಐಸಿಸ್‌ ಉಗ್ರ ಸಂಘಟನೆ ಬುದ್ಧಿ ಪಲ್ಲಟ ಮಾಡಿ ಸಿರಿಯಾದಲ್ಲಿನ ಜೆಹಾದ್‌ನಲ್ಲಿ (ಪವಿತ್ರ ಸಮರ) ಭಾಗಿಯಾಗಲು ಪುಸಲಾಯಿಸಿ ದೇಶ ಬಿಡುವಂತೆ ಮಾಡಿತ್ತು ಎಂದು ಇವರ ಬಾಸ್ನಿಯನ್‌ ಹೆತ್ತವರು ಹೇಳಿರುವುದಾಗಿ ಮಿರರ್‌ ಡಾಟ್‌ ಕೋ ಡಾಟ್‌ ಯುಕೆ ವರದಿ ಮಾಡಿದೆ.

ಸಮ್ರಾ ಮತ್ತು ಸಬೀನಾ ದೇಶ ಬಿಟ್ಟು ಹೋಗುವಾಗ ತಮ್ಮ ಹೆತ್ತವರಿಗೆ ಒಂದು ಪತ್ರ ಬರೆದಿಟ್ಟಿದ್ದರು – “ನಮಗಾಗಿ ಹುಡುಕಾಡಬೇಡಿ; ನಾವು ಅಲ್ಲಾಹುವಿನ ಸೇವೆಗಾಗಿ ಹೋಗುತ್ತಿದ್ದೇವೆ ಮತ್ತು ಅಲ್ಲಾಹುವಿಗಾಗಿ ಪ್ರಾಣಾರ್ಪಣೆ ಮಾಡುತ್ತೇವೆ’.
-ಉದಯವಾಣಿ

Write A Comment