ಅಂತರಾಷ್ಟ್ರೀಯ

ಮಾಲಿ: ಉಗ್ರರ ದಾಳಿ: ಹೊಟೇಲ್‌ನಲ್ಲಿ 27 ಮಂದಿಯ ಹತ್ಯೆ; ಕಮಾಂಡೊ ಕಾರ್ಯಾಚರಣೆಯಲ್ಲಿ 150 ಒತ್ತೆಯಾಳುಗಳ ರಕ್ಷಣೆ

Pinterest LinkedIn Tumblr

Maliಬೊಮಾಕೊ, ನ.20: ಪ್ಯಾರಿಸ್ ದಾಳಿಯ ಆಘಾತದಿಂದ ಜಗತ್ತು ಚೇತರಿಸಿಕೊಳ್ಳುತ್ತಿರುವಾಗಲೇ, ಶುಕ್ರವಾರ ಪಶ್ಚಿಮ ಆಫ್ರಿಕದ ರಾಷ್ಟ್ರವಾದ ಮಾಲಿಯಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಮಾಲಿಯ ರಾಜಧಾನಿ ಬೊಮಾಕೊದ ಹೊಟೇಲೊಂದರಲ್ಲಿ ದಾಳಿ ನಡೆಸಿದ ಬಂದೂಕುಧಾರಿ ಉಗ್ರರು 170ಕ್ಕೂ ಅಧಿಕ ಮಂದಿಯನ್ನು ಒತ್ತೆಸೆರೆಯಲ್ಲಿರಿಸಿ ಅವರಲ್ಲಿ ಕನಿಷ್ಠ 27 ಮಂದಿಯನ್ನು ಹತ್ಯೆಗೈದಿದ್ದಾರೆ. ಅನಂತರ ಮಾಲಿಯ ವಿಶೇಷ ಭದ್ರತಾಪಡೆಗಳ ನೇತೃತ್ವದಲ್ಲಿ ಹೊಟೇಲ್‌ನೊಳಗೆ ನಡೆದ ಕಮಾಂಡೊ ಕಾರ್ಯಾಚರಣೆಯಲ್ಲಿ 150ಕ್ಕೂ ಅಧಿಕ ಮಂದಿಯನ್ನು ಬಂಧಮುಕ್ತಿಗೊಳಿಸಲಾಗಿದೆ ಹಾಗೂ ದಾಳಿಕೋರ ಉಗ್ರರಿಬ್ಬರಿನ್ನು ಹತ್ಯೆಗೈಯ್ಯಲಾಗಿದೆ.

ಸ್ಥಳೀಯ ಕಾಲಮಾನ ಮುಂಜಾನೆ ಏಳು ಗಂಟೆಯ ವೇಳೆಗೆ ಸ್ವಯಂ ಚಾಲಿತ ಗನ್‌ಗಳು ಹಾಗೂ ಗ್ರೆನೇಡ್‌ಗಳಿಂದ ಸಜ್ಜಿತರಾಗಿದ್ದ ಉಗ್ರರು ಬೊಮಾಕೊ ನಗರದ ಕೇಂದ್ರ ಭಾಗದಲ್ಲಿರುವ ಐಷಾರಾಮಿ ರ್ಯಾಡಿಸನ್ ಬ್ಲೂ ಹೊಟೇಲ್ ಮೇಲೆ ದಾಳಿ ನಡೆಸಿದ್ದರು.

ರ್ಯಾಡಿಸನ್ ಹೊಟೇಲ್‌ನಲ್ಲಿದ್ದ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಲಾಗಿದ್ದು, ಇಬ್ಬರು ಉಗ್ರರನ್ನು ಹತ್ಯೆಗೈದಿರುವುದಾಗಿ ಮಾಲಿಯ ಭದ್ರತಾ ಸಚಿವ ಸಲೀಫ್ ಟ್ರವೊರ್ ತಿಳಿಸಿದ್ದ್ಟಾರೆ. ಒತ್ತೆಯಾಳುಗಳ ಬಂಧಮುಕ್ತಿ ಕಾರ್ಯಾಚರಣೆಯಲ್ಲಿ ಅಮೆರಿಕ ಹಾಗೂ ಫ್ರೆಂಚ್ ಯೋಧರು, ಮಾಲಿಯ ವಿಶೇಷ ಪಡೆಗಳಿಗೆ ಸಹಕರಿಸಿದ್ದವೆಂದು ಅವರು ಹೇಳಿದ್ದಾರೆ. ಉಗ್ರರ ವಶದಲ್ಲಿದ್ದ ಒತ್ತೆಯಾಳುಗಳಲ್ಲಿ 30 ಮಂದಿ ಹೊಟೇಲ್‌ನ ಉದ್ಯೋಗಿಗಳಾಗಿದ್ದಾರೆ. ಈ ಹೊಟೇಲ್ ಅಮೆರಿಕ ಮೂಲದ ರೆಝಿಡೊರ್ ಉದ್ಯಮ ಸಮೂಹಕ್ಕೆ ಸೇರಿದುದಾಗಿದೆ. ಹೊಟೇಲ್‌ನಲ್ಲಿ ಫ್ರೆಂಚ್, ಅಮೆರಿಕ ದೇಶಗಳ ನಾಗರಿಕರೂ ಇದ್ದುದಾಗಿ ತಿಳಿದುಬಂದಿದೆ.

ಈ ಮಧ್ಯೆ ಮಾಲಿಯಲ್ಲಿರುವ ಅಮೆರಿಕ ಹಾಗೂ ಫ್ರೆಂಚ್ ರಾಯಭಾರ ಕಚೇರಿಗಳು ದಾಳಿ ಭೀತಿಯ ಹಿನ್ನೆಲೆಯಲ್ಲಿ ಬೊಮಾಕೊದಲ್ಲಿರುವ ತಮ್ಮ ಪ್ರಜೆಗಳಿಗೆ ಸುರಕ್ಷಿತ ತಾಣಗಳಲ್ಲಿ ಆಶ್ರಯ ಪಡೆದುಕೊಳ್ಳುವಂತೆ ಸೂಚನೆ ನೀಡಿವೆ.

ಮಾಲಿ ಬಂಡುಕೋರರ ಕೃತ್ಯ?
ಅಲ್‌ಖಾಯಿದಗೆ ನಿಷ್ಠರಾದ ಮಾಲಿಯ ಬಂಡುಕೋರರ ಗುಂಪು ‘ಅಲ್‌ವೌರಬಿತೊನ್’ ಈ ದಾಳಿಯ ಹೊಣೆ ಹೊತ್ತಿದೆ. ಮಾಲಿಯಲ್ಲಿ 2012ರಲ್ಲಿ ನಡೆದ ಸೇನಾ ಬಂಡಾಯದ ಬಳಿಕ ಮಾಲಿ ಸರಕಾರ ಪತನಗೊಂಡಾಗ, ಬಂಡುಕೋರ ಉಗ್ರರು ಉತ್ತರ ಮಾಲಿಯ ಮೇಲೆ ನಿಯಂತ್ರಣ ಸಾಧಿಸಿದ್ದರು. 2013ರಲ್ಲಿ ಫ್ರೆಂಚ್ ನೇತೃತ್ವದ ಸೇನಾ ಕಾರ್ಯಾಚರಣೆಯಲ್ಲಿ ಉಗ್ರಗಾಮಿಗಳನ್ನು ಉತ್ತರ ಮಾಲಿಯ ನಗರಗಳು ಹಾಗೂ ಪಟ್ಟಣಗಳಿಂದ ಹೊರ ದಬ್ಬಲಾಗಿತ್ತು. ಆ ಬಳಿಕ ಉಗ್ರರು ದಕ್ಷಿಣ ಮಾಲಿಯ ಮೇಲೆ ತಮ್ಮ ದಾಳಿಗಳನ್ನು ತೀವ್ರಗೊಳಿಸಿದ್ದಾರೆ. ದಕ್ಷಿಣ ಮಾಲಿಯಲ್ಲಿರುವ ಬೊಮಾಕೊ ನಗರದಲ್ಲಿ ಮಾರ್ಚ್‌ನಲ್ಲಿ ಮುಸುಕುಧಾರಿ ಉಗ್ರರು ವಿದೇಶಿ ಪ್ರವಾಸಿಗರು ಅಧಿಕ ಸಂಖ್ಯೆಯಲ್ಲಿದ್ದ ರೆಸ್ಟಾರೆಂಟೊಂದರ ಮೇಲೆ ದಾಳಿ ನಡೆಸಿ ಐವರನ್ನು ಹತ್ಯೆಗೈದಿದ್ದರು. ಕಳೆದ ಜೂನ್‌ನಲ್ಲಿ ತುವಾರೆಗ್ ಬಂಡುಕೋರರು ಹಾಗೂ ಸರಕಾರಿ ಪರ ಸಶಸ್ತ್ರ ಪಡೆಗಳ ನಡುವೆ ಶಾಂತಿ ಒಪ್ಪಂದ ಏರ್ಪಟ್ಟ ಬಳಿಕವೂ ಬಂಡುಕೋರರು ಮಾಲಿಯ ವಿವಿಧೆಡೆ ತಮ್ಮ ದಾಳಿಗಳನ್ನು ಮುಂದುವರಿಸಿದ್ದಾರೆ.

ಭಾರತೀಯರೆಲ್ಲರೂ ಸುರಕ್ಷಿತ
ಬೊಮಾಕೊ: ಮಾಲಿಯ ರಾಜಧಾನಿ ಬೊಮಾಕೊದ ರ್ಯಾಡಿಸನ್ ಬ್ಲೂ ಹೊಟೇಲ್‌ನಲ್ಲಿ ಉಗ್ರರ ಒತ್ತೆಸೆರೆಯಲ್ಲಿದ್ದ ಎಲ್ಲ 20 ಮಂದಿ ಭಾರತೀಯರನ್ನು ಸುರಕ್ಷಿತವಾಗಿ ತೆರವುಗೊಳಿಸಲಾಗಿದೆಯೆಂದು ಅಧಿಕೃತ ಮೂಲಗಳು ತಿಳಿಸಿವೆ. ವಿಶ್ವಸಂಸ್ಥೆ, ಮಾಲಿ ಹಾಗೂ ಫ್ರೆಂಚ್ ಭದ್ರತಾಪಡೆಗಳು ಹೊಟೇಲ್‌ನೊಳಗೆ ನಡೆಸಿದ ಜಂಟಿ ಕಾರ್ಯಾ ಚರಣೆಯಲ್ಲಿ ಒತ್ತೆಯಾಳುಗಳಾಗಿದ್ದ ಭಾರತೀಯರನ್ನು ತೆರವುಗೊಳಿಸಲಾ ಯಿತು. ಈ ಎಲ್ಲ ಭಾರತೀಯರು ದುಬೈ ಮೂಲದ ಕಂಪೆನಿಯೊಂದರ ಉದ್ಯೋಗಿಗಳಾಗಿದ್ದು, ಅವರು ರ್ಯಾಡಿಸನ್ ಹೊಟೇಲ್‌ನಲ್ಲಿ ಖಾಯಂ ವಾಸ್ತವ್ಯವಿದ್ದಾರೆಂದು ಅವರು ತಿಳಿಸಿದ್ದಾರೆ.

ಇದಕ್ಕೂ ಮೊದಲು ವಿದೇಶಾಂಗ ಸಚಿವಾಲಯವು ರ್ಯಾಡಿಸನ್ ಹೊಟೇಲ್‌ನಲ್ಲಿ ಉಗ್ರರ ಒತ್ತೆಸೆರೆಯಲ್ಲಿರುವ 170 ಮಂದಿಯಲ್ಲಿ 20 ಮಂದಿ ಭಾರತೀಯರಿದ್ದಾರೆಂದು ಹೇಳಿತ್ತು.

Write A Comment