ರಾಷ್ಟ್ರೀಯ

5ನೆ ಬಾರಿ ಮುಖ್ಯಮಂತ್ರಿಯಾಗಿ ನಿತೀಶ್ ಪ್ರಮಾಣ: ಮಹಾಮೈತ್ರಿ ಸರಕಾರ ಅಸ್ತಿತ್ವಕ್ಕೆ 28 ಮಂದಿ ಸಚಿವರ ಪ್ರಮಾಣ

Pinterest LinkedIn Tumblr

Nithish_ಪಾಟ್ನಾ, ನ.20: ಬಿಹಾರದ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಶುಕ್ರವಾರ ಪ್ರಮಾಣವಚನ ಸ್ವೀಕರಿಸಿದ್ದು, ಆರ್‌ಜೆಡಿ, ಜೆಡಿಯು ಹಾಗೂ ಕಾಂಗ್ರೆಸ್ ಪಕ್ಷಗಳನ್ನೊಳಗೊಂಡ ಮಹಾಮೈತ್ರಿಕೂಟ ಸರಕಾರ ಅಸ್ತಿತ್ವಕ್ಕೆ ಬಂದಿದೆ. ನಿತೀಶ್ ಸಂಪುಟದ ಸಚಿವರಾಗಿ ಆರ್‌ಜೆಡಿ ವರಿಷ್ಠ ಲಾಲು ಪ್ರಸಾದ್ ಅವರ ಇಬ್ಬರು ಪುತ್ರರಾದ ತೇಜಸ್ವಿ ಹಾಗೂ ತೇಜ್‌ಪ್ರತಾಪ್ ಸೇರಿದಂತೆ 28 ಮಂದಿ ಪ್ರಮಾಣವಚನ ಸ್ವೀಕರಿಸಿದರು.

ಪಾಟ್ನಾದ ಗಾಂಧಿ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಭವ್ಯ ಸಮಾರಂಭದಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಬಿಜೆಪಿಯೇತರ ಪಕ್ಷಗಳ ಹಲವಾರು ಉನ್ನತ ನಾಯಕರು ಭಾಗವಹಿಸಿದ್ದರು.
ನಿತೀಶ್ ಕುಮಾರ್ ಅವರು ಬಿಹಾರದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿರುವುದು ಇದು ಐದನೆ ಬಾರಿಯಾಗಿದೆ. ನಿತೀಶ್ ಸಂಪುಟದಲ್ಲಿ ಲಾಲು ಪ್ರಸಾದ್ ಅವರ ಕಿರಿಯ ಪುತ್ರ ತೇಜಸ್ವಿ ಯಾದವ್‌ಗೆ ಉಪಮುಖ್ಯಮಂತ್ರಿ ಹುದ್ದೆಯನ್ನು ನೀಡಲಾಗಿದೆ.
ನಿತೀಶ್ ಜೊತೆ ಆರ್‌ಜೆಡಿ ಹಾಗೂ ಜೆಡಿಯುನ ತಲಾ 12 ಮಂದಿ ಹಾಗೂ ಕಾಂಗ್ರೆಸ್‌ನ ನಾಲ್ವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ರಾಜ್ಯಪಾಲ ರಾಮ್‌ನಾಥ್ ಕೋವಿಂದ್ ನೂತನ ಸಂಪುಟದ ಸದಸ್ಯರಿಗೆ ಪ್ರಮಾಣವಚನ ಬೋಧಿಸಿದರು.
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‌ಗಾಂಧಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಪ.ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಕಾಂಗ್ರೆಸ್ ಆಡಳಿತದ ರಾಜ್ಯಗಳ ಕೆಲವು ಮುಖ್ಯಮಂತ್ರಿಗಳು ಪ್ರಮಾಣವಚನ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಪ್ರಧಾನಿ ನರೇಂದ್ರ ಮೋದಿಯವರ ಪ್ರತಿನಿಧಿಯಾಗಿ ಕೇಂದ್ರ ನಗರಾಭಿವೃದ್ಧಿ ಸಚಿವ ಎಂ.ವೆಂಕಯ್ಯ ನಾಯ್ಡು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಎಡಪಕ್ಷಗಳ ನಾಯಕರಾದ ಸಿಪಿಎಂನ ಸೀತಾರಾಮ ಯೆಚೂರಿ ಹಾಗೂ ಸಿಪಿಐನ ಡಿ.ರಾಜಾ ಕೂಡಾ ಭಾಗವಹಿಸಿದ್ದರು.
ನಿತೀಶ್ ಅವರ ನಿರ್ಗಮನ ಸಂಪುಟದಲ್ಲಿ ಸಚಿವರಾಗಿದ್ದ ಜೆಡಿಯುನ ರಾಜೀವ್‌ರಂಜನ್‌ಸಿಂಗ್ ಲಲ್ಲನ್, ಬ್ರಿಜೇಂದ್ರ ಪ್ರಸಾದ್ ಯಾದವ್, ಶ್ರಾವಣ್ ಕುಮಾರ್, ಜಯ್‌ಕುಮಾರ್ ಸಿಂಗ್‌ರಿಗೂ ನೂತನ ಸಂಪುಟದಲ್ಲಿ ಸ್ಥಾನ ದೊರೆತಿದೆ. ಶೈಲೇಶ್ ಕುಮಾರ್, ಕುಮಾರಿ ಮಂಜು ವರ್ಮಾ, ಮದನ್ ಸಾಹಿನಿ ಹಾಗೂ ಕಪಿಲ್‌ದೇವ್ ಕಾಮತ್, ಮಹೇಶ್ವರ್ ಹಝಾರಿ, ಕೃಷ್ಣ ನಂದನ್ ಪ್ರಸಾದ್ ವರ್ಮಾ, ಸಂತೋಷ್ ನಿರಾಲಾ ಹಾಗೂ ಖುರ್ಷಿದ್ ಯಾನೆ ಫಿರೋಝ್ ಅಹ್ಮದ್ ಪ್ರಮಾಣವಚನ ಸ್ವೀಕರಿಸಿದ ಇತರ ಜೆಡಿಯು ಶಾಸಕರಾಗಿದ್ದಾರೆ. ಲಾಲು ಪುತ್ರರ ಹೊರತಾಗಿ ಆರ್‌ಜೆಡಿ ಪಕ್ಷದಿಂದ ಅಬ್ದುಲ್ ಬಾರಿ ಸಿದ್ದೀಕಿ, ಅಬ್ದುಲ್ ಗಫೂರ್, ವಿಜಯ್ ಪ್ರಕಾಶ್, ಚಂದ್ರಿಕಾ ರಾಯ್,ಅಲೋಕ್‌ಕುಮಾರ್ ಮೆಹ್ತಾ, ರಾಮ್ ವಿಚಾರ್ ರಾಯ್, ಶಿಯೊ ಚಂದರ್ ರಾಮ್, ಮುನೇಶ್ವರ್ ಚೌಧುರಿ, ಚಂದ್ರಶೇಖರ್ ಜಾರ್ ಹಾಗೂ ಅನಿತಾ ದೇವಿ ಸಚಿವರಾಗಿ ಪ್ರಮಾಣ ಸ್ವೀಕರಿಸಿದರು.
ಅನಿತಾದೇವಿ ಅವರು ನಿತೀಶ್ ಸಂಪುಟದಲ್ಲಿ ಸ್ಥಾನ ಪಡೆದಿರುವ ಏಕೈಕ ಮಹಿಳೆಯಾಗಿದ್ದಾರೆ. ಕಾಂಗ್ರೆಸ್‌ನಿಂದ ಅಶೋಕ್‌ಚೌಧುರಿ, ಮದನ್ ಮೋಹನ್ ಜಾ, ಅಬ್ದುಲ್ ಜಲೀಲ್ ಮಸ್ತಾನ್ ಹಾಗೂ ಅವಧೇಶ್ ಕುಮಾರ್‌ಸಿಂಗ್ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಆರ್‌ಜೆಡಿ 80, ಜೆಡಿಯು 71 ಹಾಗೂ ಕಾಂಗ್ರೆಸ್ 27 ಸ್ಥಾನಗಳಲ್ಲಿ ಜಯಗಳಿಸಿತ್ತು. 243 ಸದಸ್ಯ ಬಲದ ಬಿಹಾರ ವಿಧಾನಸಭೆಯಲ್ಲಿ ಈ ಮೂರು ಪಕ್ಷಗಳ ಒಟ್ಟಾಗಿ 178 ಸ್ಥಾನಗಳನ್ನು ಹೊಂದಿವೆ.

ಲಾಲು ಪುತ್ರ ತೇಜಸ್ವಿಗೆ ಡಿಸಿಎಂ ಪಟ್ಟ
ನಿತೀಶ್ ಕುಮಾರ್ ಸಂಪುಟದಲ್ಲಿ ಲಾಲು ಪ್ರಸಾದ್ ಅವರ ಕಿರಿಯ ಪುತ್ರ ತೇಜಸ್ವಿ ಯಾದವ್ ಉಪ ಮುಖ್ಯಮಂತ್ರಿಯಾಗಿ ನೇಮಕ ಗೊಂಡಿದ್ದಾರೆ. 26 ವರ್ಷದ ತೇಜಸ್ವಿ ಯಾದವ್ ಅವರಿಗೆ ನಿತೀಶ್ ಸಂಪುಟದಲ್ಲಿ ಮೂರು ಖಾತೆಗಳನ್ನು ನೀಡಲಾಗಿದೆಯೆಂದು ತಿಳಿದು ಬಂದಿದೆ. ಲಾಲು ಅವರ ಹಿರಿಯ ಪುತ್ರ ತೇಜ್‌ಪ್ರತಾಪ್ ಯಾದವ್‌ರಿಗೂ ಆರೋಗ್ಯ ಸೇರಿದಂತೆ ಮೂರು ಖಾತೆಗಳನ್ನು ನೀಡಲಾಗುವುದೆಂದು ಅಧಿಕೃತ ಮೂಲಗಳು ತಿಳಿಸಿವೆ.

Write A Comment