ಅಂತರಾಷ್ಟ್ರೀಯ

ಕೆಂಪು ಹಾಸಷ್ಟೇ ಅಲ್ಲ, ಪ್ರಧಾನಿ ಮೋದಿಗೆ ಕೆಂಪು ಬಾವುಟ ಹಾರಿಸಿ: ಅಮ್ನೆಸ್ಟಿ

Pinterest LinkedIn Tumblr

Modi-unwelcome

ಲಂಡನ್: ಬ್ರಿಟನ್ ಗೆ ಭೇಟಿ ನೀಡಿರುವ ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಕೆಂಪು ಹಾಸಿನ ಸ್ವಾಗತವಷ್ಟೇ ಅಲ್ಲ, ಮಾನವ ಹಕ್ಕುಗಳ ಬಗ್ಗೆ ಕೆಂಪು ಬಾವುಟ ಹಾರಿಸಿ ಎಂದು ಅಮ್ನೆಸ್ಟಿ ಇಂಟರ್ನ್ಯಾಶನಲ್ ಬ್ರಿಟಿಶ್ ಪ್ರಧಾನಿ ಡೇವಿಡ್ ಕೆಮರೂನ್ ಅವರಿಗೆ ಆಗ್ರಹಿಸಿದೆ.

“ಎನ್ ಜಿ ಒಗಳು ಮತ್ತು ಸಾಮಾಜಿಕ ಕಾರ್ಯಕರ್ತರು ತಮ್ಮ ಕೆಲಸಗಳನ್ನು ಮಾಡಲು ಒತ್ತಡದಲ್ಲಿದ್ದಾರೆ. ದೇಶ ವಿರೋಧಿ ಪಟ್ಟ ಕಟ್ಟಿ ಅವರ ನಿಧಿ ಸಂಗ್ರಹಕ್ಕೆ ಕೊಕ್ಕೆ ಹಾಕಿ ಅವರ ವಿರುದ್ಧ ಸುಳ್ಳು ಪ್ರಚಾರ ನಡೆಸಲಾಗುತ್ತಿದೆ” ಎಂದು ಅಮ್ನೆಸ್ಟಿ ಯು.ಕೆಯ ನೀತಿ ಸಮಿತಿಯ ಅಧ್ಯಕ್ಷ ಆಲನ್ ಹೊಗ್ರಾಥ್ ದೂರಿದ್ದಾರೆ.

“ಮತ್ತೊಬ್ಬ ವಿಶ್ವ ನಾಯಕನಿಗೆ ಕೆಂಪು ಹಾಸಿನ ಸ್ವಾಗತವನ್ನಷ್ಟೇ ನೀಡದೆ ಕೆಮರೂನ್ ಅವರು ಮಾನವ ಹಕ್ಕುಗಳ ಬಗೆಗೆ ಕೆಂಪು ಬಾವುಟವನ್ನು ಹಾರಿಸಬೇಕಿದೆ” ಎಂದು ಅವರು ಹೇಳಿದ್ದಾರೆ.

ವಿದೇಶಿ ನಿಧಿಯನ್ನು ಪಡೆಯುವುದರಿಂದ ತಡೆಯಲು ಸುಮಾರು ೧೦೦೦೦ ಮಾನವ ಹಕ್ಕುಗಳ ಸಂಸ್ಥೆಗಳ ನೊಂದಣಿಯನ್ನು ಕಳೆದ ವರ್ಷ ರದ್ದು ಮಾಡಿರುವುದನ್ನು ತಿಳಿಸಿರುವ ಅವರು ಕಳೆದ ವಾರವಷ್ಟೇ ಗ್ರೀನ್ ಪೀಸ್ ಎನ್ ಜಿ ಒದ ನೊಂದಣಿಯನ್ನು ರದ್ದು ಮಾಡಿರುವುದಾಗಿ ಹೇಳಿದ್ದಾರೆ.

“ಮೋದಿ ವಿರುದ್ಧ ಭಾರತದಲ್ಲಿ ಟೀಕೆಗೆ ಅವಕಾಶವಿಲ್ಲ ಆದುದರಿಂದ ಅವರ ಪ್ರವಾಸದ ವೇಳೆಯಲ್ಲಿ ಕೆಮರೂನ್ ಅವರು ಮಾನವ ಹಕ್ಕುಗಳ ಬಗ್ಗೆ ಮಾತನಾಡುವುದು ಅತಿ ಅವಶ್ಯಕ. ಟೀಕಿಸುವವರನ್ನು ಭಾರತದಲ್ಲಿ ಹತ್ತಿಕ್ಕಲಾಗುತ್ತಿದೆ” ಎಂದು ಅವರು ತಿಳಿಸಿದ್ದಾರೆ.

ಮೋದಿ ಅವರ ಲಂಡನ್ ಭೇಟಿ ವೇಳೆಯಲ್ಲಿ ಮುನ್ನೂರಕ್ಕೂ ಹೆಚ್ಚು ಜನ ಬೀದಿಗಿಳಿದು ಪ್ರತಿಭಟಿಸಿದ್ದ ಸಮಯದಲ್ಲೇ ಅಮ್ನೆಸ್ಟಿ ಈ ಹೇಳಿಕೆ ನೀಡಿರುವುದು ಮಹತ್ವ ಪಡೆದುಕೊಂಡಿದೆ.

Write A Comment